Advertisement

Desi swara ಯೋಚಿಸಿದರೆ ಪರಿಹಾರ ಸಿಗುವುದು

07:25 PM Nov 25, 2023 | Team Udayavani |

ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಅವನು ಸೇಬು ಹಣ್ಣುಗಳ ಕೃಷಿ ಮಾಡುತ್ತಿದ್ದ. ಅವನು ಉತ್ಕೃಷ್ಟ ಮಟ್ಟದ ಸೇಬಿನ ಹಣ್ಣುಗಳನ್ನು ಬೆಳೆಯುತ್ತಿದ್ದುದರಿಂದ ಜನಪ್ರಿಯವಾಗಿದ್ದ. ಇದರಿಂದ ಅವನ ಕುಟುಂಬದಲ್ಲಿಯೂ ಬಹಳ ನೆಮ್ಮದಿಯ ವಾತಾವರಣವಿತ್ತು. ಕಷ್ಟಪಟ್ಟು ಕೆಲಸ ಮಾಡಿ ಕೊನೆಗೆ ಸುಖ ಪಡೆಯುತ್ತಿದ್ದ ಅವನ ಮುಖದಲ್ಲಿ ಏನೋ ಸಾಧಿಸಿದ ಭಾವ.

Advertisement

ಹೀಗಿರುವಾಗ ಒಂದು ದಿನ ತನ್ನ ಸೇಬಿನ ತೋಟಕ್ಕೆ ತನ್ನ ಮುದ್ದಿನ ಸಾಕುನಾಯಿಯ ಜತೆ ತೆರಳಿದ್ದ. ಈ ಸಂದರ್ಭದಲ್ಲಿ ಕೆಲವೊಂದು ಮರಗಳಲ್ಲಿ ಒಳ್ಳೆಯ ಸೇಬುಗಳ ಜತೆ ಹಾಳಾದ, ರೋಗಗ್ರಸ್ಥ ಸೇಬುಗಳು ಇರುವುದನ್ನು ನೋಡಿ, ಇವುಗಳನ್ನು ಹಾಗೆಯೇ ಬಿಟ್ಟರೆ ಉಳಿದ ಸೇಬಿಗೂ ರೋಗ ಹರಡಿ ಹಾಳಾಗಬಹುದು ಎಂದುಕೊಳ್ಳುತ್ತಾನೆ. ಆದರೆ ಅವುಗಳು ಎತ್ತರದಲ್ಲಿರುವುದರಿಂದ ಅವುಗಳನ್ನು ಏನು ಮಾಡಬಹುದೆಂದು ಚಿಂತೆಗೊಳಗಾಗುತ್ತಾನೆ.
ಹಾಗಿದ್ದರೂ ದೋಟಿಯ ಸಹಾಯದಿಂದ ಆ ಹಾಳಾದ ಸೇಬುಗಳನ್ನು ಬೀಳಿಸಲು ಮುಂದಾಗುತ್ತಾನೆ. ಕಲ್ಲುಗಳನ್ನು ಎಸೆಯುತ್ತಾನೆ. ಹೀಗೆ ತನ್ನ ಕೈಲಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಾನೆ. ಆದರೂ ಯಾವುದೇ ಉಪಾಯಗಳು ಫ‌ಲಿಸುವುದಿಲ್ಲ. ಬಳಿಕ ಇದೇ ಗುಂಗಿನಲ್ಲಿ ನೇರವಾಗಿ ಮನೆಗೆ ತೆರಳುತ್ತಾನೆ.

ರೈತ ಸಪ್ಪೆಯಾಗಿ ತಲೆಯ ಮೇಲೆ ಕೈಯಿಟ್ಟು ಕುಳಿತಿರಬೇಕಾದರೆ, ಮನೆಯ ಹಿಂಬದಿಯಿಂದ ದಡಾರ್‌! ಎಂಬ ಶಬ್ದವೊಂದು ಕೇಳಿಬರುತ್ತದೆ. ಏನದು ಶಬ್ದವೆಂದು ರೈತ ಹೋಗಿ ನೋಡುವಾಗ ತನ್ನ ಸಾಕುನಾಯಿಯು ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದಾಗ ಅಕಾಸ್ಮಾತ್‌ ಆಗಿ ನೇರವಾಗಿರಿಸಿದ್ದ ಏಣಿಯನ್ನು ಬೀಳಿಸಿತ್ತು. ಇದನ್ನು ನೋಡಿದ ರೈತನಿಗೆ ತನ್ನ ಸಾಕುನಾಯಿ ತನಗೋಸ್ಕರ ಉಪಾಯವೊಂದನ್ನು ನೀಡಿತು ಎಂದು ಬಹಳ ಖುಷಿ ಪಡುತ್ತಾನೆ. ಅನಂತರ ಏಣಿ ಸಹಾಯದಿಂದ ಎಲ್ಲ ಹಾಳಾದ ಸೇಬುಗಳನ್ನು ಉದುರಿಸಿ ನಿಟ್ಟುಸಿರು ಬಿಡುತ್ತಾನೆ.
ಇಲ್ಲಿ ನಿಜವಾಗಿಯೂ ನಾಯಿ ಸಹಾಯ ಮಾಡಿತೇ? ಅಥವಾ ಕೇವಲ ಕಾಕತಾಳೀಯವೇ ಸ್ಪಷ್ಟತೆಯಿಲ್ಲವಾದರೂ, ನೀತಿಯನ್ನಂತೂ ರೈತನಿಗೆ ಕಲಿಸಿಕೊಟ್ಟಿತು. ಕಷ್ಟ ಬಂತೆಂದು ಸುಮ್ಮನೆ ಕುಳಿತರೆ ಎಂದಿಗೂ ಆ ಕಷ್ಟವನ್ನು ಪರಿಹರಿಸಲು ಸಾಧ್ಯವಿಲ್ಲ ಬದಲಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಕಷ್ಟ ಬಂತೆಂದರೆ ಅದನ್ನು ಪರಿಹರಸಲು ಏನೆಲ್ಲ ಉಪಾಯಗಳನ್ನು ಮಾಡಬಹುದೆಂದು ಯೋಚಿಸಿ ನಿರ್ಧರಿಸಿದರೆ, ಸತತವಾಗಿ ಪ್ರಯತ್ನಿಸುತ್ತಿದ್ದರೆ ಖಂಡಿತವಾಗಿಯೂ ಕಷ್ಟಗಳಿಂದ ಹೊರಬರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next