ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಅವತ್ತು ಗಂಧರ್ವ ಲೋಕ ಧರೆಗಿಳಿದಿತ್ತು. ಸಂಗೀತದ ರಾಜ್ಯೋತ್ಸವ. ಅಲ್ಲಿದ್ದವರೆಲ್ಲ ಸಂಗೀತದ ಕಾವಾಡಿಗಳು. ಸಂಗೀತದ ಸೇನಾನಿಗಳು. ಸಂಗೀತದ ಮಂತ್ರಿಗಳು. ಇವರೆಲ್ಲರಿಗೂ ಸಂಗೀತ ರಾಜರಂತೆ ಇದ್ದಿದ್ದು, ಇಳಯರಾಜ…
ನನ್ನ ಜೀವ ನೀನು, ನನ್ನ ಬಾಳ ಜ್ಯೋತಿ ನೀನು…- ಭಾವ ದುಂಬಿಯಾಗಿ ಎಸ್ಪಿಬಿ ಈ ಹಾಡನ್ನು ಹಾಡಿ, ಮುಗಿಸಿದ್ದಷ್ಟೇ. ಇಳಯರಾಜ ನಗುತ್ತಾ, “ನನ್ ಜೀವ ನೀನು ಅಂತ ಈಗ್ಲಾದ್ರೂ ಗೊತ್ತಾಯ್ತಲ್ಲ ನಿಂಗೆ, ಅದೇ ನನ್ ಪುಣ್ಯ…’ ಎಂದು ತಮಾಷೆ ತೇಲಿಸಿದರು. ನಾಲ್ಕು ದಶಕ ದಾಟಿದ ಸ್ನೇಹ. ಇಬ್ಬರ ಕಾಂಬಿನೇಷನ್ನಿನಲ್ಲಿ ಸಾವಿರಾರು ಹಾಡುಗಳು, ಕೇಳುಗರ ಎದೆಯಲ್ಲಿ ಗೂಡು ಕಟ್ಟಿವೆ. ಮಕ್ಕಳು ಬುಗುರಿ ಆಡಿದಂತೆ, ವೇದಿಕೆ ಮೇಲೂ ಪದ ಬುಗುರಿ, ಸ್ವರ ಬುಗುರಿ ಆಡುವ ಧೈರ್ಯ ಇಬ್ಬರಿಗೂ ನಾಜೂಕಾಗಿ ಒಲಿದಿದೆ. ಏಕವಚನದ ಸಲುಗೆ. ಅದನ್ನು ನೋಡುವುದೇ ಒಂದು ಖುಷಿ.
ಬೆಂಗಳೂರಿನ ವಿಮಾನ ನಿಲ್ದಾಣದ ಆವರಣದಲ್ಲಿ ಅವತ್ತು ಗಂಧರ್ವ ಲೋಕ ಧರೆಗಿಳಿದಿತ್ತು. ಸಂಗೀತದ ರಾಜ್ಯೋತ್ಸವ. ಅಲ್ಲಿದ್ದವರೆಲ್ಲ ಸಂಗೀತದ ಕಾವಾಡಿಗಳು. ಸಂಗೀತದ ಸೇನಾನಿಗಳು. ಸಂಗೀತದ ಮಂತ್ರಿಗಳು. ಇವರೆಲ್ಲರಿಗೂ ಸಂಗೀತ ರಾಜರಂತೆ ಇದ್ದಿದ್ದು, ಇಳಯರಾಜ. ಈ ಗಾರುಡಿಗನ ಶಿಸ್ತನ್ನು ಮತ್ತೆ ಕಂಡೆ. ಸ್ವರ ನುಡಿಸುವವರು ಒಂದು ಸ್ವರ ಆಚೆಈಚೆ ನುಡಿಸಿದರೂ, ಅದನ್ನು ಮತ್ತೂಮ್ಮೆ ನುಡಿಸಲು ಹೇಳುತ್ತಿದ್ದರು. ಹಾಡುವವರೂ ಒಂದು ಸ್ವರ ಏರಿಸಿ, ತಗ್ಗಿಸಿದರೂ, ತಕ್ಷಣ ಗಮನಿಸಿ, ಮತ್ತೆ ಹಾಡಿಸುತ್ತಿದ್ದರು ಇಳಯರಾಜ. ಎಸ್ಪಿಬಿಯನ್ನೂ ಅವರು ಬಿಡಲಿಲ್ಲ. ಪ್ರೇಕ್ಷಕರು ಅದೆಷ್ಟೇ ಸಾವಿರವಿರಲಿ, ಇಳಯರಾಜ ಅವರಿಗೆ ಸಂಗೀತದ ಅಚ್ಚುಕಟ್ಟುತನ ಮುಖ್ಯ.
