ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ತಾಲೂಕನ್ನು ನಿರಂತರವಾಗಿ ಸರ್ಕಾರ, ಸರ್ಕಾರಿ ಇಲಾಖೆ ಉದಾಸೀನ ಮಾಡಿಕೊಂಡು ಬರುತ್ತಿವೆ. ಪ್ರಸಿದ್ಧ ಕವಿ, ನಾಯಕರ ತವರು ಕ್ಷೇತ್ರವಾಗಿದ್ದರೂ, ಚಿಕ್ಕನಾಯಕನಹಳ್ಳಿ ಹೆಸರನ್ನು ಬಳಸುವಲ್ಲಿ ಸರ್ಕಾರಿ ಬಸ್ ಡಿಪೋ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಹಾಗೂ ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕನಾಯಕನಹಳ್ಳಿ ಒಂದು ಅರೆ ಮಲೆನಾಡು ಹೋಲುವ ಪ್ರಕೃತಿ ಸೌಂದರ್ಯ ಹೊಂದಿದೆ. ಇಲ್ಲಿನ ತೆಂಗು ಸುಪ್ರಸಿದ್ಧವಾದದ್ದು, ಪಂಪ ಪ್ರಶಸ್ತಿ ವಿಜೇತ ತೀ.ನಂ ಶ್ರೀಕಂಠಯ್ಯನವರು ಆಡಿ, ಬೆಳೆದು ವಿದ್ಯಾಭ್ಯಾಸ ಮಾಡಿದ ತಾಲೂಕು, ಇಲ್ಲಿನ ಕಬ್ಬಿಣದ ಅದಿರಿಗೆ ವಿಶ್ವವ್ಯಾಪ್ತಿ ಬೇಡಿಕೆ ಇದೆ.
ಇದನ್ನೂ ಓದಿ:- ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳ ಬಿರುಸಿನ ಯತ್ನ: ಹೆಚ್.ಡಿಕೆ
ಇಂತಹ ನೂರಾರು ವಿಶೇಷ ಹಾಗೂ ವಿಶಿಷ್ಟತೆ ಹೊಂದಿರುವ ಚಿಕ್ಕನಾಯಕನಹಳ್ಳಿ ಹೆಸರನ್ನು ನಮೂದಿಸುವಲ್ಲಿ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಉದಾಸೀನ ಮಾಡುತ್ತಿರುವುದು ಅತ್ಯಂತ ಖಂಡನೀ ಯವಾಗಿದ್ದು, ಅನೇಕ ಬಾರಿ ವಿವಿಧ ಸಂಘಟನೆ ಹಾಗೂ ಪತ್ರಿಕೆಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಬಸ್ ಬೋರ್ಡ್‌ಗಳಲ್ಲಿ ಹೆಸರಿಲ್ಲ: ಚಿಕ್ಕನಾಯಕನ ಹಳ್ಳಿ ಪಟ್ಟಣದಿಂದ ಆಯ್ದು ಹೋಗುವ ಬಹುತೇಕ ಬಸ್‌ಗಳ ನಾಮಫಲಕದಲ್ಲಿ ಚಿಕ್ಕನಾಯಕನಹಳ್ಳಿ ಹೆಸರು ಇರುವುದಿಲ್ಲ. ಕೆ.ಬಿ ಕ್ರಾಸ್ ಬಳಿ ನಿರ್ಮಾಣವಾಗುತ್ತಿರು ರಸ್ತೆ ಕಾಮಗಾರಿಯ ಲ್ಲಿನ ನೂತನ ನಾಮಫಲಕದಲ್ಲಿ ಚಿಕ್ಕನಾಯಕನಹಳ್ಳಿ ಹೆಸರು ಬದಲು ಹುಳಿಯಾರು ಎಂದು ನಮೂದಿಸ ಲಾಗಿದೆ. ಚಿಕ್ಕನಾಯಕನಹಳ್ಳಿ ದಾಟಿ ಹೋಗದೆ ಹುಳಿಯಾರಿಗೆ ಹೋಗಲು ಹೇಗೆ ಸಾಧ್ಯ ಎಂಬ ಆಕ್ರೋಶವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಹೆಸರಿಗಷ್ಟೇ ತಾಲೂಕು: ಚಿಕ್ಕನಾಯಕನಹಳ್ಳಿಯನ್ನು ಸರ್ಕಾರ ಮೊದಲಿನಿಂದಲೂ ಉದಾಸೀನ ಮಾಡಿಕೊಂಡು ಬರುತ್ತಿವೆ. ಇತ್ತಿಚೀನ ದಿನಗಳಲ್ಲಿ ತಾಲೂಕಿಗೆ ಹೇಮಾವತಿ ನೀರು ಬಂದಿರುವುದು ಬಿಟ್ಟರೆ, ಸರ್ಕಾರ ಅಂತಹ ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿಯೋಜನೆಗಳನ್ನು ನೀಡಿಲ್ಲ. ವಿದ್ಯಾರ್ಥಿಗಳು ಓದಲು ಯಾವುದೇ ತಾಂತ್ರಿಕ ಕಾಲೇಜುಗಳಿಲ್ಲ, ತಾಲೂಕಿನಲ್ಲಿ ಒಂದು ಉದ್ಯೋಗ ನೀಡುವ ಕಾರ್ಖಾನೆಗಳಿಲ್ಲ. ಇಂತಹ ಪರಿಸ್ಥಿತಿ ತಾಲೂಕಿಗೆ ಇರುವುದರಿಂದ ತಾಲೂಕನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಅನುಮಾನವು ಕಾಡುತ್ತಿದೆ.
ದೊಡ್ಡ ಹೆಸರು: ಚಿಕ್ಕನಾಯಕನಹಳ್ಳಿ ಹೆಸರು ದೊಡ್ಡದಾಗಿದ್ದು ಬಳಸಲು, ಬರೆಯಲು ತೊಂದರೆಯಾಗಬಹುದು ಎಂಬ ಕಾರಣದಿಂದಲೂ ಬಹುತೇಕ ಕಡೆ ಚಿಕ್ಕನಾಯಕನಹಳ್ಳಿಯನ್ನು ನಿರ್ಲಕ್ಷ್ಯ ಮಾಡುತ್ತಿರಬಹುದು. ಏನೇ ಇರಲಿ, ಎಲ್ಲ ತಾಲೂಕಿನ ಹೆಸರನ್ನು ನೇರವಾಗಿ ಬಳಸುವ ಇಲಾಖೆ ಚಿಕ್ಕನಾಯಕನಹಳ್ಳಿ ಹೆಸರನ್ನು ಬಳಸದೇ ಇರುವುದು ನಿಜಕ್ಕೂ ವಿಷಾದನೀಯ.
“ಚಿಕ್ಕನಾಯಕನಹಳ್ಳಿ ಅನೇಕ ವಿಷಯಗ ಳಿಂದ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ, ಹೆಸರನ್ನು ಬಸ್ ನಾಮಫಲಕದಲ್ಲಿ ಬಳಸದಿರುವುದು ನಿಜಕ್ಕೂ ಬೆಸರದ ಸಂಗತಿ. ರಾಷ್ಟ್ರೀಯ ಹೆದ್ದಾರಿ ನಾಮಫಲಕದಲ್ಲಿ ಚಿಕ್ಕನಾಯಕನಹಳ್ಳಿ ಹೆಸರು ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.”
– ಹರ್ಷ, ರೈತ ಮೋರ್ಚಾ ಕಾರ್ಯದರ್ಶಿ
– ಚೇತನ್