Advertisement

ಸಿದ್ದರಾಮಯ್ಯ ಇಳಿಯಲ್ಲ, ಯಡಿಯೂರಪ್ಪ ಸಿಎಂ ಆಗಲ್ಲ

12:33 PM Mar 15, 2017 | |

ನಂಜನಗೂಡು: “ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯಿಂದ ಇಳಿಯುವುದಿಲ್ಲ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ’… ಇದು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರ ಸ್ಪಷ್ಟ ಪ್ರತಿಪಾದನೆ.

Advertisement

ಮಂಗಳವಾರ ನಂಜನಗೂಡು ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ತಮ್ಮ ಪುತ್ರ ಸುನೀಲ್‌ ಬೋಸ್‌ರೊಡನೆ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ ಮಹದೇವಪ್ಪ ಕಂತೆ ಮಹದೇಶ್ವರನ ಸನ್ನಿಧಿಯಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.

 4 ವರ್ಷಗಳ  ಬರಗಾಲದ ನಡುವೆಯೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿ, ಜನಪರ ಕಾರ್ಯಕ್ರಮಗಳನ್ನು ನೀಡಿದ್ದು, ಅಭಿವೃದ್ಧಿಯಲ್ಲಿ ರಾಜ್ಯವನ್ನು 9ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ತಂದ ಕೀರ್ತಿ ಮುಖ್ಯಮಂತ್ರಿಗಳಾಗಿದ್ದಾರೆ ಎಂದರು.

ಮುಂದೆಯೂ ಸಿದ್ದರಾಮಯ್ಯನವರೇ ಸಿಎಂ: ಪ್ರಾಮಾಣಿಕವಾಗಿ ಜಾತ್ಯತೀತವಾಗಿ ಜನಪರ ಕೆಲಸ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ತಾವೇ ಮುಖ್ಯಮಂತ್ರಿಗಾಗುವುದರಿಂದ ಬಿಜೆಪಿ ನಾಯಕ ಯಡಿಯೂರಪ್ಪನವರ ಸಿಎಂ ಗಾದಿ ಏರುವ ಕನಸು ನನಸಾಗಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

ನಂಜನಗೂಡು ತಾಲೂಕಿಗೆ ಮುಖ್ಯಮಂತ್ರಿಗಳ ಇಚ್ಚಾಶಕ್ತಿಯಿಂದ 500 ಕೋಟಿ ರೂ. ಅನುದಾನ ಬಂದಿದ್ದು, ಸಮಾರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಉಪಚುನಾವಣೆ ನಂತರ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ನಡೆದು ನಂಜನಗೂಡು ಮೈಸೂರು ನಗರದ ಉಪ ನಗರವಾಗಿ ಹೊರ ಹೊಮ್ಮಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಹದೇವಪ್ಪ ಸಭೆಯಲ್ಲಿ ಘೋಷಿಸಿದರು.

Advertisement

ಅಭಿವೃದ್ಧಿ ಸೊಗಡನ್ನು ಅರಿತವರನ್ನು ಮಾತ್ರ ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, ಕ್ಷೇತ್ರವನ್ನು ಅಭಿವೃದ್ಧಿರಹಿತವಾಗಿಸಿದ ಮಹನೀಯರ ಕುರಿತು ಯಾವುದೇ ಅನುಕಂಪ ಬೇಡ ಎಂದು ಅವರು ಕರೆ ನೀಡಿದರು.

ನಾನು ಟಿಕೇಟ್‌ ಕೇಳಿಯೇ ಇಲ್ಲಾ: ಸಚಿವ ಎಚ್‌.ಸಿ.ಮಹದೇವಪ್ಪರವರ ಪುತ್ರ ಸುನೀಲ್‌ ಬೋಸ್‌  ಮಾತನಾಡಿ, ತಾವು ಎಂದೂ ಟಿಕೆಟ್‌ ಕೇಳಿರಲಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ತಾವು ಮುಂದೆಯೂ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಳ್ಳುವುದಾಗಿ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮಾತನಾಡಿ,ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಚಿವ ಎಚ್‌.ಸಿ.ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ್‌ರವರ ಇಚ್ಚಾಶಕ್ತಿಯಿಂದ ಕೋಟಿ ಕೋಟಿ ಹಣದಿಂದ ಅಭಿವೃದ್ಧಿ ಪರ್ವ ನಡೆಯುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷವನ್ನು ತಾಲೂಕಿನ ಜನತೆ ಬೆಂಬಲಿಸಬೇಕು. ಸಿದ್ದರಾಮಯ್ಯ, ಎಚ್‌.ಸಿ.ಮಹದೇವಪ್ಪ,  ಸಂಸದ ಆರ್‌. ಧ್ರುವನಾರಾಯಣರ ಬೆಂಬಲದಿಂದ ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದರು.

ತಾಪಂ ಉಪಾಧ್ಯಕ್ಷ ಗೋವಿಂದರಾಜನ್‌,  ಮಡುವಿಹಳ್ಳಿ ಶಂಕರಪ್ಪ, ಚಂದ್ರವಾಡಿ ನಾಗಣ್ಣ, ಹಾಡ್ಯದ ಶಿವಣ್ಣ, ಇಂದನ್‌ ಬಾಬು, ಕೆಪಿಸಿಸಿ ಸದಸ್ಯ ಬಸವರಾಜು, ಎಪಿಎಂಸಿ ಅಧ್ಯಕ್ಷ ಕಾಗಲವಾಡಿ ಮಾದಪ್ಪ, ತಾಪಂ ಸದಸ್ಯ ಎಚ್‌.ಸಿ.ಮೂಗಶಟ್ಟಿ, ಮಾಜಿ ಜಿಪಂ ಸದಸ್ಯರಾದ ಕೆ.ಮಾರುತಿ, ಚೋಳರಾಜು, ಕೆ.ಬಿ.ಸ್ವಾಮಿ, ಕುರಿಹುಂಡಿ ಮಹೇಶ್‌, ದೇಬೂರು ಸಿದ್ದಲಿಂಗಪ್ಪ, ರಾಂಪುರ ಪಟೇಲ್‌ ಮಹದೇವಪ್ಪ, ವಳಗೆರೆ ಶಿವುಮಲ್ಲು, ಚಾಮರಾಜು, ಕೆ.ಬಿ.ಸ್ವಾಮಿ, ಕೆ.ಚಿನ್ನಸ್ವಾಮಿ, ಕೆ.ಪಿ.ಮಲ್ಲಿಕಾರ್ಜುನಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next