Advertisement

IPL 2023: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ಗೆ `ರಾಯಲ್‌’ಗೆಲುವು

01:01 AM Apr 28, 2023 | Team Udayavani |

ಜೈಪುರ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 32 ರನ್ನುಗಳಿಂದ ಸೋಲಿಸಿದೆ.

Advertisement

ಯಶಸ್ವಿ ಜೈಸ್ವಾಲ್‌ ಅವರ ಅಮೋಘ ಆಟ ಮತ್ತು ಆ್ಯಡಂ ಝಂಪ ಅವರ ನಿಖರ ದಾಳಿಯಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 170 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೊದಲು ರಾಜಸ್ಥಾನ್‌ 5 ವಿಕೆಟಿಗೆ 202 ರನ್ನುಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
ಈ ಗೆಲುವಿನಿಂದ ರಾಜಸ್ಥಾನ್‌ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಾಜಸ್ಥಾನ್‌ ಅಲ್ಲದೇ ಗುಜರಾತ್‌ಮತ್ತು ಚೆನ್ನೈ ತಲಾ ಹತ್ತು ಅಂಕ ಹೊಂದಿದ್ದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ರಾಜಸ್ಥಾನ ಮೊದಲ, ಗುಜರಾತ್‌ ದ್ವಿತೀಯ ಮತ್ತು ಚೆನ್ನೈ 3ನೇ ಸ್ಥಾನದಲ್ಲಿದೆ.

ಚೆನ್ನೈಯ ಆರಂಭ ಉತ್ತಮವಾಗಿತ್ತು. ರುತುರಾಜ್‌ ಗಾಯಕ್ವಾಡ್‌ ಸಿಡಿಯಲು ಆರಂಭಿಸಿದರೆ ಡೇವನ್‌ ಕಾನ್ವೆ ಅವರ ಆಟಕ್ಕೆ ಝಂಪ ಬ್ರೇಕ್‌ ನೀಡುವಲ್ಲಿ ಯಶಸ್ವಿಯಾದರು. ಅವರಿಬ್ಬರು ಮೊದಲ ವಿಕೆಟಿಗೆ 42 ರನ್‌ ಪೇರಿಸಿದ್ದರೂ ಇದರಲ್ಲಿ ಕಾನ್ವೆ ಕೊಡುಗೆ ಕೇವಲ 8 ರನ್‌ ಮಾತ್ರ. ಎರಡನೆಯವರಾಗಿ ರುತುರಾಜ್‌ ಔಟ್‌ ಆದಾಗ 47 ರನ್‌ ಗಳಿಸಿದ್ದರು. ಆಬಳಿಕ ಚೆನ್ನೈ ರಹಾನೆ ಮತ್ತು ಅಂಬಾಟಿ ರಾಯುಡು ಅವರನ್ನು ಬೇಗನೇ ಕಳೆದುಕೊಂಡು ಒತ್ತಡಕ್ಕೆ ಬಿತ್ತು.

ಆಬಳಿಕ ಶಿವಂ ದುಬೆ ಮತ್ತು ಮೊಯಿನ್‌ ಅಲಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದ್ದರೂ ಯಶ ದೊರಕಲಿಲ್ಲ. ಈ ಜೋಡಿಯನ್ನು ಮತ್ತೆ ಮುರಿದ ಝಂಪ ಚೆನ್ನೈಗೆ ಪ್ರಬಲ ಹೊಡೆತವಿಕ್ಕಿದರು. ಝಂಪ 22 ರನ್ನಿಗೆ 3 ವಿಕೆಟ್‌ ಕಿತ್ತು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ 52 ರನ್‌ ಗಳಿಸಿದ ಶಿವಂ ದುಬೆ ಔಟಾದರು.

