Advertisement
“ಇಳಕಲ್ ಸೀರೆ ಉಟ್ಕೊಂಡು, ಮೊಣಕಾಲ್‌ಗಂಟ ಎತ್ಕೊಂಡು…’ ಎನ್ನುವ ಹಾಡನ್ನು ಕೌರವನೇ ರೊಮ್ಯಾಂಟಿಕ್ ಆಗಿ ಹಾಡಬೇಕಿಲ್ಲ. ಯಾರೇ ಸುಂದರಿ ಆ ಸೀರೆ ಉಟ್ಟರೂ, ಹಾಗೊಂದು ಹಾಡು ಹೃದಯದೊಳಗೆ ಆರ್ಕೇಸ್ಟಾವನ್ನೇ ನಡೆಸುತ್ತೆ. ಇಳಕಲ್ಲ ಸೀರೆಯ ವೈಯ್ನಾರವೇ ಒಂದು ರಾಗಲಹರಿ. ಈ ಹಾಡೇನೋ ಶಾಶ್ವತವಾಗಿ ನಮ್ಮ ಗೂಡೊಳಗೆ ಪ್ಲೇ ಆಗುತ್ತಿರಬಹುದು; ಆದರೆ, ಇಳಕಲ್ ಸೀರೆ ನೇಯುವ ನೇಕಾರರ ಮಗ್ಗಗಳ ಗಢ ಗಢ ಸದ್ದು ಮಾತ್ರ ಕೆಲ ದಿನಗಳಿಂದ ಎಲ್ಲೂ ಕೇಳಿಸುತ್ತಲೇ ಇಲ್ಲ!
Related Articles
ಬೇರೆ ಬೇರೆ ಲಕ್ಷುರಿ ಸೀರೆಗಳಂತೆ ಇಳಕಲ್ಲ ಸೀರೆಯೂ ಅಪ್‌ಡೇಟ್ ಆಗಿದೆ. ಅಂದಹಾಗೆ, ಇದು ಇಳಕಲ್ಲ ಜವಳಿ ಉದ್ಯಮಿ ವಿಜಯಕುಮಾರ ಗುಳೇದ ಅವರ ಹೊಸ ಆವಿಷ್ಕಾರ. ಈ ಸೀರೆ ಉದ್ಯಮದಲ್ಲಿ ಇವರು ಸಾಕಷ್ಟು ಹೊಸ ಪ್ರಯೋಗ ಮಾಡಿ, ಕೈಸುಟ್ಟುಕೊಂಡಿದ್ದರಂತೆ. ನಾಗಮುರಿಗೆ ಸೀರೆ ಸೆರಗು, ಸಾಟಿನ ದಡಿ ಮಾದರಿಯನ್ನು ಪರಿಚಯಿಸಿದಾಗ ಅವುಗಳನ್ನು ಮಾರುಕಟ್ಟೆಯಲ್ಲಿ ಕೇಳುವರೇ ಇಲ್ಲದಂತಾಗಿತ್ತು. ಇಷ್ಟೆಲ್ಲ ನಷ್ಟ ಅನುಭವಿಸಿದರೂ, ವಿಜಯ್ ಅವರು ಇಳಕಲ್ಲ ಸೀರೆಯ ಸೆರಗನ್ನು ಬಿಡಲೇ ಇಲ್ಲ. ಈಗ ಅವರ ಹೊಸ ಮಾರ್ಗವೇ, ಆನ್‌ಲೈನ್ ಮಾರಾಟ.
