Advertisement

ದೇಶದಲ್ಲಿ ಈಗ “ಪರಮ ಪ್ರವೇಗ’ದ ಪವರ್‌! 

10:21 PM Feb 05, 2022 | Team Udayavani |

ಹೊಸದಿಲ್ಲಿ: ಭಾರತದಲ್ಲಿರುವ ಸೂಪರ್‌ಕಂಪ್ಯೂಟರ್‌ಗಳಿಗೆ ಈಗೊಬ್ಬ “ಅಗ್ರಜ’ ಸಿಕ್ಕಿದ್ದಾನೆ. ಅವನ ಹೆಸರೇ “ಪರಮ ಪ್ರವೇಗ’. ಉಳಿದೆಲ್ಲರಿಗಿಂತಲೂ ಶಕ್ತಿಶಾಲಿ ಇವನು!

Advertisement

ಹೌದು, ಭಾರತವು ಹೈಪವರ್‌ ಕಂಪ್ಯೂಟಿಂಗ್‌ನಲ್ಲಿ ಉದಯೋನ್ಮುಖ ನಾಯಕನಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯೆಂಬಂತೆ, ದೇಶದಲ್ಲೇ ಅತ್ಯಂತ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್‌ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ (ಐಐಎಸ್‌ಸಿ)ನಲ್ಲಿ ಅಳವಡಿಸಲಾಗಿದೆ.

ವಿವಿಧ ಕ್ಷೇತ್ರಗಳ ಸಂಶೋಧನೆಗೆ ನೆರವಾಗಲು ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಐಐಎಸ್‌ಸಿಯಲ್ಲಿ ರಾಷ್ಟ್ರೀಯ ಸೂಪರ್‌ ಕಂಪ್ಯೂಟಿಂಗ್‌ ಮಿಷನ್‌ (ಎನ್‌ಎಸ್‌ಎಂ)ನಡಿ ಇದನ್ನು ಅಳವಡಿಸಲಾಗಿದೆ. “ಪರಮ್‌ ಪ್ರವೇಗ’ವು 3.3 ಪೆಟಾಫ್ಲಾಪ್ಸ್‌ ಸೂಪರ್‌ ಕಂಪ್ಯೂಟಿಂಗ್‌ ಸಾಮರ್ಥ್ಯ ಹೊಂದಿದೆ. ಅಂದರೆ ಪ್ರತೀ ಸೆಕೆಂಡಿಗೆ 1,015 ಕಾರ್ಯಾಚರಣೆಗಳನ್ನು ಇದು ಮಾಡಬಲ್ಲದು. ಭಾರತದ ಒಟ್ಟು ಕಂಪ್ಯುಟೇಷನಲ್‌ ಸಾಮರ್ಥ್ಯವನ್ನು 16 ಪೆಟಾಫ್ಲಾಪ್ಸ್‌ಗೆ ಏರಿಸುವುದೇ ಎನ್‌ಎಸ್‌ಎಂ ಉದ್ದೇಶ.

ದೇಶೀಯವಾಗಿ ಅಭಿವೃದ್ಧಿ
ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (ಸಿ-ಡಿಎಸಿ) ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಇದರ ಬಹುತೇಕ ಹಾರ್ಡ್‌ವೇರ್‌ ಮತ್ತು ಸಾಫ್ಟ್ವೇರ್‌ ನಮ್ಮ ದೇಶದಲ್ಲೇ ತಯಾರಾಗಿದೆ. “ಪರಮ ಪ್ರವೇಗ’ದ ಇಡೀ ವ್ಯವಸ್ಥೆಯನ್ನು ಲಿನಕ್ಸ್‌ ಒಎಸ್‌ ಮೂಲಕ ಆಪರೇಟ್‌ ಮಾಡಲಾಗುತ್ತದೆ.

ಇದೇ ಮೊದಲಲ್ಲ
2015ರಲ್ಲಿ ಬೆಂಗಳೂರು ಐಐಎಸ್‌ಸಿ “ಸಹಸ್ರ ಟಿ’ ಎಂಬ ಹೆಸರಿನ ಸೂಪರ್‌ಕಂಪ್ಯೂಟರ್‌ ಅಳವಡಿಸಿಕೊಂಡಿತ್ತು. ಅದು ಆ ಕಾಲದಲ್ಲಿ ದೇಶದ ಅತ್ಯಂತ ವೇಗದ ಸೂಪರ್‌ಕಂಪ್ಯೂಟರ್‌ ಆಗಿತ್ತು.

