Advertisement

ಆಗಸ್ಟ್‌ಗೆ ಐಐಟಿ ಕ್ಯಾಂಪಸ್‌ ಸಜ್ಜು; ಮುಂಬೈ ಐಐಟಿಯಿಂದ ಮುಕ್ತಿ

04:37 PM Feb 19, 2022 | Team Udayavani |

ಧಾರವಾಡ: ಗಗನದೆತ್ತರಕ್ಕೆ ತಲೆ ಎತ್ತಿ ನಿಂತಿರುವ ಕಾಂಕ್ರೀಟ್‌ ಕಟ್ಟಡಗಳು, ಎಷ್ಟೇ ಕಟ್ಟಡಗಳು ಬಂದರೂ ಮೊದಲಿದ್ದ ಒಂದೂ ಗಿಡ ನಾಶವಾಗದಂತೆ ಉಳಿಸಿಕೊಂಡ ಕೌಶಲ್ಯ. ನೂರಾರು ಎಕರೆಗೂ ಸುತ್ತಲೂ ದೈತ್ಯ ಕಾಂಪೌಂಡ್‌. ಒಟ್ಟಿನಲ್ಲಿ 2022ರ ಆಗಸ್ಟ್‌ ತಿಂಗಳಿಗೆ ಸಜ್ಜಾಗಲಿದೆ ವಿದ್ಯಾಕಾಶಿಯ ಮೇರು ಮುಕುಟ ಧಾರವಾಡ ಐಐಟಿ ಕ್ಯಾಂಪಸ್‌.

Advertisement

ಹೌದು. ಸತತ ಎರಡು ದಶಕಗಳ ಹೋರಾಟದ ಫಲವಾಗಿ ಧಾರವಾಡ ಹೊರ ವಲಯದ ಚಿಕ್ಕಮಲ್ಲಿಗವಾಡ ಸಮೀಪ ಸ್ಥಾಪನೆಯಾಗಿ ನಿರ್ಮಾಣಗೊಳ್ಳುತ್ತಿರುವ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಭವ್ಯ ಕ್ಯಾಂಪಸ್‌ ಇನ್ನೇನು ಉದ್ಘಾಟನೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ 2022ರ ಆಗಸ್ಟ್‌ ತಿಂಗಳಿನಲ್ಲಿ ಮೊದಲ ಹಂತದ ಕಾಮಗಾರಿ ಮುಗಿಯುವ ನಿರೀಕ್ಷೆಯಿದ್ದು, ಧಾರವಾಡ ಐಐಟಿ 2022ನೇ ಸಾಲಿನ ವಿದ್ಯಾರ್ಥಿಗಳು ವಾಲಿ¾ ಬದಲು ನೂತನ ಐಐಟಿ ಕಟ್ಟಡದಲ್ಲಿಯೇ ತಮ್ಮ ಮೊದಲ ವರ್ಷದ ಓದು ಆರಂಭಿಸಲಿದ್ದಾರೆ.

2016ರಿಂದಲೇ ಇಲ್ಲಿನ ಹೈಕೋರ್ಟ್‌ ಸಮೀಪದ ವಾಲ್ಮಿ ಕಟ್ಟಡದಲ್ಲಿ ಆರಂಭಗೊಂಡಿರುವ ಐಐಟಿಗೆ ಪ್ರತ್ಯೇಕ ಕ್ಯಾಂಪಸ್‌ ಚಿಕ್ಕಮಲ್ಲಿಗವಾಡ ಸಮೀಪ ನಿರ್ಮಾಣಗೊಳ್ಳುತ್ತಿದೆ. ದೇಶದಲ್ಲಿಯೇ ಮೊಟ್ಟ ಮೊದಲ ಹಸಿರು ಐಐಟಿ ಎಂಬ ಹೆಗ್ಗಳಿಕೆಗೆ ಧಾರವಾಡ ಐಐಟಿ ಪಾತ್ರವಾಗಿದ್ದು, ಈಗಾಗಲೇ ಅಖಂಡವಾಗಿ ಶೇ.45 ಕಾಮಗಾರಿ ಹಾಗೂ ಮೊದಲ ಹಂತದಲ್ಲಿನ ಶೇ.80 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