ಉತ್ತಮ ಆರಂಭ
ಇನ್ನಿಂಗ್ಸ್‌ ಆರಂಭಿಸಿದ ಜೈಸ್ವಾಲ್‌ ಮತ್ತು ಜಾಸ್‌ ಬಟ್ಲರ್‌ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಚೆನ್ನೈ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರಿಬ್ಬರು ಮೊದಲ ವಿಕೆಟಿಗೆ ಕೇವಲ 8.2 ಓವರ್‌ಗಳಲ್ಲಿ 86 ರನ್‌ ಸಿಡಿಸಿದ್ದರು. ಜೈಸ್ವಾಲ್‌ ಮೊದಲ ಓವರಿನಿಂದಲೇ ಸಿಡಿಯಲು ಆರಂಭಿಸಿದ್ದರು. ಆಕಾಶ್‌ ಸಿಂಗ್‌ ಅವರ ಮೊದಲ ಓವರಿನಲ್ಲಿ ಮೂರು ಜೈಸ್ವಾಲ್‌ ಮೂರು ಬೌಂಡರಿ ಬಾರಿಸಿದ್ದರು. ಸಿಂಗ್‌ ಅವರ ಎರಡನೇ ಓವರಿನಲ್ಲಿ ಜೈಸ್ವಾಲ್‌ ಮತ್ತೆ 18 ರನ್‌ ಪೇರಿಸಿದ್ದರು.

Advertisement

ಆಕಾಶ್‌ ಮತ್ತು ತುಷಾರ್‌ ದೇಶ್‌ಪಾಂಡೆ ಅವರ ದಾಳಿಯನ್ನು ತೀವ್ರವಾಗಿ ದಂಡಿಸಿದ್ದನ್ನು ನೋಡಿದ ಚೆನ್ನೈ ನಾಯಕ ಧೋನಿ ತತ್‌ಕ್ಷಣವೇ ಸ್ಪಿನ್‌ ದಾಳಿ ಆರಂಭಿಸಿದರು. ಮಹೀಶ್‌ ತೀಕ್ಷಣ ಉತ್ತಮ ದಾಳಿ ಸಂಘಟಿಸಿ ರನ್‌ವೇಗಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದರು.

ಭರ್ಜರಿ ಆಟದ ಪ್ರದರ್ಶನ ನೀಡಿದ ಜೈಸ್ವಾಲ್‌ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಅವರು 43 ಎಸೆತಗಳಿಂದ 77 ರನ್‌ ಗಳಿಸಿದರು. ಬಟ್ಲರ್‌ ಔಟಾದ ಬಳಿಕ ಜೈಸ್ವಾಲ್‌ ಅವರು ಸಂಜು ಸ್ಯಾಮ್ಸನ್‌ ಜತೆಗೂಡಿ ತಂಡವನ್ನು ಆಧರಿಸಿದರು. ಆದರೆ ಈ ಜೋಡಿ ಮುರಿದ ಬಳಿಕ ಶಿಮ್ರಾನ್‌ ಹೆಟ್‌ಮೈರ್‌ ಬೇಗನೇ ಔಟಾದರು. ಇದರಿಂದ ರನ್‌ವೇಗ ಕುಂಠಿತವಾಯಿತು.

ಕೊನೆ ಹಂತದಲ್ಲಿ ಪಡಿಕ್ಕಲ್‌ ಮತ್ತು ಜುರೆಲ್‌ ಸಿಡಿದ ಕಾರಣ ರಾಜಸ್ಥಾನದ ಮೊತ್ತ 200ರ ಗಡಿ ದಾಟುವಂತಾಯಿತು. ಅವರಿಬ್ಬರು 5ನೇ ವಿಕೆಟಿಗೆ 48 ರನ್‌ ಪೇರಿಸಿದ್ದರು. ಜರೆಲ್‌ 15 ಎಸೆತಗಳಿಂದ 34 ರನ್‌ ಗಳಿಸಿದ್ದರೆ ಪಡಿಕ್ಕಲ್‌ 13 ಎಸೆತಗಳಿಂದ 27 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next