ಪಣಜಿ: 35 ವರ್ಷಗಳ ಇತಿಹಾಸವಿರುವ ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನಿತ ಸಂಘವಾದ “ಗೋವಾ ಕನ್ನಡ ಸಮಾಜಕ್ಕೆ” ಸ್ವಂತ ಕಚೇರಿ ಮಾಡಿಕೊಳ್ಳಿ ಎಂದು ಕರ್ನಾಟಕ ಸರ್ಕಾರ ಸಲಹೆ ನೀಡಿತ್ತು. ಇದು ಕನ್ನಡಿಗರ ಬಹು ವರ್ಷಗಳ ಕನಸು ಕೂಡಾ ಆಗಿತ್ತು. ಗೋವಾ ಮತ್ತು ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್.ಧ್ರುವಕುಮಾರ್ ರವರು ಕೂಡ ಸದಾ ಸಂಪರ್ಕದಲ್ಲಿದ್ದು ಸಹಕಾರ ನೀಡಿದ್ದರು. ಇಂದು ನಮ್ಮೆಲ್ಲರ ಕನಸು ನನಸಾದಂತಾಗಿದೆ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಹೇಳಿದರು.
ಪಣಜಿಯಲ್ಲಿ ಗೋವಾ ಕನ್ನಡ ಸಮಾಜ ಖರೀದಿಸಿರುವ ಸ್ವಂತ ಕಚೇರಿಯಲ್ಲಿ ತಾಯಿ ಭುವನೇಶ್ವರಿ ಹಾಗೂ ಲಕ್ಷ್ಮೀ ಪೂಜೆ ನೆರವೇರಿಸುವ ಮೂಲಕ ಕಚೇರಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಗೋವಾ ಕನ್ನಡ ಸಮಾಜದ ಎಲ್ಲ ಸದಸ್ಯರ ಹಾಗೂ ಕನ್ನಡಿಗರ ಸಹಾಯ ಸಹಕಾರದಿಂದ ನಾನು ಗೋವಾ ಕನ್ನಡ ಸಮಾಜಕ್ಕೆ ಸ್ವಂತ ಕಚೇರಿ ಖರೀದಿಸಲು ಹೆಚ್ಚಿನ ಪ್ರಯತ್ನ ನಡೆಸಿದೆ. ಇಂದು ನಮ್ಮೆಲ್ಲರ ಕನಸು ನನಸಾಗಿದೆ. ಮುಂಬರುವ ದಿನಗಳಲ್ಲಿಯೂ ಕೂಡ ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಬದಾಮಿ ನುಡಿದರು.
ಇದನ್ನೂ ಓದಿ: ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ: ಶೋಭಾ ಕರಂದ್ಲಾಜೆ
ಕಳೆದ ನಾಲ್ಕು ದಿನಗಳ ಹಿಂದಷ್ಟೇ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಈ ಸಂದರ್ಭದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು. ಶ್ರೀನಾಥ ರಿಂಗೆ ಪೌರೋಹಿತ್ಯದಲ್ಲಿ ಕಛೇರಿಯ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ, ಗೋವಾ ಕೇಸರಿಯ ಶ್ರೀನಿವಾದ್ ಪೈ ಗಂಗೊಳ್ಳಿ, ಮೋಹನ್ ಶೆಟ್ಟಿ, ರಾಘವೇಂದ್ರ ರಾವ್, ಹಿರಿಯ ಕನ್ನಡಿಗರು ಉಪಸ್ಥಿತರಿದ್ದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಅರುಣ್‍ಕುಮಾರ್ ವಂದಿಸಿದರು.