ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ನಗರದ ಮೂಲಕ ಹಾದು ಹೋಗುವ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲಿಗಾಗಿ ಇಳಕಲ್ಲ ಜನ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಸಮಿತಿಯ ಪದಾಧಿಕಾರಿಗಳು ಬುಧವಾರ ಸಂಸದ ಪಿ.ಸಿ. ಗದ್ದಿಗೌಡರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು.
ಆಲಮಟ್ಟಿ- ಕೂಡಲಸಂಗಮ- ಹುನಗುಂದ- ಇಳಕಲ್- ಕೂಡ್ಲಿಗಿ- ಚಿತ್ರದುರ್ಗ, ಗದಗ- ನರೇಗಲ್- ಗಜೇಂದ್ರಗಡ- ಹನಮಸಾಗರ- ಇಳಕಲ್- ನಂದವಾಡಗಿ- ಹಟ್ಟಿ- ಕೃಷ್ಣಾ ನೂತನ ರೈಲು ಮಾರ್ಗಗಳನ್ನು 2021-22ನೇ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲಿ ಘೋಷಿಸಿ ಅಗತ್ಯ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯಿಂದ ಗದಗ- ಗಜೇಂದ್ರಗಡ- ಇಳಕಲ್- ವಾಡಿ ಮಾರ್ಗವು ಕೈತಪ್ಪಿ ಹೋಗಿದೆ. ಇದರಿಂದ ಗದಗ ಜಿಲ್ಲೆಯ ನರೇಗಲ್, ಗಜೇಂದ್ರಗಡ, ಕೊಪ್ಪಳ ಜಿಲ್ಲೆಯ ಹನಮಸಾಗರ, ಬಾಗಲಕೋಟೆಯ ಇಳಕಲ್, ಕಂದಗಲ್, ನಂದವಾಡಗಿ ಹಾಗೂ ಸುತ್ತಮುತ್ತಲಿನ 15ಲಕ್ಷಕ್ಕೂ ಹೆಚ್ಚು ಜನರು ರೈಲ್ವೆ ಪ್ರಯಾಣ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಗದಗ- ಇಳಕಲ್- ಹಟ್ಟಿ- ಕೃಷ್ಣಾ ಹಾಗೂ ಆಲಮಟ್ಟಿ- ಹುನಗುಂದ- ಇಳಕಲ್- ಚಿತ್ರದುರ್ಗ ನೂತನ ರೈಲು ಮಾರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇದಕ್ಕೆ ರೈಲ್ವೆ ಮಂಡಳಿಯ ಅನುಮೋದನೆ ಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸದರು ಈ ಭಾಗದ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕಾಮಗಾರಿಗಳ ಜಾರಿಗಾಗಿ ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವರ ಮನವೊಲಿಸಬೇಕು ಎಂದು ಸಮಿತಿ ಪ್ರಮುಖರು ಒತ್ತಾಯಿಸಿದರು.
ಇದನ್ನೂ ಓದಿ:ರಾಜಕಾರಣ ಎಲ್ಲಿಗೆ ಹೋಗಿ ನಿಂತಿದೆ..? ನನ್ನ ಕಾಪಾಡುವಲ್ಲಿ ಯಡಿಯೂರಪ್ಪ ವಿಫಲ: ವಿಶ್ವನಾಥ್ ಬೇಸರ
ಈ ಭಾಗದಲ್ಲಿ ಆಗಲೇಬೇಕಾದ ಯೋಜನೆಗಳು ಆಗಿಲ್ಲ ಎಂಬ ನೋವಿದೆ. ಇದೀಗ ಇಳಕಲ್ ಮೂಲಕ ಹಾದು ಹೋಗುವ ನೂತನ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿ ರೈಲ್ವೆ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಗದ್ದಿಗೌಡರ ಅವರು ತಿಳಿಸಿದರು. ಪ್ರಮುಖರಾದ ಎಂ.ವಿ. ಪಾಟೀಲ, ಕೇಶವ ಕಂದಿಕೊಂಡ, ನಾಗರಾಜ ಹೊಂಗಲ್, ಜಗದೀಶ ಸರಾಫ, ಮನೋಹರ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.