Advertisement
“ನಿಯೋಮೊಶನ್; ಎಂಬ ಹೊಸ ಸ್ಟಾರ್ಟಪ್ ಆರಂಭಿಸುವ ಮೂಲಕ ಐಐಟಿ ಮದ್ರಾಸ್‌ನ ಹಳೇ ವಿದ್ಯಾರ್ಥಿ ಸ್ವಸ್ಥಿಕ್ ಸೌರವ್ ದಾಸ್ ಅವರ ತಂಡ ಪ್ರೊಫೆಸರ್ ಸುಜಾತಾ ಶ್ರೀನಿವಾಸನ್ ಅವರ ಸಹಾಯದೊಂದಿಗೆ ಈವರೆಗೆ ಸುಮಾರು 150ಕ್ಕೂ ಹೆಚ್ಚು ಎಲೆಕ್ಟ್ರಿಕ್ ಗಾಲಿಕುರ್ಚಿಗಳನ್ನು ಉಚಿತವಾಗಿ ಅಗತ್ಯವಿರುವವರಿಗೆ ವಿತರಿಸಿದ್ದಾರೆ. ಇವರ ಈ ನಿಯೋಮೋಶನ್ ಸ್ಟಾರ್ಟಪ್ ಭಾರತದ ಮೊದಲ ಎಲೆಕ್ಟ್ರಿಕ್ ಗಾಲಿಕುರ್ಚಿ ತಯಾರಿಕ ಸಂಸ್ಥೆಯಾಗಿದೆ.
Advertisement
ಯಾವುದೇ ರಸ್ತೆಯಲ್ಲೂ ಚಲಿಸಬಲ್ಲದುನಿಯೋಮೋಶನ್ ಸಂಸ್ಥೆ ನಿಯೋ ಫ್ಲೈ ಮತ್ತು ನಿಯೋಬೊಲ್ಟ ಎಂಬ ಎರಡು ರೀತಿಯ ಗಾಲಿಕುರ್ಚಿಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ನಿಯೋ ಫ್ಲೈ ಮಾದರಿ ಅಂಗವಿಕಲರ ಅಗತ್ಯ ಮತ್ತು ಜೀವನಶೈಲಿ ಆಧರಿಸಿ ಗಾಲಿಕುರ್ಚಿಯನ್ನು 18 ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು. ಆದರೆ ನಿಯೋಬೋಲ್ಟ ಮಾದರಿ ಗಾಲಿಕುರ್ಚಿಯಲ್ಲಿ ಎಲೆಕ್ಟ್ರಿಕ್ ಮೋಟಾರನ್ನು ಅಳವಡಿಸಲಾಗಿದೆ. ಈ ಮೂಲಕ ಗಾಲಿಕುರ್ಚಿಯನ್ನು ಸ್ಕೂಟರ್ ರೀತಿಯಲ್ಲಿ ಚಲಾಯಿಸಬಹುದು. ಇದು ಗಂಟೆಗೆ ಸುಮಾರು 25 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಇದರಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬ್ರೇಕ್, ಹಾರ್ನ್, ಲೈಟ್ ಮತ್ತು ಮಿರರ್‌ಗಳನ್ನು ನೀಡಿದ್ದು, ಇದು ಹದಕೆಟ್ಟ ರಸ್ತೆ, ಫ್ಲೈ ಓವರ್‌ನಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ನಿಯೋಮೋಶನ್‌ನ ಮುಖ್ಯಗುರಿ ಗಾಲಿಕುರ್ಚಿಯಲ್ಲಿ ಕುಳಿತವರಿಗೆ ಓಡಾಡುವ ಸ್ವಾತಂತ್ರ್ಯ ನೀಡುವುದು ಎನ್ನುವ ಸ್ವಸ್ಥಿಕ್ ಅವರು, ಅಂಗವಿಕಲರು ನಾಲ್ಕು ಗೋಡೆಗಳಿಂದ ಹೊರಬಂದು ಈ ಮೂಲಕ ತಮ್ಮ ತಮ್ಮ ಸಣ್ಣಪುಟ್ಟ ಕೆಲಸಗಳನ್ನು ಮಾಡುವಂತಾದರೂ ಗುರಿ ಈಡೆರಿದಂತೆ ಎಂದಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಗಾಲಿಕುರ್ಚಿ ವಿನ್ಯಾಸ
ನಿಯೋಮೋಶನ್ ಸಂಸ್ಥೆ ಫಿಸಿಯೋತೆರಪಿಸ್ಟ್ ಗಳ ತಂಡ ಹೊಂದಿದ್ದು, ಗ್ರಾಹಕರು ಗಾಲಿಕುರ್ಚಿ ಬುಕ್ ಮಾಡಿದ ಬಳಿಕ ಈ ತಂಡ ಅವರಿಗೆ ವೀಡಿಯೋ ಕರೆ ಮಾಡಿ ಅವರ ಅಗತ್ಯತೆಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಗಾಲಿಕುರ್ಚಿಗಳನ್ನು ತಯಾರಿಸುತ್ತದೆ. ಸಂಸ್ಥೆ ತಮ್ಮ ವೆಬ್ ಸೈಟ್ ಮೂಲಕ ಈ ಗಾಲಿಕುರ್ಚಿಗಳನ್ನು ಮಾರುತ್ತಿದ್ದು, ದೇಶಾದ್ಯಂತ ಅಂಗಡಿಗಳಲ್ಲಿ ಮತ್ತು ಆಸ್ಪತ್ರೆಗಳ ಮೂಲಕವೂ ಇದು ಲಭ್ಯವಾಗುತ್ತಿದೆ ಎನ್ನುತ್ತಾರೆ ಸ್ವಸ್ಥಿಕ್. ಇವರ ನಿಯೋ ಫ್ಲೈಗಾಲಿಕುರ್ಚಿಯ ಬೆಲೆ 39,900 ರೂ. ಆಗಿದ್ದು, ನಿಯೋ ಬೋಲ್ಟ 55,000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇವರು ಇಎಂಐ ಆಯ್ಕೆಯನ್ನು ಕೂಡ ನೀಡಿದ್ದು, ಒಂದು ಸಾವಿರ ನೀಡುವ ಮೂಲಕ ಬುಕ್ ಮಾಡಬಹುದು. ಸ್ವಸ್ಥಿಕ್ 2025ರ ವೇಳೆಗೆ ಈ ಗಾಲಿಕುರ್ಚಿಗಳನ್ನು ಒಂದು ಲಕ್ಷ ಮಂದಿಗೆ ಮುಟ್ಟಿಸುವ ಗುರಿ ಹೊಂದಿದ್ದು, ವಿದೇಶಕ್ಕೂ ರಫ್ತು ಮಾಡುವ ಯೋಜನೆಯಲ್ಲಿದ್ದಾರೆ. ಜಯಶಂಕರ್