Advertisement

ಭಾರತವನ್ನು ತಿಳಿಯಬೇಕಾದರೆ ವಿವೇಕಾನಂದರನ್ನು ಓದಿ

10:03 AM Jan 13, 2020 | mahesh |

ಭಾರತಕ್ಕೆ ಇಂದು ಕನಿಷ್ಠ ಒಂದು ಸಾವಿರ ಯುವಕರು ಬೇಕು. ಭಾರತಿಯ ಹಿತಕ್ಕಾಗಿ ಜೀವವನ್ನೇ ಅರ್ಪಿಸುವಂಥವರು, ಬಡವರಿಗೆ ಅನ್ನ, ಅನುಕಂಪ, ಬೆಳಕು ನೀಡಲು ಸಿದ್ಧವಿರುವ ತ್ಯಾಗೀ ಪುರುಷರು ಬೇಕು. ಪೂರ್ವಿಕರ ದೌರ್ಜನ್ಯದಿಂದಾಗಿ ಪಶು ಸದೃಶರಾದ ಜನತೆಯಲ್ಲಿ ಹೋರಾಡುವ ಕಿಚ್ಚನ್ನು ಹೊತ್ತಿಸ ಬಲ್ಲ ಜನರು ಬೇಕು.

Advertisement

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ. ಭಾರತ ಮಾತೆಯ ಹೆಸರನ್ನು ಗಗನಕ್ಕೆ ಪಸರಿಸಿದ ಪ್ರಖ್ಯಾತರಲ್ಲಿ ಒಬ್ಬರಾದ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಬೇಕಾದ ಮತ್ತು ಅವರ ಉಪಕಾರ ಸ್ಮರಣೆ ಮಾಡಬೇಕಾದ ಸುಸಂದರ್ಭ. ವಿವೇಕಾನಂದರು ಅದ್ಭುತ ದೇಶಭಕ್ತ, ಚಿಂತಕ, ಧಾರ್ಮಿಕ ನಾಯಕ. ಮಾನವೀಯರಾಗಿ ಬದುಕುವುದನ್ನು ಕಲಿಸಿದ, ಆತ್ಮ ಜಾಗೃತಿ ಹೊಂದುವಂತೆ ಬೋಧಿಸಿದ ಸಂತ. ಸುಮಾರು 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಅವರು ಬಂಗಾಲ ಮತ್ತು ಭಾರತದ ಇನ್ನಿತರ ರಾಜ್ಯಗಳ ಸಾಂಸ್ಕೃತಿಕ ನವೋದಯಕ್ಕೆ ಕಾರಣ ರಾದರು. ಸ್ವಾತಂತ್ರ್ಯ ಪೂರ್ವದ ಬಹುತೇಕ ನಾಯಕರಿಗೆ ಸ್ಫೂರ್ತಿಯಾದರು. ಗಾಂಧಿ, ನೆಹರೂ, ಬೋಸ್‌, ರಾಜಗೋಪಾಲಾಚಾರಿ ಮುಂತಾದವರು ಅವರ ಮಾತು ಗಳಿಂದ ಪ್ರಭಾವಿತರಾಗಿದ್ದರು.

ಬಡವರ ಕುರಿತು ಕರುಣೆ
ಭಾರತ ಹಿಂದುಳಿಯಲು ಮುಖ್ಯ ಕಾರಣ ಬಡವರ ಶೋಷಣೆ ಮತ್ತು ಉಪೇಕ್ಷೆ ಎಂಬುದನ್ನು ಹೇಳಿದವರು ಸ್ವಾಮಿ ವಿವೇಕಾನಂದರು. ಅವರು ಜನರಿಗಾಗಿ ಮಾತಾಡಿದ ಮೊತ್ತ ಮೊದಲ ಧಾರ್ಮಿಕ ನಾಯಕ. ದುರ್ದೆಸೆಯಲ್ಲಿದ್ದ ಬಡವರ ಕುರಿತು ಬೆಳಕು ಚೆಲ್ಲಿ ರಾಷ್ಟ್ರದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿ ದರು. ಸಾವಿರಗಟ್ಟಲೆ ಸಂಖ್ಯೆಯಲ್ಲಿ ಹಸಿವಿನಿಂದ ಒದ್ದಾಡುತ್ತಿರುವವರ, ನಿರ್ಲಕ್ಷ್ಯಕ್ಕೆ ಒಳಗಾದವರತ್ತ ಗಮನ ಹರಿಸದ ಸುಶಿಕ್ಷಿತ ವರ್ಗ ಎಂದು ಕರೆಸಿಕೊಂಡವರನ್ನು ನಾನು ದೇಶದ್ರೋಹಿ ಗಳೆಂದು ಭಾವಿಸುತ್ತೇನೆ ಎಂಬ ಅವರ ಹೇಳಿಕೆಯಿಂದ ಪ್ರಭಾವಿತರಾಗಿ ಲಕ್ಷಾಂತರ ತರುಣ, ತರುಣಿಯರು ಸಮಾಜ ಸೇವೆಯನ್ನು ತಮ್ಮ ಬದುಕಿನ ದಾರಿಯನ್ನಾಗಿಸಿಕೊಂಡಿದ್ದರು.