Advertisement

ಉದ್ದೇಶವೇನು?
– ಶೈಕ್ಷಣಿಕ ಸಂಸ್ಥೆಗಳು, ಸಂಶೋಧಕರು, ಎಂಎಸ್‌ಎಂಇಗಳು, ಸ್ಟಾರ್ಟಪ್‌ಗಳ ಕಂಪ್ಯುಟೇಷನಲ್‌ ಬೇಡಿಕೆಗಳನ್ನು ಈಡೇರಿಸುವುದು.
– ಹಸುರು ಇಂಧನ ತಂತ್ರಜ್ಞಾನಗಳು, ಹವಾಮಾನ ವೈಪರೀತ್ಯದ ಅಧ್ಯಯನ, ತೈಲ ಅನ್ವೇಷಣೆ, ಪ್ರವಾಹ ಮುನ್ಸೂಚನೆ, ಔಷಧ ಆವಿಷ್ಕಾರದಂಥ ಕ್ಷೇತ್ರಗಳಲ್ಲಿ ಸಂಶೋಧನೆಗೆ ನೆರವಾಗುವುದು.
– ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಸಿಬಂದಿಗೆ ನೆರವಾಗುವುದು

ದೇಶದಲ್ಲಿ ಇರುವ ಸೂಪರ್‌ ಕಂಪ್ಯೂಟರ್‌ಗಳು
ಈವರೆಗೆ ದೇಶಾದ್ಯಂತ 10 ಸೂಪರ್‌ ಕಂಪ್ಯೂಟಿಂಗ್‌ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ದೇಶೀಯವಾಗಿ ಜೋಡಿಸಲಾದ ಮೊದಲ ಸೂಪರ್‌ಕಂಪ್ಯೂಟರ್‌ “ಪರಮ ಶಿವಾಯ್‌’ ಅನ್ನು ಐಐಟಿ (ಬಿಎಚ್‌ಯು)ನಲ್ಲಿ ನಿಯೋಜಿಸಲಾಗಿದೆ.
“ಪರಮ’ ಸರಣಿಯಲ್ಲಿ ಪರಮ ಶಕ್ತಿ, ಪರಮ ಬ್ರಹ್ಮ, ಪರಮ ಯುಕ್ತಿ, ಪರಮ ಸಂಗಾನಕ್‌, ಪರಮ ಯುವ, ಪರಮ ಪದ್ಮ, ಪರಮ ಇಶಾನ್‌, ಪರಮ ಸಿದ್ಧಿ ಸೇರಿದಂತೆ ಹಲವು ಸೂಪರ್‌ಕಂಪ್ಯೂಟರ್‌ಗಳಿದ್ದು, ದೇಶದ ಬೇರೆ ಬೇರೆ ಸಂಸ್ಥೆಗಳಲ್ಲಿ ಇವುಗಳನ್ನು ನಿಯೋಜಿಸಲಾಗಿದೆ.

ಟಾಪ್‌ 500ರ ಪಟ್ಟಿಯಲ್ಲಿ ಸ್ಥಾನ
ಜಗತ್ತಿನ ಟಾಪ್‌ 500 ಸೂಪರ್‌ ಕಂಪ್ಯೂಟರ್‌ಗಳಲ್ಲಿ 3 ಭಾರತದಲ್ಲಿವೆ. ಅವೆಂದರೆ ಪರಮ ಸಿದ್ಧಿ, ಪ್ರತ್ಯೂಷ್‌ ಮತ್ತು ಮಿಹಿರ್‌. ಈ ಪೈಕಿ ಪರಮಸಿದ್ಧಿ 62ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಅಮೆರಿಕ ಮತ್ತು ಜಪಾನ್‌ನ ಸೂಪರ್‌ಕಂಪ್ಯೂಟರ್‌ಗಳು ಪಡೆದಿವೆ.

ಸೂಪರ್‌ಕಂಪ್ಯೂಟರ್‌ ಎಂದರೇನು?
ಸಾಮಾನ್ಯ ಕಂಪ್ಯೂಟರ್‌ಗೆ ಹೋಲಿಸಿದರೆ ಸೂಪರ್‌ಕಂಪ್ಯೂಟರ್‌ ಅತ್ಯಧಿಕ ಮಟ್ಟದ ಕಾರ್ಯಕ್ಷಮತೆ ಹೊಂದಿರುತ್ತದೆ. ಸಾಮಾನ್ಯ ಕಂಪ್ಯೂಟರ್‌ನ ಕ್ಷಮತೆಯನ್ನು ಎಂಐಪಿಎಸ್‌ (ಮಿಲಿಯನ್‌ ಇನ್‌ಸ್ಟ್ರಕ್ಷನ್ಸ್‌ ಪರ್‌ ಸೆಕೆಂಡ್‌)ನಲ್ಲಿ ಅಳೆದರೆ, ಸೂಪರ್‌ಕಂಪ್ಯೂಟರ್‌ನ ಕ್ಷಮತೆಯನ್ನು ಫ್ಲಾಪ್ಸ್‌(ಫ್ಲೋಟಿಂಗ್‌ ಪಾಯಿಂಟ್‌ ಆಪರೇಷನ್ಸ್‌ ಪರ್‌ ಸೆಕೆಂಡ್‌)ನಲ್ಲಿ ಅಳೆಯಲಾಗುತ್ತದೆ. 2017ರ ಬಳಿಕ ಬಂದ ಸೂಪರ್‌ಕಂಪ್ಯೂಟರ್‌ಗಳು ನೂರು ಕ್ವಾಡ್ರಿಲಿಯನ್‌ ಫ್ಲಾಪ್ಸ್‌ (ಪೀಟಾ ಫ್ಲಾಪ್ಸ್‌) ಕ್ಷಮತೆಯನ್ನು ಹೊಂದಿವೆ. ಇಲ್ಲಿ ಒಂದು ಕ್ವಾಡ್ರಿಲಿಯನ್‌ ಎಂದರೆ ಸಾವಿರ ಲಕ್ಷ ಕೋಟಿ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next