ಪಣಜಿ: ರವಿವಾರ ನಡೆದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುಚಪ್ಪಾಳೆ ಗಿಟ್ಟಿಸಿದ್ದು ಸನ್ಮಾನಿತರಾದ ಐದು ಮಂದಿ ನಟರು ಹಾಗೂ ಚಿತ್ರಸಾಹಿತಿಯ ಪಂಚ ವಾಕ್ಯಗಳು. ಉಳಿದಂತೆ ಚಪ್ಪಾಳೆ ಕೇಳಿಬಂದದ್ದು ಕೆಲವರ ಭಾಷಣ ಮುಗಿಸಲು.
ಸಂತೋಷವಾಗಿರುವುದೇ ಬದುಕಿನ ಗುಟ್ಟು, ಇನ್ನೊಬ್ಬರ ಸಂತೋಷವನ್ನು ನಾವೂ ಅನುಭವಿಸುತ್ತಾ ಬದುಕುವುದು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವುದರ ರಹಸ್ಯ. ಜತೆಗೆ ಬೆಳಗ್ಗೆ ಬೇಗ ಏಳುವುದು ನಮ್ಮ ಆರೋಗ್ಯ ಹಾಗೂ ಬದುಕನ್ನು ಗಟ್ಟಿಗೊಳಿಸುತ್ತದೆ.. ಮೊದಲಿನೆರಡು ವಾಕ್ಯಗಳು ಎಲ್ಲ ಮಹಾತ್ಮರು ಹೇಳಿದ್ದು, ನಮ್ಮಹಿರಿಯರು ಅನುಸರಿಸಿದ್ದು. ಮೂರನೆಯದ್ದೂ ಸಹ ಹಿರಿಯರೇ ಸಾಬೀತುಪಡಿಸಿದ್ದು. ಅದನ್ನೀಗ ಮತ್ತೆ ಹೇಳಿ ನನ್ನ ಹಾಗೆ ನೀವೂ ಬೇಗ ಏಳಿ, ಚೆನ್ನಾಗಿರಿ ಎಂದದ್ದು ಬಾಲಿವುಡ್ ನಟ ಹಾಗೂ ಕನ್ನಡ ನಾಡಿನ ಕರಾವಳಿಯ ಸುನಿಲ್ ಶೆಟ್ಟಿ.
ನಿರೂಪಕ ‘ಏನ್ಸಾರ್ ಈಗಲೂ ಹಾಗೇ ಇದ್ದೀರಿ’ ಎಂಬ ಪ್ರಶ್ನೆಗೆ ಸುನಿಲ್ ಶೆಟ್ಟಿ ಉತ್ತರಿಸಿದ ರೀತಿ. ನಮ್ಮ ಬದುಕು ಚೆನ್ನಾಗಿರಬೇಕೆಂದರೆ ನಾವು ಸಂತೋಷವಾಗಿರಬೇಕು. ಉಳಿದವರ ಸಂತೋಷವನ್ನು ನಮ್ಮ ಸಂತೋಷವೆಂಬಂತೆ ಅನುಭವಿಸಬೇಕು. ಜತೆಗೆ ಬೆಳಗ್ಗೆ ಬೇಗ ಎದ್ದೇಳಬೇಕು. ಮುಂಬಯಿಯಲ್ಲಿ ಸಾಮಾನ್ಯವಾದ ಒಂದು ಮಾತಿದೆ. ಇಬ್ಬರೇ ಬೇಗ ಏಳುತ್ತಾರೆ. ಒಬ್ಬ ಹಾಲಿನವನು [ದೂದ್‌ವಾಲ] ಹಾಗೂ ಮತ್ತೊಬ್ಬ ಸುನಿಲ್ ಶೆಟ್ಟಿ !.ಸಭಿಕರಿಂದ ಜೋರಾದ ಚಪ್ಪಾಳೆ.
Related Articles
ಸಿನಿಮಾ ಹೆಚ್ಚು ಪ್ರಜಾಸತ್ತಾತ್ಮಕ
ಸಿನಿಮಾ ಉದ್ಯಮ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಯಾವ ಪ್ರತಿಭೆ ಎಲ್ಲಿಂದ ಬೇಕಾದರೂ ಧಿಗ್ಗನೆ ಬೆಳಗಬಹುದು. ಅದಕ್ಕೆ ಯಾವ ತಡೆಯೂ ಇಲ್ಲ. ಯಾರು ಬೇಕಾದರೂ ತಮ್ಮ ಕಥೆಯನ್ನು ಹೇಳಬಹುದು. ಅದೇ ಸಿನಿಮಾದ ಸ್ವಾತಂತ್ರ್ಯ ಮತ್ತು ಸೊಗಸು ಎಂದವರು ನಟ ಮನೋಜ್ ಬಾಜಪೇಯಿ.
