Advertisement
ಬುಧವಾರ ಸಂಜೆ ಸುಮಾರು 6:30 ಕ್ಕೆ ಆರಂಭವಾದ ಉದ್ಘಾಟನೆ ಸಮಾರಂಭ ಮುಗಿದಾಗ ಸುಮಾರು 9.45. ಆರಂಭದ ಹೊತ್ತಿಗೆ ಬಹುತೇಕ ತುಂಬಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣ 7.45 ರ ಹೊತ್ತಿಗಾಗಲೇ ಖಾಲಿಯಾಗ ತೊಡಗಿತ್ತು. ಕಾರ್ಯಕ್ರಮ ಮುಗಿಯುವಾಗ ಇದ್ದವರು ಲೆಕ್ಕಕ್ಕೆ ಸಿಗುವಷ್ಟು.
Related Articles
Advertisement
ಇದೆಂಥಾ ಕಾರ್ಯಕ್ರಮ :
ಉದ್ಘಾಟನಾ ಕಾರ್ಯಕ್ರಮದ ಮಧ್ಯೆ ಮೂರ್ನಾಲ್ಕು ನೃತ್ಯಗಳು ಬಿಟ್ಟರೆ ಬೇರೇನೂ ಇರಲಿಲ್ಲ. ಚಿತ್ರರಂಗದ ನಾಲ್ಕು ದಿಗ್ಗಜರ ಶತಮಾನೋತ್ಸವ ಸಂಸ್ಮರಣೆ ಕುರಿತು ಹಿರಿಯ ನಟ ಬೊಮನ್ ಇರಾನಿಯವರ ವಿವರಣೆಯೊಂದು ಸ್ವಲ್ಪ ಖುಷಿ ನೀಡಿತು. ಉಳಿದಂತೆ ಎಲ್ಲವೂ ನೀರಸ.
ಚಿತ್ರರಂಗದವರೆಲ್ಲಿ?:
ಉದ್ಘಾಟನೆ ಕಾರ್ಯಕ್ರಮದ ವೇದಿಕೆಯ ಮೇಲೂ ಸಿನಿಮಾ ರಂಗದವರು ಎಲ್ಲಿ ಎಂದು ದೀಪ ಹಿಡಿದು ಹುಡುಕುವಂಥ ಪರಿಸ್ಥಿತಿ ಇತ್ತು. ಕೇಂದ್ರ ಸಚಿವರಿಬ್ಬರ ಗೈರು ಹಾಜರಿ ಮಧ್ಯೆ ಮುಖ್ಯಮಂತ್ರಿ, ಸ್ಥಳೀಯ ಸಂಸದರು, ರಾಜ್ಯ ಸಭಾ ಸದಸ್ಯರು – ಹೀಗೆ ಎಲ್ಲರೂ ರಾಜಕಾರಣಿಗಳೇ. ಇವರ ಮಧ್ಯೆ ಚಿತ್ರರಂಗದ ಪರ ಎಂಬಂತೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರಕರ ಅವರೊಬ್ಬರೇ ಇಡೀ ಚಿತ್ರರಂಗದ ಪ್ರತಿನಿಧಿಯಂತೆ ಕಂಡು ಬಂದರು. ಗುರೂಜಿ ಶ್ರೀ ರವಿಶಂಕರ್ ಉತ್ಸವಕ್ಕೆ ಚಾಲನೆ ನೀಡಿದರೇನೋ ಸರಿ. ಆದರೆ ಇವರಿಗೂ ಸಿನಿಮೋತ್ಸವಕ್ಕೂ ಏನು ಸಂಬಂಧವೆಂಬುದು ಕೊನೆವರೆಗೂ ಸ್ಪಷ್ಟವಾಗಲಿಲ್ಲ.
ಹಿಂದೆಲ್ಲ ಅಮಿತಾಬ್ ಬಚ್ಚನ್, ರಜನೀಕಾಂತ್, ಸುದೀಪ್ ರಂಥ ನಟರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಶತಮಾನೋತ್ಸವ ಸ್ಮರಣೆಯ ನೆಪದಲ್ಲಿ ನಾಗಾರ್ಜುನ, ಅಮಲಾ ಬಂದಿದ್ದು ಬಿಟ್ಟರೆ ಉಳಿದವರ ಸಂಖ್ಯೆ ಕಡಿಮೆ.
ನಮ್ಮದೊಂದು ಪ್ರಶ್ನೆ..
