Advertisement

ನೋಟಿಸ್‌ ಬಂದರೆ ರಸ್ತೆಯಲ್ಲೇ ನಿಂತು ಉತ್ತರ ಕೊಡ್ತೀನಿ 

03:50 AM Feb 23, 2017 | Team Udayavani |

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಅತೃಪ್ತಿ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ವಿರುದ್ಧವೇ ಬಹಿರಂಗ ವಾಗಾœಳಿಯೂ ನಡೆಯುತ್ತಿದೆ.  ಶ್ರೀನಿವಾಸಪ್ರಸಾದ್‌, ಎಸ್‌.ಎಂ.ಕೃಷ್ಣ ನಿರ್ಗಮನ, ಅದರ ಬೆನ್ನಲ್ಲೇ  ಕುಮಾರ್‌ಬಂಗಾರಪ್ಪ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇನ್ನೂ ಹಲವು ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬ ಮಾತುಗಳೂ ಚಾಲ್ತಿಯಲ್ಲಿವೆ. ಪಕ್ಷದ ಹಿರಿಯ ನಾಯಕರಾದ ಜಾಫ‌ರ್‌ ಷರೀಫ್, ಜನಾರ್ಧನಪೂಜಾರಿ, ಎಚ್‌.ವಿಶ್ವನಾಥ್‌  ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧವೇ ಬಹಿರಂಗ ವಾಗಾಳಿಯಲ್ಲೂ ತೊಡಗಿದ್ದಾರೆ. ಜನಾರ್ದನ ಪೂಜಾರಿ ಹಾಗೂ ಎಚ್‌.ವಿಶ್ವನಾಥ್‌ ಅವರಿಗೆ ನೋಟಿಸ್‌ ನೀಡುವ ಮಟ್ಟಕ್ಕೂ ಇದು ಹೋಗಿದೆ. ಜನಾರ್ದನ ಪೂಜಾರಿ, “ಕಾಂಗ್ರೆಸ್‌ ನನ್ನ ಪ್ರಾಣ, ಕುತ್ತಿಗೆ ಕೊಯ್ದರೂ ಪಕ್ಷ ಬಿಡಲ್ಲ’ ಎಂದಿದ್ದಾರೆ. ಎಚ್‌.ವಿಶ್ವನಾಥ್‌, “ನನಗೆ ನೋಟಿಸ್‌ ಕೊಟ್ಟರೆ ಬೀದಿಯಲ್ಲೇ ನಿಂತು ಉತ್ತರ ಕೊಡ್ತೇನೆ’ ಅಂತಲೂ ಹೇಳಿದ್ದಾರೆ. ಇದು ಪಕ್ಷದೊಳಗಿನ ಸಂಘರ್ಷವಾದರೆ, ಹೈಕಮಾಂಡ್‌ಗೆ ಕಪ್ಪ ಕೊಡುವುದು ಹಾಗೂ ಭ್ರಷ್ಟಾಚಾರ ಹಾದಿ -ಬೀದಿಯ ಚರ್ಚಾ ವಿಷಯವಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿನ ಬೆಳವಣಿಗೆ, ರಾಜ್ಯ ರಾಜಕಾರಣ ಸಾಗುತ್ತಿರುವ ಹಾದಿ, ಹೈಕಮಾಂಡ್‌ಗೆ ಕಪ್ಪ ಕೊಡುವ ವಿಚಾರದ ಬಗ್ಗೆ  ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಮಾಜಿ ಸಂಸದರೂ ಆದ ಎಚ್‌.ವಿಶ್ವನಾಥ್‌ ಜತೆ ನೇರಾ -ನೇರಾ ಮಾತಿಗೆಳೆದಾಗ… 