1440 ಕೋಟಿ ರೂ. ವೆಚ್ಚದಲ್ಲಿ ಕಳೆದ ಮೂರು ವರ್ಷಗಳಿಂದ ಐಐಟಿ ಕ್ಯಾಂಪಸ್‌ ನಿರ್ಮಾಣವಾಗುತ್ತಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧ ನಿರ್ಮಿಸಿರುವ ಮಹಾರಾಷ್ಟ್ರ ಮೂಲದ ಶೀರ್ಕೆ ನಿರ್ಮಾಣ ಸಂಸ್ಥೆ ಐಐಟಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. 1ನೇ ಹಂತಲ್ಲಿ ದೈತ್ಯ ಅಕಾಡೆಮಿಕ್‌ ಕಟ್ಟಡ, ಊಟದ ಮೆಸ್‌ ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯಗಳ ಕಾಮಗಾರಿಯನ್ನೊಳಗೊಂಡಿದೆ. ಒಟ್ಟು ಮೂರು ವಿಭಾಗದಲ್ಲಿ ಫೇಸ್‌-1ಎ, ಫೇಸ್‌-1ಬಿ ಹಾಗೂ ಫೇಸ್‌-2 ಮೂರು ಹಂತಗಳಲ್ಲಿ ಕ್ಯಾಂಪಸ್‌ ನಿರ್ಮಾಣಗೊಳ್ಳಲಿದೆ.

ಮತ್ತೆ ಐದು ಕೋರ್ಸ್‌ ಆರಂಭ
ಧಾರವಾಡ ಐಐಟಿಯಲ್ಲಿ ಮೊದಲ ನಾಲ್ಕು ವರ್ಷಗಳು ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಿಕಲ್ಸ್‌ ಮತ್ತು ಮೆಕ್ಯಾನಿಕಲ್‌ ಕೇವಲ ಮೂರು ಕೋರ್ಸ್‌ಗಳನ್ನು ಆರಂಭ ಮಾಡಲಾಗಿತ್ತು. ಪ್ರತಿ ಕೋರ್ಸ್‌ಗೂ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಮತ್ತೆ ಐದು ನೂತನ ಕೋರ್ಸ್‌ಗಳನ್ನು ಐಐಟಿ ಆರಂಭಿಸಿದೆ. ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಏರೋಸ್ಪೇಸ್‌ (ಬಾಹ್ಯಾಕಾಶ) ಮತ್ತು ಸಾಮಾನ್ಯ ಇಂಗ್ಲಿಷ್‌ ವಿಷಯಾಧಾರಿತ ಕೋರ್ಸ್‌ ಆರಂಭಗೊಂಡಿವೆ. ಪ್ರಸ್ತುತ ಧಾರವಾಡ ಐಐಟಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 600ಕ್ಕೆ ತಲುಪಿದೆ.

