ಚೆನ್ನೈ: ಮಾಲಿವುಡ್‌ನ ʼಮಂಜುಮ್ಮೆಲ್ ಬಾಯ್ಸ್ʼ (Manjummel Boys) ಚಿತ್ರತಂಡ ಕಾಪಿರೈಟ್ಸ್ ಉಲ್ಲಂಘನೆ (Copyright infringement) ಮಾಡಿದ್ದಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ (Ilaiyaraaja) ಅವರಿಗೆ ಚಿತ್ರತಂಡ ಪರಿಹಾರವನ್ನು ನೀಡಿ ಪ್ರಕರಣಕ್ಕೆ ಅಂತ್ಯವಾಡಿದೆ.
ನೈಜ ಘಟನೆ ಆಧಾರಿತ ʼಮಂಜುಮ್ಮೆಲ್ ಬಾಯ್ಸ್ʼ ಮಾಲಿವುಡ್ (Mollywood) ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. 20 ಕೋಟಿ ಬಜೆಟ್ ನಲ್ಲಿ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸಿನಿಮಾ ಹಿಟ್ ಆಗುತ್ತಿದ್ದಂತೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಚಿತ್ರದ ನಿರ್ಮಾಪಕರಾದ ಸೌಬಿನ್ ಶಾಹಿರ್ ( Soubin Shahir), ಬಾಬು ಶಾಹಿರ್ ಮತ್ತು ಶಾನ್ ಅಂಟೋನಿ ಅವರಿಗೆ ಕಾಪಿರೈಟ್ ಉಲ್ಲಂಘನೆಗಾಗಿ ಲೀಗಲ್ ನೋಟಿಸ್ ಕಳುಹಿಸಿದ್ದರು.
ಕಮಲ್ ಹಾಸನ್ (Kamal Hasan) ಅವರ ‘ಗುಣ’ ಚಿತ್ರದ ಇಳಯರಾಜ ಅವರ ಐಕಾನಿಕ್ ‘ಕಣ್ಮಣಿ ಅನ್ಬೋಡು’ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಅವರ ಕಾನೂನು ತಂಡವು ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಚಿತ್ರದಿಂದ ಹಾಡು ತೆಗೆದು ಹಾಕಬೇಕು ಇಲ್ಲದಿದ್ರೆ ಅದಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಇಳಯರಾಜ ಆಗ್ರಹಿಸಿದ್ದರು. ಇಳಯರಾಜ ಚಿತ್ರತಂಡದಿಂದ 2 ಕೋಟಿ ರೂ. ನೀಡಬೇಕೆಂದು ಬೇಡಿಕೆಯನ್ನಿಟ್ಟಿದ್ದರು.
ಆದರೆ ಚಿತ್ರತಂಡ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಇದೀಗ 2 ಕೋಟಿ ಬದಲಿಗೆ 60 ಲಕ್ಷ ರೂ. ಕೊಟ್ಟು ಪ್ರಕರಣಕ್ಕೆ ಅಂತ್ಯವಾಡಿದೆ ಎಂದು ವರದಿಯಾಗಿದೆ.
ಚಿದಂಬರಂ ನಿರ್ದೇಶನದ ʼಮಂಜುಮ್ಮೆಲ್ ಬಾಯ್ಸ್ʼ ಚಿತ್ರದಲ್ಲಿ ಬಾಲು ವರ್ಗೀಸ್, ಸೌಬಿನ್ ಶಾಹಿರ್, ಶ್ರೀನಾಥ್ ಬಾಸಿ ಮುಂತಾದವರು ನಟಿಸಿದ್ದಾರೆ.
‘ಮಂಜುಮ್ಮೆಲ್ ಬಾಯ್ಸ್’ ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಗುಣ ಗುಹೆಯಲ್ಲಿ(Guna Cave) ಸ್ನೇಹಿತರ ಗುಂಪೊಂದು ಆಳವಾದ ಗುಂಡಿಯಲ್ಲಿ ಬಿದ್ದ ತಮ್ಮ ಸ್ನೇಹಿತನನ್ನು ರಕ್ಷಿಸುವ ನೈಜ ಘಟನೆಯನ್ನು ಆಧರಿಸಿದ ಚಲನಚಿತ್ರವಾಗಿದೆ.