Advertisement

ಏನ್‌ ಸಾರ್‌, ಇತ್ತೀಚೆಗೆ ಪಕ್ಷದಲ್ಲಿ ಹಿರಿಯರೆಲ್ಲಾ ಒಬ್ಬೊಬ್ಬರಾಗಿ ಬಂಡಾಯದ ಬಾವುಟ ಹಾರಿಸಿದಂತಿದೆಯಲ್ಲಾ? 
ಆ ರೀತಿ ಏನೂ ನನಗೆ ಕಾಣಿಸುತ್ತಿಲ್ಲ. ತಪ್ಪುಗಳಾದಾಗ ಹಿರಿಯರು ತಿದ್ದಬೇಕಲ್ಲವಾ? ಅದನ್ನು ಬಂಡಾಯ ಅಂದ್ರೆ ಹೇಗೆ? ಹಿರಿಯರ ಸಲಹೆ-ಸೂಚನೆ ಪರಿಗಣಿಸಬೇಕು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುದ್ಧಿವಾದ ಹೇಳಿದ್ದಕ್ಕೆ ಪೂಜಾರಿಗೆ ನೋಟಿಸ್‌ ಕೊಡಲು ಎಐಸಿಸಿಗೆ ಶಿಫಾರಸು ಮಾಡಿ ನಿಮಗೂ ನೋಟಿಸ್‌ ಕೊಟ್ಟಿದ್ದಾರಂತೆ? 
ನೋಡಿ, ನಾನಾಗಲಿ, ಜಾಫ‌ರ್‌ ಷರೀಫ್, ಜನಾರ್ಧನ ಪೂಜಾರಿಯವರಾಗಲಿ ಎಂದೂ ಪಕ್ಷ ಮತ್ತು ಪಕ್ಷದ ನಾಯಕತ್ವದ ವಿರುದ್ಧ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರ ವರ್ತನೆಗಳು ಸರಿ ಇಲ್ಲದಿದ್ದಾಗ ಮಾತನಾಡಿದ್ದೇವೆ. ಪಕ್ಷ ನಮಗೆ ತಾಯಿ ಸಮಾನ. ನನಗೆ ಯಾವುದೇ ನೋಟಿಸ್‌ ಬಂದಿಲ್ಲ, ಬಂದರೆ ಅದಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಕೊಡ್ತೇನೆ.  

ನೋಟಿಸ್‌ ಬಂದರೆ ರಸ್ತೆಯಲ್ಲೇ ನಿಂತು ಉತ್ತರ ಕೊಡ್ತೀನಿ ಅಂದಿದ್ರಿ? 
ನನ್ನ ಮಾತಿನ ಅರ್ಥ, ಬಹಿರಂಗವಾಗಿಯೇ ನೋಟಿಸ್‌ ಕೊಟ್ಟರೆ ಬಹಿರಂಗವಾಗಿಯೇ ಉತ್ತರ ಕೊಡಬೇಕಲ್ಲ 

ಕಾಂಗ್ರೆಸ್‌ನಲ್ಲಿ ಪಕ್ಷ ನಿಷ್ಠರಿಗೆ ನೋಟಿಸ್‌ ಕೊಡುವ ಸ್ಥಿತಿ ಬಂತಾ? 
ಬರಬಾರದಿತ್ತು. ಜಾಫ‌ರ್‌ ಷರೀಫ್, ಜನಾರ್ಧನ ಪೂಜಾರಿ ಪಕ್ಷ ಕಟ್ಟಿದವರು. ಅಂತವರಿಗೆ ನೋಟಿಸ್‌ ನೀಡುವುದು ಸರಿಯೂ ಅಲ್ಲ. ತಪ್ಪು ಸರಿಪಡಿಸಿಕೊಂಡರೆ ಸಾಕಲ್ಲವೇ. ಹೈಕಮಾಂಡ್‌ ಸಹ ಎಲ್ಲವನ್ನೂ ಗಮನಿಸುತ್ತಿದೆ ಅಂದುಕೊಂಡಿದ್ದೇನೆ. 

Advertisement

ನಿಜಕ್ಕೂ ಹಿರಿಯರ ಕೋಪ ಯಾರ ಮೇಲೆ? 
ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಮತ್ತು ಸರ್ಕಾರದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರ ವರ್ತನೆ ಬದಲಾಗಬೇಕಿದೆ. 

ಪಕ್ಷದ ಹಿರಿಯರ ಜತೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷರು ಸಭೆ ಕರೆದರೆ ಹೋಗಿಲ್ಲವಂತೆ? 
ಇಲ್ಲ. ಸಭೆಯೇ ನಡೆದಿಲ್ಲ. ನಾವು ಸಭೆಗೆ ಹೋಗಬೇಕು ಎನ್ನುವಷ್ಟರಲ್ಲಿ ಸಭೆ ಮುಂದೂಡಿರುವುದು ಗೊತ್ತಾಯಿತು. 