Advertisement
ಈಗ ಎಲ್ಲವೂ ಸಲೀಸು…ಇತರೆ ಲಕ್ಷುರಿ ಸೀರೆಗಳೆಲ್ಲ ಆನ್‌ಲೈನ್‌ನಲ್ಲಿ ದರ್ಬಾರ್ ಮಾಡುತ್ತಿದ್ದುದನ್ನು ನೋಡಿದ ವಿಜಯ್, ತಾವೇಕೆ ಇಳಕಲ್ಲ ಸೀರೆಗೂ ಡಿಜಿಟಲ್ ವ್ಯಾಪಾರ ರೂಪ ನೀಡಬಾರದೆಂದು ನಿರ್ಧರಿಸಿ, ಈ ಸಾಹಸಕ್ಕೆ ಇಳಿದರಂತೆ. ಅಲ್ಲದೇ, ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲಿರುವ ಅನಿವಾಸಿ ಭಾರತೀಯರಿಂದ ಬೇಡಿಕೆ ಇದ್ದರೂ, ಇಳಕಲ್ಲ ಸೀರೆಯನ್ನು ಪೂರೈಸುವುದು ಕಷ್ಟವಾಗಿತ್ತು. ಅದೆಲ್ಲ ಈಗ ಸಲೀಸು ಎನ್ನುತ್ತಾರೆ ವಿಜಯ್. ಪ್ರತಿ ವರ್ಷ 7- 8 ಸಾವಿರ ಸೀರೆಗಳನ್ನು ನೇಯ್ಗೆ ಮಾಡಿಸಿ, ಮಾರುವ ಇವರಿಗೆ ಈಗ ಕೆಲ ತಿಂಗಳಿಂದ ಆನ್‌ಲೈನ್ ಮಾರುಕಟ್ಟೆಯಿಂದಲೇ 2- 3 ಲಕ್ಷ ರೂ. ಆದಾಯ ಸಿಕ್ಕಿದೆ. ಇಳಕಲ್ಲ ಸೀರೆಯು ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೂ ಪೂರೈಕೆಯಾಗುತ್ತಿತ್ತು. ಈಗ ಆ ಬೇಡಿಕೆಗೆಲ್ಲ ವೇಗ ದಕ್ಕಿರುವುದು, ಇಳಕಲ್ಲ ಸೀರೆಯ ವ್ಯಾಪಾರಿಗಳಿಗೆ ಖುಷಿ ತಂದಿದೆ. ವಿಮಾನದಲ್ಲಿ ಹಾರುವ ಸೀರೆ
ಇಳಕಲ್ಲ ಸೀರೆಯು ಜಗತ್ತಿನ ಸಿರಿವಂತ ದೇಶಗಳ ಮನೆಯ ಬಾಗಿಲನ್ನೂ ತಟ್ಟುತ್ತಿದೆ. ಸಿಂಗಾಪುರ, ಜರ್ಮನಿ, ಅಮೆರಿಕ, ಅರಬ್ ದೇಶಗಳು ಸೇರಿದಂತೆ, ಥಾಯ್ಲೆಂಡ್, ಶ್ರೀಲಂಕಾದಂಥ ಸಣ್ಣಪುಟ್ಟ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಇಳಕಲ್ಲ ಸೀರೆ ಕಂಪ್ಯೂಟರಿನಲ್ಲಿಯೇ ತನ್ನ ಅಂದಚೆಂದ ತೋರಿಸಿ, ಆಸೆ ಹುಟ್ಟಿಸುತ್ತಿದೆ. ವಿದೇಶಗಳಲ್ಲಿನ ಗ್ರಾಹಕರಿಗೆ ಸ್ಪೀಡ್‌ಪೋಸ್ಟ್, ಸ್ವದೇಶಿ ಗ್ರಾಹಕರಿಗೆ ಕೊರಿಯರ್ ಮೂಲಕ ಸೀರೆ ತಲುಪಿಸುವ ಕೆಲಸವಾಗುತ್ತಿರುವುದು ಇದೇ ಮೊದಲು. ಫೇಸ್‌ಬುಕ್- ವಾಟ್ಸಾಪ್‌ನಲ್ಲೂ ಬುಕಿಂಗ್
ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಗ್ರಾಮ್‌ನಲ್ಲಿ “ಪಿ.ಕೆ. ಗುಳೇದ್ ಇಳಕಲ್ಲ ಸ್ಯಾರೀಸ್’ ಅಂತ ಸರ್ಚ್ ಕೊಟ್ಟರೆ, ವಿಜಯಕುಮಾರ ಅವರ ಇಳಕಲ್ಲ ಸೀರೆಗಳ ಮಾಹಿತಿ ದೊರೆಯುತ್ತದೆ. ಇಷ್ಟವಾದ ಸೀರೆಗಳನ್ನು ಅಲ್ಲಿ ಬುಕ್ ಮಾಡಿದರೆ, ನಿಮ್ಮ ಮನೆ ಬಾಗಿಲಿಗೆ ಸೀರೆ ತಲುಪುತ್ತದೆ. ಕೈಮಗ್ಗದ ಸೀರೆಗಳಿಗೆ 9 ಸಾವಿರ ರೂ., ಪವರ್ ಲೂಮ್‌ನಿಂದ ನೇಯ್ದ ಸೀರೆಗೆ 500- 1000 ರೂ. ನಿಗದಿಪಡಿಸಲಾಗಿದೆ. – ಪ್ರಶಾಂತ ಜಿ. ಹೂಗಾರ