ನನಗೆ ಎಲ್ಲವೂ ಇಷ್ಟ
ನಟ ಅಜಯ್ ದೇವಗನ್, ಸಿನಿಮಾವೇ ಮುಖ್ಯವಾಗಿ ನನಗೆ ಇಷ್ಟ. ನಾವು ಬದುಕಿರುವುದೇ ಸಿನಿಮಾಕ್ಕಾಗಿ, ಸಿನಿಮಾ ಮಾಡುವುದಕ್ಕಾಗಿ. ಹಾಗಾಗಿ ನಟನೆ, ನಿರ್ದೇಶನ, ನಿರ್ಮಾಣ ಎಂದೆಲ್ಲಾ ಪ್ರತ್ಯೇಕಿಸಿ ನೋಡುವ ಆಲೋಚನೆಯೇ ನನಗೆ ಹಿಡಿಸದು. ಇಡಿಯಾಗಿ ಸಿನಿಮಾವೇ ನನ್ನ ಉಸಿರು ಎಂದಾಗ ಜೋರಾದ ಚಪ್ಪಾಳೆ.
ಒಳ್ಳೆಯವರು ಸಿಕ್ಕರು, ಒಳ್ಳೆ ಪಾತ್ರಗಳು ಸಿಕ್ಕವು
ನಾನು ಒಳ್ಳೆಯ ಪಾತ್ರಗಳನ್ನು ಮಾಡಲಿಕ್ಕೆ ಹಲವರು ಕಾರಣ. ನನಗೆ ಒಳ್ಳೆಯ ಬರಹಗಾರರು ಸಿಕ್ಕರು, ಒಳ್ಳೆಯ ನಿರ್ದೇಶಕರು ಸಿಕ್ಕರು, ಒಳ್ಳೆಯ ಪಾತ್ರಗಳನ್ನು ಸೃಷ್ಟಿಸಿದರು, ಅವು ನನ್ನ ಪಾಲಾದವು. ನಾನು ದಕ್ಕಿಸಿಕೊಳ್ಳಲು ಪ್ರಯತ್ನಿಸಿದೆ. ಇಲ್ಲವಾದರೆ ಎಂಥೆಂಥೋ ಪಾತ್ರಗಳು ಬಂದು ಬಿಡುತ್ತಿದ್ದವು. ಎಷ್ಟಿದ್ದರೂ ನಾವು ದುಡ್ಡಿಗಾಗಿ ನಟಿಸುವವರಲ್ಲವೇ? ಎಂದು ಹಿರಿಯ ನಟ ಪರೇಶ್ ರಾವಲ್ ಡೈಲಾಗ್ ಡೆಲಿವರಿಯಂತೆ ಮಾತನಾಡಿದಾಗ ಸಭಿಕರಿಂದ ಮತ್ತೊಮ್ಮೆ ಚಪ್ಪಾಳೆ.
ಇವರಂತೆ ಬದುಕಿ
ಚಿತ್ರ ಸಾಹಿತಿ ವಿಜಯೇಂದ್ರ ಪ್ರಸಾದ್ ಅವರದ್ದು ಎರಡೇ ವಾಕ್ಯದ ಭಾಷಣ. ಯುವ ಲೇಖಕರಿಗೆ ಕಿವಿಮಾತು ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ, ’ನಾನು ಗಾಂಧೀಜಿಯಿಂದ ಸ್ಫೂರ್ತಿ ಪಡೆದವನು. ನೀವೂ ಅವರಿಂದ ಸ್ಫೂರ್ತಿ ಪಡೆದು ಅವರಂತೆ ಸರಳವಾಗಿ ಬದುಕಿ’ ಎಂದರು. ಕಿಸೆಯಲ್ಲಿದ್ದ ನೂರರ ನೋಟನ್ನು ತೆಗೆದು ಅದರಲ್ಲಿದ್ದ ಗಾಂಧಿ ಚಿತ್ರ ತೋರಿಸಿ ‘ಈ ಗಾಂಧಿ’ಯನ್ನು ಎಂದು ಉಲ್ಲೇಖಿಸಿದಾಗ ಸಭಿಕರಿಂದ ಜೋರಾದ ಕರತಾಡನ.