ಭೋಪಾಲ್: ಇದೇ ಮೊದಲ ಬಾರಿಗೆ ಭೋಪಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಘಟಕವು ದೇಶೀಯ ಗೋ ತಳಿಗಳಾಗಿರುವ ಕಾಸರಗೋಡು ಡ್ವಾಫ್, ಕಾಸರಗೋಡು ಕಪಿಲ, ವಚೂರ್ ಮತ್ತು ಓಂಗೋಲ್ ತಳಿಗಳ ಜೀನ್‌ಗಳ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ.
ದೇಶದಲ್ಲಿ ಇರುವ ತಾಪ, ಹವಾಮಾನಕ್ಕೆ ಅವುಗಳು ಯಾವ ರೀತಿ ಹೊಂದಿಕೊಂಡಿವೆ ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡಲು ಕಾರಣವೇನು, ದೀರ್ಘ ಜೀವಿತಾವಧಿಗೆ ಕಾರಣವೇನು ಎಂಬ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭೋಪಾಲ್ ಘಟಕದ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ವಿನೀತ್ ಕೆ.ಶರ್ಮಾ, ದೇಶಿ ಗೋ ತಳಿಗಳು ನಮ್ಮ ಪರಿಸರದ ಉಷ್ಣ ಹವಾಮಾನಕ್ಕೆ ಹೊಂದಿ ಕೊಳ್ಳಲು ಶಕ್ತವಾಗಿವೆ. ಜತೆಗೆ ಕೆಲವು ಕಾಯಿಲೆಗಳನ್ನು ತಾಳಿಕೊಳ್ಳಬಲ್ಲ ಸಾಮ ರ್ಥ್ಯವೂ ಅವುಗಳಿಗಿವೆ. ಆದ್ದರಿಂದ ದೇಸಿ ಗೋ ತಳಿಗಳಿಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಜೀನ್‌ಗಳ ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತಿದೆದೆ. ಇದು ವರೆಗೆ ಪಾಶ್ಚಾತ್ಯ ತಳಿ ಬೋಸ್ ತರೂಸ್ ಅನ್ನು ಅಧ್ಯಯನಕ್ಕಾಗಿ ಬಳಸುತ್ತಿದ್ದೆವು ಎಂದಿದ್ದಾರೆ.
ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಸ್ಥಳೀಯ ಗೋ ತಳಿಗಳನ್ನು ಅಧ್ಯಯನ ನಡೆಸಲಾಗಿದೆ. ಪಾಶ್ಚಾತ್ಯ ಗೋ ತಳಿಗಳಿಗೆ ಹೋಲಿಕೆ ಮಾಡಿದರೆ, ನಮ್ಮ ದೇಶದ ಗೋವುಗಳ ತಳಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಹೇಗೆ ಹೆಚ್ಚು ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.
ಜಿನೋಟೈಪ್(ಡಿಎನ್‌ಎ ಸರಣಿ) ಅಧ್ಯಯನದಿಂದ ದೇಸಿ ಗೋ ತಳಿಯ ಸಂರಕ್ಷಣೆ, ಅವುಗಳ ಉತ್ಪಾದಕತೆ, ಸುಸ್ಥಿರತೆ ಹೆಚ್ಚಿಸಲು ನೆರವಾಗಲಿದೆ ಎಂದಿದ್ದಾರೆ.