ಈ ಕಾರ್ಯಕ್ರಮದಲ್ಲಿ ಮೂರು ಹಾಡಿಗಾಗಿ, ನಾನು ಇಳಯರಾಜ ಅವರ ಪಕ್ಕ ನಿಂತಿದ್ದೆ. “ನಮ್ಮೂರ ಮಂದಾರ ಹೂವೆ’ ಚಿತ್ರದ “ಹಳ್ಳಿà… ಲಾವಣಿಯಲ್ಲಿ ಲಾಲಿ…’ ಹಾಡುವಾಗ, ಅವರು ನನ್ನೊಳಗಿನ ಹಳೇನೆನಪಿಗೆ ಗಾಳ ಹಾಕಿದರು. ನಾನು ಅವರನ್ನು ಮೊದಲು ಭೇಟಿಯಾಗಿದ್ದು, 23 ವರುಷಗಳ ಹಿಂದೆ. “ನಮ್ಮೂರ ಮಂದಾರ ಹೂವೆ’ ಚಿತ್ರಕ್ಕೆ ಒಂದು ಹಾಡು ಬರೀ ಎಂದು ಕರೆದವರು, ನಾನು ಬರೆದ ಎರಡು ಸಾಲನ್ನು ನೋಡಿ, 3 ಹಾಡು ಬರೆಯಲು ಅವಕಾಶ ಕೊಟ್ಟಿದ್ದರು. “ಹೇಳೇ ಕೋಗಿಲೆ ಇಂಪಾಗಲಾ…’, “ಹಳ್ಳಿà… ಲಾವಣಿಯಲ್ಲಿ ಲಾಲಿ…’, “ಮುತ್ತು ಮುತ್ತು ನೀರ ಹನಿಯ…’ ಹಾಡುಗಳ ಹುಟ್ಟು ಹೀಗಾಯಿತು.
ಒಂದು ಕೋರಸ್ ಕಂಪೋಸ್ ಮಾಡುವ ಸಂದರ್ಭ. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿದ್ದೆವು. “ತನನನ ತಕಿಟ ತಕಿಟ ಧೀ, ತನನನ ತಕಿಟ ತಕಿಟ ಧೀ…- ಇದಕ್ಕೆ ಒಂದು ಲೈನ್ ಬರಿ’ ಎಂದು ಇಳಯರಾಜ ಸ್ಥಳದಲ್ಲೇ ಸೂಚಿಸಿದ್ದರು. “ಅರೆರೆ ತುಂತುರ ತುಂತುರ ಋತು’ ಅಂದೆ. “ಸೌಂಡಿಂಗ್ ಚೆನ್ನಾಗಿದೆ’ ಎನ್ನುತ್ತಾ, ಕಣ್ಣರಳಿಸಿದ್ದರು. ನಾನು ಆಮೇಲೆ, “ಅದಕ್ಕೆ ಒಳ್ಳೆಯ ಮೀನಿಂಗ್ ಇದೆ ಸರ್. ಅರೆರೆ ತುಂತುರು ತಂತು ಋತು’ ಅಂದೆ! ಅದನ್ನು ಕೇಳಿ ಖುಷಿಪಟ್ಟರು. ಅವರ ಕಂಪೋಸಿಂಗ್ ಅಂದ್ರೇನೇ ವಿಶೇಷ ವೈಬ್ರೇಷನ್! ಇಳಯರಾಜ- ಎಸ್ಪಿಬಿ ಇಬ್ಬರೂ, ಕಾರ್ಯಕ್ರಮಕ್ಕೆ ಎರಡು ದಿನವಿರುವಾಗಲೇ ಬೆಂಗಳೂರಿಗೆ ಬಂದಿದ್ದರು. 150 ಸಂಗೀತಗಾರರ ಮಧ್ಯದಲ್ಲಿ ಸಾಮಾನ್ಯರಂತೆ ಕುಳಿತು, ಅಭ್ಯಾಸ ಮಾಡಿದರು.
ಸಾವಿರಾರು ಹಾಡು ಕಂಪೋಸ್ ಮಾಡಿರಬಹುದು; ಸಾವಿರಾರು ಹಾಡು ಹಾಡಿರಬಹುದು; ಸಾವಿರಾರು ವೇದಿಕೆ ಹತ್ತಿರಬಹುದು. ಆದರೂ ಸಾವಿರದ ಒಂದನೇ ವೇದಿಕೆ ಹತ್ತಬೇಕು ಎಂದಾಗ, ಪೂರ್ವತಯಾರಿ ಎನ್ನುವುದು ಅವರ ಪಾಲಿಗೆ ತಪಸ್ಸು. ಅದೇ ಶ್ರದ್ಧೆ. ಇವರ ಪಫೆìಕ್ಷನ್‌ಗೆ ಇದೇ ಕಾರಣ. ಇಳಯರಾಜ ಅವರಿಗೀಗ ಎಪ್ಪತ್ತಾರು ವರುಷ. ಒಂದು ಸಲ ವೇದಿಕೆ ಹತ್ತಿದವರು, ನಾಲ್ಕು ತಾಸು ನಿಂತೇ ಇದ್ದ ತರುಣ. ಒಂದು ನಿಮಿಷವೂ ಕೂರಲಿಲ್ಲ. ಹಾರ್ಮೋನಿಯಂ ಮುಂದೆ ನಿಂತೇ ಇದ್ದರು. ಆ ಎನರ್ಜಿ ಎಲ್ಲಿಂದ ಬರೋದಿಕ್ಕೆ ಸಾಧ್ಯ? ಸಂಗೀತದಿಂದ, ಸ್ವರತಪಸ್ಸಿನಿಂದ ಮಾತ್ರ!
ಇಳಯರಾಜ ಅವರಿಗೀಗ ಎಪ್ಪತ್ತಾರು ವರುಷ. ಒಂದು ಸಲ ವೇದಿಕೆ ಹತ್ತಿದವರು, ನಾಲ್ಕು ತಾಸು ನಿಂತೇ ಇದ್ದ ತರುಣ. ಒಂದು ನಿಮಿಷವೂ ಕೂರಲಿಲ್ಲ…
* ಕೆ. ಕಲ್ಯಾಣ್, ಖ್ಯಾತ ಗೀತರಚನೆಕಾರ