ರೈತರ ಮನನ
1893ರಲ್ಲಿ ಅವರು ಅಮೆರಿಕಕ್ಕೆ ತೆರಳುವ ಮುನ್ನ ಒಬ್ಬ ಅತಿ ಸಾಮಾನ್ಯ ಸಂತನಂತೆ ಭಾರತದುದ್ದಕ್ಕೂ ತಿರುಗಾಡಿದ್ದರು. ಅವರು ಭಾರತದ ಲಕ್ಷಾಂತರ ಜನರು ತುಂಬಾ ಹಿಂದುಳಿ ದಿದ್ದಾರೆ ಎಂಬ ವಿಷಯ ಅರಿತುಕೊಂಡದ್ದು ಈ ಸಮಯದಲ್ಲೇ. ಭಾರತ ಹಿಂದುಳಿಯಲು ಕಾರಣ ಅನ್ನ ಬೆಳೆಯುವ ರೈತನ ಕಡೆಗಣನೆಯೇ ಎಂಬುದಾಗಿ ಹೇಳಿದ್ದರು. ಅವರೆಲ್ಲರ ಆರ್ಥಿಕ ಸ್ಥಿತಿಯನ್ನು ಉತ್ತಮ ಗೊಳಿಸಲು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಕಲಿಸಿ ಕೊಡಬೇಕು, ಗ್ರಾಮೋದ್ಯೋಗಗಳ ಕುರಿತು ಅರಿವು ಮೂಡಿಸಬೇಕು ಎಂದಿದ್ದರು. ಜಾತಿ ಪದ್ಧತಿ ಕಂಡು ಬೇಸರಗೊಂಡಿದ್ದರು. ಅವರು ಅಮೆರಿಕದಿಂದ ಹಿಂದಿರುಗಿದ ಮೇಲೆ ಇಲ್ಲಿನ ಜನರಲ್ಲಿ ಮುಖ್ಯವಾಗಿ ಯುವ ಜನಾಂಗದಲ್ಲಿ ಧಾರ್ಮಿಕ ಮತ್ತು ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸಲು ಹಾಗೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಹೆಮ್ಮೆ ಮೂಡಿಸಲು ಪ್ರಯತ್ನಿಸಿದರು.

ರಾಮಕೃಷ್ಣ ಮಿಶನ್‌ ಸ್ಥಾಪನೆ
ಹಿಂದುಳಿದ ಜನರಲ್ಲಿ ಜಾಗೃತಿ ಮೂಡಿಸಲೆಂದೇ ಅವರು 1897ರಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ಅನ್ನು ಸ್ಥಾಪಿಸಿದರು. ರಾಮಕೃಷ್ಣ ಮಿಷನ್‌ ಅವತ್ತಿನಿಂದ ಇವತ್ತಿನವರೆಗೂ ನಮ್ಮ ದೇಶದಲ್ಲಿ ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿದೆ. ಎಲ್ಲರಲ್ಲೂ ಮಾನವೀಯತೆ ಇರಬೇಕು ಅನ್ನುವುದು ಸ್ವಾಮೀಜಿಯ ಆಶಯವಾಗಿತ್ತು.

Advertisement

ಜನಸೇವೆಯೇ ಜನಾರ್ದನ ಸೇವೆ ಅನ್ನುವುದು ಅವರ ಎಲ್ಲ ಸಮಾಜ ಸೇವೆಗಳ ಹಿಂದಿನ ಪರಮ ಸತ್ಯವಾಗಿತ್ತು. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಬೆಳೆಯಬೇಕು, ಅವರೊಳಗಿನ ಶಕ್ತಿಯನ್ನು ಜಾಗೃತಗೊಳಿಸಬೇಕು ಅನ್ನುವುದು ಅವರ ಪ್ರಮುಖ ಉದ್ದೇಶವಾಗಿತ್ತು. “ನೀವು ಮೇಲ್ಪದರವನ್ನು ಬಿಟ್ಟು ಆಳಕ್ಕೆ ಹೋದಂತೆ ನಿಮಗೆ ಮಾನವರ ನಡುವಿನ ಏಕತೆ, ಜನಾಂಗಗಳ ನಡುವಿನ ಒಗ್ಗಟ್ಟು, ಮೇಲು ಮತ್ತು ಕೀಳು, ಶ್ರೀಮಂತಿಕೆ ಮತ್ತು ಬಡತನ, ದೇವರು ಮತ್ತು ಮಾನವರು, ಮಾನವರು ಮತ್ತು ಪ್ರಾಣಿಗಳ ನಡುವಿನ ಏಕತೆ ಕಾಣುತ್ತಾ ಹೋಗುತ್ತದೆ. ಆಳಕ್ಕೆ ಹೋದಂತೆಲ್ಲ ಎಲ್ಲವೂ ಒಂದೇ ಆಗಿ ಕಾಣಿಸುತ್ತದೆ. ಯಾರಿಗೆ ಈ ಏಕತೆಯ ಭಾವನೆ ಉಂಟಾಗುತ್ತದೋ ಅವರು ಮರುಳುತನವನ್ನು ಕಳೆದುಕೊಳ್ಳುತ್ತಾರೆ ಎಂದಿದ್ದರು ಸ್ವಾಮೀಜಿ.

Advertisement

Udayavani is now on Telegram. Click here to join our channel and stay updated with the latest news.

Next