Advertisement

IFFI Goa; ಭಾರತ ವಿಶಿಷ್ಟ ಕಥಾನಕಗಳ ಕಣಜ: ಶೇಖರ್ ಕಪೂರ್

06:20 PM Nov 27, 2023 | Team Udayavani |

ಪಣಜಿ: ಭಾರತೀಯ ಸಿನಿಮಾ ತನ್ನ ಅನನ್ಯ ಕಥಾನಕಗಳ ಮೂಲಕ ಜಾಗತಿಕ ಸಿನಿಮಾ ಲೋಕವನ್ನು ಶ್ರೀಮಂತಗೊಳಿಸಿದೆ. ಭಾರತ ವಿಶಿಷ್ಟ ಕಥೆಗಳ ಕಣಜ ಎಂಬುದು ಅಂತಾರಾಷ್ಟ್ರೀಯ ಸಿನಿಮಾ ವಿಭಾಗ ಸ್ಪರ್ಧೆಯ ತೀರ್ಪುಗಾರರ ಸಮಿತಿ ಅಧ್ಯಕ್ಷ ಹಾಗೂ ಸಿನಿಮಾ ನಿರ್ದೇಶಕ ಶೇಖರ್ ಕಪೂರ್ ಅಭಿಪ್ರಾಯಪಟ್ಟರು.

Advertisement

ಇಫಿ ಚಿತ್ರೋತ್ಸವದಲ್ಲಿ ಒಟ್ಟೂ ಸಿನಿಮಾ ಜಗತ್ತಿನ ಕುರಿತು ಮಾತನಾಡುತ್ತಾ, “ಭಾರತದಲ್ಲಿ ಇಡೀ ವಿಶ್ವದಲ್ಲೇ ಇರದಷ್ಟು ಕಥಾನಕಗಳಿವೆ. ಜತೆಗೆ ತಂತ್ರಜ್ಞಾನದ ನೆಲೆಯಲ್ಲೂ ಹೊಸ ಆವಿಷ್ಕಾರಗಳಾಗುತ್ತಿವೆ. ಹಾಗಾಗಿ ಸಿನಿಮಾ ಕ್ಷೇತ್ರದಲ್ಲಿನ ಭಾರತದ ಪ್ರಗತಿಗೆ ಯಾರೂ ಸರಿಸಾಟಿಯಿಲ್ಲ. ಇಫಿಯಂಥ ಚಲನಚಿತ್ರೋತ್ಸವಗಳ ಮೂಲಕ ಭಾರತದ ಸಂಸ್ಕೃತಿ ಜಗತ್ತಿಗೆ ಪರಿಚಯವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ ಕುರಿತೂ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ʼಸೃಜನಶೀಲ ಕೃತಿಗೆ ಸಮನಾದುದು ಯಾವುದೂ ಇಲ್ಲʼ ಎಂದು ಸ್ಪಷ್ಟಪಡಿಸಿದರು. ಒಂದು ಸಿನಿಮೋತ್ಸವದಲ್ಲಿ ಭಾಗವಹಿಸುವುದರಿಂದ ಹಲವಾರು ಲಾಭಗಳಿವೆ. ಬಹುಮುಖ್ಯವಾಗಿ ವೈವಿಧ್ಯಮಯ ಸಿನಿಮಾಗಳ ಪರಿಚಯವಾಗುತ್ತದೆ. ಅದರೊಂದಿಗೆ ಮಾರುಕಟ್ಟೆಯ ಹೊಸ ಸಾಧ್ಯತೆಗಳು, ಸಂಪರ್ಕಗಳು ಸಾಧ್ಯವಾಗುತ್ತವೆ. ಫಿಲ್ಮ್ ಬಜಾರ್ ನಂಥ ಪ್ರಯತ್ನಗಳಿಂದ ಸಂಯಕ್ತವಾಗಿ ಮಾಡಬಹುದಾದ ಯೋಜನೆಗಳಿಗೆ ಅನುಕೂಲವಾಗುತ್ತವೆ ಎಂದು ಹೇಳಿದವರು ಸಮಿತಿ ಸದಸ್ಯ ಜೆರೋಮ್ ಪಿಲ್ಲರ್ಡ್.

ಸಿನಿಮೋತ್ಸವ ಸಿನಿಮಾ ಹಂಚಿಕೆದಾರರು ಹಾಗೂ ನಿರ್ಮಾಪಕರಿಗೂ ಅನುಕೂಲವಾಗಬೇಕು ಅಗ ಹೊಸ ಯೋಜನೆಗಳ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಆ ಕೆಲಸವನ್ನು ಇಫಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದವರು ಸಮಿತಿ ಸದಸ್ಯೆ ಕೆಥರೀನ್ ಡಸರ್ಟ್.ಇಫಿ ಮೂಲಕ ವಿವಿಧ ಸಿನಿಮಾ ಜಗತ್ತುಗಳು ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದವರು ಸಮಿತಿ ಸದಸ್ಯೆ ಹೆಲೆನ್ ಲೇಕ್.

ಈ ಬಾರಿ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಒಟ್ಟು 15 ಚಿತ್ರಗಳು ಸೆಣಸುತ್ತಿವೆ. ಇವುಗಳಲ್ಲಿ 12ವಿದೇಶಿ ಚಿತ್ರಗಳಿದ್ದರೆ, ಮೂರು ಭಾರತೀಯ ಚಿತ್ರಗಳಿವೆ. ಅವುಗಳ ಪೈಕಿ ಕನ್ನಡದ ರಿಷಬ್ ಶೆಟ್ಟಿಯ ಕಾಂತಾರವೂ ಇದೆ. ಅದಲ್ಲದೇ ಅತ್ಯುತ್ತಮ ನಟ, ನಟಿ, ತೀರ್ಪುಗಾರರ ವಿಶೇಷ ಪ್ರಶಸ್ತಿಗಳಿವೆ. ಈ ಬಾರಿ ಚಿತ್ರೋತ್ಸವದಲ್ಲಿ ಭಾಗವಹಿಸಲು ಒಟ್ಟು 105 ದೇಶಗಳಿಂದ 2, 926 ಪ್ರವೇಶಗಳು ಬಂದಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next