Advertisement

ಕೊರೊನಾ ಮರ್ಮಾಘಾತ
ಧಾರವಾಡ ಐಐಟಿ ನಿರ್ಮಾಣ ಕಾರ್ಯ ವಿಳಂಬಕ್ಕೆ ಕೊರೊನಾ ಕೊಡುಗೆ ದೊಡ್ಡದು. ಅತ್ಯಂತ ಹುರುಪು ಮತ್ತು ವೇಗವಾಗಿ ಧಾರವಾಡ ಐಐಟಿ ತನ್ನ ಕಾರ್ಯ ವಿಸ್ತರಣೆ ಮಾಡುತ್ತಿತ್ತು. ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಗಿದು ತೀವ್ರಗತಿ ಪಡೆಯುವ ಸಂದರ್ಭಕ್ಕೆ ಕೊರೊನಾ ಒಕ್ಕರಿಸಿದ್ದರಿಂದ ಐಐಟಿ ನಿರ್ಮಾಣ ಮತ್ತು ಇತರೆ ಕಾರ್ಯ ಚಟುವಟಿಕೆಗಳೇ ಸ್ಥಗಿತಗೊಂಡವು. ಕಾರ್ಮಿಕರ ಕೊರತೆ, ಆಡಳಿತಾತ್ಮಕ ವ್ಯತ್ಯಾಸಗಳಿಂದ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೂ
ಕೊರೊನಾ ಮರ್ಮಾಘಾತ ನೀಡಿತು. ಕೋರ್ಸ್‌ ಮುಗಿಸಿದರೂ ಅವರಿಗೆ ಐಐಟಿ ಪದವಿ ಪ್ರಮಾಣ ಪತ್ರ ಸಿಕ್ಕದೇ ವಿದ್ಯಾರ್ಥಿಗಳು ಅಲೆದಾಡಬೇಕಾಯಿತು. ಈಗಲೂ ಕೊರೊನಾ ಸಲುವಾಗಿ ಒಂದಿಷ್ಟು ಆನ್‌ ಲೈನ್‌ ಕ್ಲಾಸ್‌ಗಳು ಚಾಲ್ತಿಯಲ್ಲಿವೆ. ಈವರೆಗಿನ ವಿಳಂಬವನ್ನು ನೀಗಿಸಿಕೊಂಡು ಐಐಟಿ ಮುನ್ನಡೆದಿದೆ.

ಮುಂಬೈ ಐಐಟಿಯಿಂದ ಮುಕ್ತಿ
ಮುಂಬೈ ಐಐಟಿಯ ಮಾರ್ಗದರ್ಶನದಲ್ಲಿ ಧಾರವಾಡ ಐಐಟಿ ಕಾರ್ಯ ಆರಂಭಿಸಿತ್ತು. ಮೊದಲ ಐದು ವರ್ಷಗಳ ಕಾಲ ಮುಂಬೈ ಐಐಟಿ ಸಹಾಯ ಪಡೆಯಲಾಗಿತ್ತು. ಆದರೆ ಇದೀಗ ಈ ಅವಧಿ ಮುಕ್ತಾಯಗೊಂಡಿದ್ದು ಧಾರವಾಡ ಐಐಟಿ ಸ್ವತಂತ್ರಗೊಂಡಿದ್ದು, ನಿರ್ದೇಶಕರ ಜತೆಗೆ ರಿಜಿಸ್ಟ್ರಾರ್‌, ಸಹಾಯಕ ರಿಜಿಸ್ಟ್ರಾರ್‌ಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಆಡಳಿತಾತ್ಮಕ ಕಾರ್ಯ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಕಗೊಂಡಿದ್ದಾರೆ. ಸದ್ಯಕ್ಕೆ ಧಾರವಾಡ ಐಐಟಿಯಲ್ಲಿ 100ಕ್ಕೂ ಹೆಚ್ಚು ಜನ ಐಐಟಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮುಂಬೈ ಐಐಟಿಯಿಂದ ಧಾರವಾಡ ಐಐಟಿ ಸ್ವತಂತ್ರ ನಿರ್ವಹಣೆಗೆ ಸಜ್ಜಾಗಿದೆ.

ಅಂದುಕೊಂಡಂತೆ ನಡೆದರೆ ಇನ್ನು ನಾಲ್ಕು ತಿಂಗಳಲ್ಲಿ ಧಾರವಾಡ ಐಐಟಿಯ 1ನೇ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ಮೋದಿ ಐಐಟಿ ಉದ್ಘಾಟಿಸಲಿದ್ದಾರೆ. ಅಖಂಡ ಕ್ಯಾಂಪಸ್‌ನ ಪರಿಪೂರ್ಣ ನಿರ್ಮಾಣಕ್ಕೆ ಇನ್ನೂ ಮೂರು ವರ್ಷ ಬೇಕಾಗುತ್ತದೆ.
ಧಾರವಾಡ ಐಐಟಿ ಹಿರಿಯ ಅಧಿಕಾರಿ

ಡಾ|ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next