ರಷ್ಯಾದ ಭೌತಶಾಸ್ತ್ರಜ್ಞ ಐಗೋರ್ ಟಾಮ್, 1958ರ ನೊಬೆಲ್ ಪ್ರಶಸ್ತಿ ಪಡೆದ ಪ್ರತಿಭಾವಂತ. ಅವನು ಉಕ್ರೇನಿನ ಒಡೆಸ್ಸಾ ವಿಶ್ವವಿದ್ಯಾಲಯದಲ್ಲಿ ಭೌತವಿಇಜ್ಞಾನದ ಪೊ›ಫೆಸರ್ ಆಗಿ ಕೆಲಸ ಮಾಡುತ್ತಿದ್ದ. ರಷ್ಯನ್ ಕ್ರಾಂತಿ ನಡೆಯುತ್ತಿದ್ದ ದಿನಗಳವು. ಎಲ್ಲೆಲ್ಲೂ ಆಹಾರದ ಕೊರತೆ ಕಾಡುತ್ತಿತ್ತು. ನಗರದ ಜನ ಕೂಡ ಅಕ್ಕಿಬೇಳೆ ಕೊಳ್ಳಲು ಹತ್ತಿರದ ಯಾವುದಾದರೂ ಹಳ್ಳಿಗೆ ಹೋಗಿ ಬರಬೇಕಿದ್ದ ವಿಷಮ ಪರಿಸ್ಥಿತಿ. ಐಗೋರ್ ಕೂಡ ಅಕ್ಕಿ – ತರಕಾರಿಯೇನಾದರೂ ಸಿಗುತ್ತೋ ನೋಡಲು ಪಕ್ಕದ ಹಳ್ಳಿಗೆ ಹೋಗಿದ್ದ. ಅವನ ದುರದೃಷ್ಟಕ್ಕೆ ಅದೇ ಸಮಯದಲ್ಲಿ ಇಡೀ ಹಳ್ಳಿಯನ್ನು ಕ್ರಾಂತಿಕಾರಿಗಳು ಆಕ್ರಮಿಸಿಬಿಟ್ಟರು.
ಕ್ರಾಂತಿಕಾರಿಗಳ ನಾಯಕ, ಐಗೋರ್‌ನನ್ನು ಹಿಡಿದುಹಾಕಿದ. ಬಟ್ಟೆಬರೆಯಲ್ಲಿ ಹೊರಗಿನವನೆಂದು ಎದ್ದು ಕಾಣುತ್ತಿದ್ದ ಅವನನ್ನು ನಾಯಕ ಎಲ್ಲಿಯವನೆಂದು ವಿಚಾರಿಸಿದ. ಐಗೋರ್ ತನ್ನ ಪೂರ್ವಾಪರ ಹೇಳಿಕೊಂಡ. ನಗರದ ವಿಶ್ವವಿದ್ಯಾಲಯದಲ್ಲಿ ಪೊ›ಫೆಸರ್ ಆಗಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದ. ಯಾವ ಸಬೆjಕ್ಟ್? ಕ್ರಾಂತಿಕಾರಿಯ ಪ್ರಶ್ನೆ. ಫಿಸಿಕ್ಸ್ ಎಂದರೆ ಈ ಕ್ರಾಂತಿಕಾರಿಗಳು ತನ್ನನ್ನು ಬಾಂಬಿಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಹಣ್ಣುಗಾಯಿ ಮಾಡುತ್ತಾರೆಂದು ಬಗೆದ ಐಗೋರ್ ಗಣಿತ ಎಂದ.
ಗಣಿತವಾ? ಹಾಗಾದರೆ, ಅನಂತ ದೂರಕ್ಕೆ ಬೆಳೆಸಬಹುದಾದ ಮೆಕ್ಲಾರಿನ್ ಸರಣಿಯನ್ನು ಮಧ್ಯದಲ್ಲೆಲ್ಲಾದರೂ ಕಡಿದು ನಿಲ್ಲಿಸಿದರೆ, ಫಲಿತಾಂಶದಲ್ಲಿ ಬರುವ ವ್ಯತ್ಯಾಸದ ಪ್ರಮಾಣ ಎಷ್ಟು ಹೇಳು. ಉತ್ತರ ಸರಿ ಇದ್ದರೆ ನಿನ್ನನ್ನು ಬಿಡುತ್ತೇನೆ. ಇಲ್ಲವಾದರೆ ನೇರ ಯಮಲೋಕಕ್ಕೆ ಕಳಿಸುತ್ತೇನೆ ಎಂದು ಬುರುಡೆಗೆ ಕೋವಿ ಒತ್ತಿಡಿದ ಕ್ರಾಂತಿಕಾರಿ! ಇಂಥದೊಂದು ಸನ್ನಿವೇಶವನ್ನು ಊಹಿಸಿರದಿದ್ದ ಐಗೋರ್ ಕಾಲೇಜು ದಿನಗಳಲ್ಲಿ ಕಲಿತು ಮರೆತಿದ್ದ ಗಣಿತವನ್ನೆಲ್ಲ ಸಾಕಷ್ಟು ನೆನಪಿಸಿಕೊಂಡು, ಒಂದಷ್ಟು ಒದ್ದಾಡಿ ಕೊನೆಗೂ ಉತ್ತರ ತೆಗೆದು ಕ್ರಾಂತಿಕಾರಿಗೆ ತೋರಿಸಿದ. ಅದನ್ನು ನೋಡಿದ ಆ ನಾಯಕ, ಕರೆಕ್ಟ್! ಬದುಕಿಕೋ ಬಡಪಾಯಿ! ಎಂದು ಐಗೋರ್‌ನನ್ನು ಬಿಟ್ಟುಬಿಟ್ಟ.
ರೋಹಿತ್ ಚಕ್ರತೀರ್ಥ