ಮೊಹಾಲಿ: ಖುಷಿಯಿಂದ ಆಡಿದರೆ ಯಶಸ್ಸು ಗಳಿಸಲು ಸಾಧ್ಯ ಎಂಬುದಾಗಿ ಪಂಜಾಬ್ ಕಿಂಗ್ಸ್ ತಂಡದ ನೂತನ ಕೋಚ್ ಟ್ರೆವರ್ ಬೈಲಿಸ್ ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ವಿಕೆಟ್ ಉಳಿಸಿಕೊಳ್ಳುವುದು, ಡೆತ್ ಓವರ್‌ಗಳಲ್ಲಿ ಸಿಡಿದು ನಿಲ್ಲಬೇಕಾದುದು ತಂಡದ ತುರ್ತು ಅಗತ್ಯ ಎಂಬುದಾಗಿ ವಿಶ್ವಕಪ್ ವಿಜೇತ ತಂಡದ ಕೋಚ್ ಎಂಬ ಹೆಗ್ಗಳಿಕೆಯ ಟ್ರೆವರ್ ಬೈಲಿಸ್ ಹೇಳಿದರು.
“ಕಳೆದ ವರ್ಷ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಫಿನಿಶ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಇಂಥ ಸಮಸ್ಯೆ ಮರುಕಳಿಸಬಾರದು. ಇದಕ್ಕಾಗಿಯೇ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಆರಿಸಿಕೊಂಡಿದ್ದೇವೆ” ಎಂದು ಆಸ್ಟ್ರೇಲಿಯದ ಅನುಭವಿ ಕೋಚ್ ಬೈಲಿಸ್ ಹೇಳಿದರು. ಕಳೆದ ಹರಾಜಿನಲ್ಲಿ ಕರನ್ 18.60 ಕೋಟಿ ರೂ.ಗಳ ದೊಡ್ಡ ಮೊತ್ತಕ್ಕೆ ಪಂಜಾಬ್ ಪಾಲಾಗಿದ್ದರು.
“ಅಗ್ರ ಕ್ರಮಾಂಕದಲ್ಲಿ ಯಾರಾದರೊಬ್ಬರು ಕ್ರೀಸ್ ಆಕ್ರಮಿಸಿಕೊಂಡು 70-80 ರನ್ ಪೇರಿಸಿದರೆ ಮಧ್ಯಮ ಕ್ರಮಾಂಕದವರು ಒತ್ತಡರಹಿತವಾಗಿ ಆಡಬಹುದು. ಮುಖದಲ್ಲಿ ನಗು ಹೊಮ್ಮಿಸುತ್ತ ಆಟವನ್ನು ಆನಂದಿಸಿದರೆ ಯಶಸ್ಸು ಸಾಧ್ಯ” ಎಂದರು.
ಜಾನಿ ಬೇರ್‌ಸ್ಟೊ ಬೇರ್ಪಟ್ಟದ್ದು ತಂಡಕ್ಕೆ ಎದುರಾದ ಹಿನ್ನಡೆ ಎಂಬುದನ್ನು ಟ್ರೆವರ್ ಬೈಲಿಸ್ ಒಪ್ಪಿಕೊಂಡರು. ಆದರೆ ತಮ್ಮದೇ ದೇಶದ ಮ್ಯಾಥ್ಯೂ ಶಾರ್ಟ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ಶಿಖರ್ ಧವನ್ ಜತೆಗೆ ಇನ್ನಿಂಗ್ಸ್ ಆರಂಭಿಸುವ ಆಯ್ಕೆಗಳಲ್ಲಿ ಶಾರ್ಟ್ ಕೂಡ ಒಬ್ಬರು ಎಂದರು.
ಕಾಗಿಸೊ ರಬಾಡ ಹೊರತುಪಡಿಸಿ ಉಳಿದೆಲ್ಲ ವಿದೇಶಿ ಕ್ರಿಕೆಟಿಗರು ಮೊದಲ ಪಂದ್ಯದಿಂದಲೇ ಲಭ್ಯರಾಗಲಿದ್ದಾರೆ. ರಬಾಡ ದ್ವಿತೀಯ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದಾಗಿ ಬೈಲಿಸ್ ಹೇಳಿದರು.