ಸಾಮಾನ್ಯವಾಗಿ ಅತಿಥಿಗಳನ್ನು ವೇದಿಕೆಗೆ ಕರೆದಾಗ ಬಂದು ಮಾತನಾಡುವುದು ಸಹಜ. ಎರಡು ವರ್ಷಗಳ ಹಿಂದೆ ಈ ಮಾತಿನ ಭರಾಟೆ ತಪ್ಪಿಸಲು ನಿರೂಪಕರು ಪ್ರಶ್ನೆ ಶುರು ಮಾಡಿದರು. ಈಗ ಆ ಪ್ರಶ್ನೆಗಳೇ ತೀರಾ ಹಾಸ್ಯಾಸ್ಪದವೆನಿಸಿ “ಹಿಂದಿನದೇ ಉತ್ತಮವಾಗಿತ್ತು” ಎಂಬಂತಾಗಿದೆ. ಈ ಬಾರಿಯೂ ನಿರೂಪಕರೂ ಪ್ರತಿ ಅತಿಥಿಗೂ ʼನಮ್ಮದೊಂದು ಪ್ರಶ್ನೆʼ (ಕೆಲವರಿಗೆ ಎರಡು ಮೂರು ಪ್ರಶ್ನೆ, ಕಿರು ಸಂದರ್ಶನ) ಎಂದು ಕೇಳುತ್ತಿದ್ದರು. ಯಾಕೆಂದರೆ, ಹತ್ತಾರು ಅತಿಥಿಗಳಿಗೆ ನೂರಾರು ಪ್ರಶ್ನೆಗಳು.ಪ್ರೇಕ್ಷಕರಂತೂ ಪ್ರಶ್ನೆಗಳಿಗೂ ಸುಸ್ತು, ಉತ್ತರಕ್ಕೂ ಸುಸ್ತು.
ಸಿನಿಮಾ ಅಲ್ಲ, ಧಾರಾವಾಹಿ !
ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಕಂಡಾಗ ಬಹಳಷ್ಟು ಪ್ರೇಕ್ಷಕರಿಗೆ ಎನಿಸಿದ್ದು ʼಇದು ಸಿನಿಮಾವಲ್ಲ, ಮೆಗಾ ಧಾರಾವಾಹಿ”. ಈಗ ಸಿನಿಮಾಗಳೂ ಎರಡೂವರೆ ಗಂಟೆಯಿಂದ ಒಂದೂವರೆ ಗಂಟೆಗೆ ಇಳಿದಿದೆ. ಇಂಥ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮವೇ ಮೂರೂವರೆ ಗಂಟೆಯಾದರೆ ? ಅದು ಮೆಗಾ ಧಾರಾವಾಹಿ. ಟಿವಿಗಳಲ್ಲಿ ನಡೆಯುವ ಸಿನಿಮಾ ಪ್ರಶಸ್ತಿಗಳ ಕಾರ್ಯಕ್ರಮದ ನಕಲು ಮಾಡಿದ್ದರ ಪರಿಣಾಮ ಇದು ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಟಿವಿ ಚಾನೆಲ್ ಗಳಲ್ಲಿ ಇದು ನೇರ ಪ್ರಸಾರವಾಗುವ ಕಾರಣ, ಜಾಹೀರಾತಿಗೆ ಹೊಂದಿಸಿಕೊಳ್ಳಲು ಹೀಗೇ ಎಳೆಯುತ್ತಿದ್ದಾರೆ ಎಂಬ ಅಭಿಪ್ರಾಯವೂ ಪ್ರೇಕ್ಷಕರಿಂದ ವ್ಯಕ್ತವಾಯಿತು. ಮುಂದಿನ ಬಾರಿಯಾದರೂ ಈ ಉದ್ಘಾಟನಾ ಕಾರ್ಯಕ್ರಮವನ್ನು ಸೊಗಸಾಗಿ, ಹೆಚ್ಚು ಆಸಕ್ತಿಕರವಾಗಿ ಮಾಡಬೇಕೆಂಬುದು ಪ್ರೇಕ್ಷಕರ ಆಗ್ರಹ.
ಹಾಗಾಗಿ ಕೊನೆಗೂ ಕಾರ್ಯಕ್ರಮದಿಂದ ಹೊರ ಬರುವಾಗ ನೆನಪಿನಲ್ಲಿ ಉಳಿದದ್ದು ಒಂದೇ- ತಾಲಿಯಾ ತಾಲಿಯಾ ಜೋರ್ ದಾರ್ ತಾಲಿಯಾ !
ಹಾಗಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಾರ್ಯಕ್ರಮವನ್ನು ಇಷ್ಟೊಂದು ಸುಂದರಗೊಳಿಸಿದ್ದಕ್ಕೆ ನಿರೂಪಕರಿಗೆ ತಾಲಿಯಾ ತಾಲಿಯಾ ಜೋರ್ ದಾರ್ ತಾಲಿಯಾ