ಧಾರವಾಡ: ಯುವಶಕ್ತಿಯ ಸಕಾರಾತ್ಮಕ ಆಲೋಚನೆ ಮತ್ತು ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದೇವರಹುಬ್ಬಳ್ಳಿ ಗ್ರಾಮದ ಸಿದ್ದಾಶ್ರಮದಲ್ಲಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ವಿಶ್ವಗುರು ಆಗಲು ಯುವ ಶಕ್ತಿ ಒಗ್ಗೂಡಬೇಕು. ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ, ಸೇವೆ ಮಾಡಲು ಸದಾ ಸಿದ್ಧರಿರಬೇಕು. ಸಮಾಜದ ಅಂಕು-ಡೊಂಕುಗಳನ್ನು ಸೌಜನ್ಯಯುತವಾಗಿ ಬಗೆಹರಿಸಿಕೊಂಡು ಯುವ ಶಕ್ತಿ ಸಂಘಟನಾತ್ಮಕವಾಗಿ ಪ್ರಖರ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದರು.
ಕೆಲವು ಕುತಂತ್ರ ರಾಜಕಾರಣಿಗಳ ಪ್ರತಿಫಲವಾಗಿ ಜಾತಿ ವ್ಯವಸ್ಥೆ ಸದಾ ಹೆಡೆ ಎತ್ತಿ ನಿಲ್ಲುವಂತಾಗಿದೆ. ಆದರೆ ಹಿಂದೂ ಸಮಾಜ ಜಾತಿ-ಜಾತಿಗಳನ್ನು ಮರೆತು ಒಗ್ಗೂಡಿದಾಗ ಮಾತ್ರ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ತನ್ನ ಭವ್ಯತೆ ಮರಳಿ ಪಡೆಯುವ ಸಮಯ ಒದಗಿಬಂದಿದೆ ಎಂದು ಹೇಳಿದರು.
ಭಾರತದ ಭವ್ಯ ಪರಂಪರೆಯನ್ನು ಪುನರ್ ನಿರ್ಮಿಸುವ ಸಂಕಲ್ಪವನ್ನು ಯುವಕರು ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕೃಷಿ, ಕೈಗಾರಿಕೆ, ಅಭಿವೃದ್ಧಿ ಹಾಗೂ ರಕ್ಷಣೆ ದೃಷ್ಟಿಯಿಂದ ಇಂದು ವಿಶ್ವದಲ್ಲಿಯೇ ಭಾರತ ತಲೆ ಎತ್ತಿ ನಿಂತಿದೆ. ಉಕ್ರೇನ್ ದೇಶದ ಪ್ರಧಾನಿಯು ಯುದ್ಧ ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಹೇಳಿದಾಗ, ಭಾರತ ಈಗ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ಎಲ್ಲರೂ ಅರಿಯಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಯನಾಳದ ಚಿಕ್ಕರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಭಾರತವು ಪ್ರಾಚೀನ ಪರಂಪರೆಯ ಜತೆಗೆ ಆಧುನಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುವುದು ಯುವಕರ ಕೈಯಲ್ಲಿದೆ ಎಂದರು.