ಸಭೆಗೆ ನಿಮಗೆ ಆಹ್ವಾನ ಕೊಟ್ಟಿರಲಿಲ್ಲವೇ? 
ನಮಗೆ ಆಹ್ವಾನ ಕೊಡಬೇಕು ಎನ್ನುವಷ್ಟರಲ್ಲಿ ಕಾರಣಾಂತರಗಳಿಂದ ಸಭೆಯೇ ರದ್ದಾಯಿತು ಎಂಬುದು ನನಗಿರುವ ಮಾಹಿತಿ. 

ಶ್ರೀನಿವಾಸಪ್ರಸಾದ್‌, ಎಸ್‌.ಎಂ.ಕೃಷ್ಣ ನಿರ್ಗಮನ ಕಾಂಗ್ರೆಸ್‌ಗೆ ನಷ್ಟವಲ್ಲವೇ? 
ಖಂಡಿತ. ಇಬ್ಬರೂ ನಾಯಕರ ನಿರ್ಗಮನ ಪಕ್ಷಕ್ಕೆ ನಷ್ಟವೇ. ಎಸ್‌.ಎಂ.ಕೃಷ್ಣ ಅವರಂತೂ ರಾಷ್ಟ್ರೀಯ ಮಟ್ಟದ ನಾಯಕರು. ರಾಜಕಾರಣದಲ್ಲಿ ತನ್ನದೇ ಆದ ವ್ಯಕ್ವಿತ್ವ, ಘನತೆ ಹೊಂದಿರುವವರು. ಕೃಷ್ಣ ಅವರು ಕಾಂಗ್ರೆಸ್‌ಗೆ ಓಟನ್ನು ತಂದವರು ಹಾಗೂ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ್ನು ವಿಜಯದ ಗೋಲಿಗೆ ಹತ್ತಿರ ತರಿಸುವ ಶಕ್ತಿಯುಳ್ಳವರು. ಶ್ರೀನಿವಾಸಪ್ರಸಾದ್‌ ಅವರು ತಮ್ಮದೇ ಆದ ಪ್ರಭಾವವುಳ್ಳವರು. ಹೀಗಾಗಿ, ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಇವರಿಬ್ಬರ ನಿರ್ಗಮನ ನಷ್ಟವೇ.  

ಹೈಕಮಾಂಡ್‌ ಈ ಇಬ್ಬರು ನಾಯಕರ‌ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಹುದಿತ್ತಲ್ಲಾ? 
ಹೌದು. ಹೈಕಮಾಂಡ್‌ ಮಧ್ಯಪ್ರವೇಶ ಅಗತ್ಯವಿತ್ತು. ಆದರೆ, ಯಾಕೆ ಮೌನವಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ನೋಡಿ. ಕೆಲವರು ಇರ್ತಾರೆ. ಅಯ್ಯೋ ಹೋಗ್ಲಿ ಬಿಡಿ ಸಾರ್‌, ಒಂದು ಎಂಎಲ್‌ಎ ಗೆಲ್ಲಿಸಲು ಶಕ್ತಿಯಿಲ್ಲ. 10 ಸಾವಿರ ಮತ ಕೊಡಿಸುವ ಸಾಮರ್ಥ್ಯ ಇಲ್ಲ ಅಂತ ಲಘುವಾಗಿ ಮಾತನಾಡ್ತಾರೆ. ಆದರೆ, ಅದು ಪಕ್ಷದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತವರಿಂದಲೇ ಪಕ್ಷದ ಶಕ್ತಿ ಕುಸಿಯುತ್ತದೆ. 

ಕಾಂಗ್ರೆಸ್‌ನಲ್ಲಿ ಇನ್ನೂ ಹಲವಾರು ಹಿರಿಯ ನಾಯಕರು ನಿರ್ಗಮನ ಯೋಚನೆಯಲ್ಲಿದ್ದಾರಂತಲ್ಲಾ? 
ಇರಬಹುದು. ಬಹಳ ನಾಯಕರಿಗೆ ನೋವಾಗಿದೆ. ನಮ್ಮನ್ನು ಕರೆದು ಮಾತನಾಡಿಸೋರು ಇಲ್ಲ ಎಂಬ ಬೇಸರ ಇದೆ. ಹಿರಿಯ ನಾಯಕರಿಗೆ ಅಂತಸ್ತು, ಆಸ್ತಿ, ಹಣ, ಅಧಿಕಾರದ  ಪ್ರಶ್ನೆ ಬರುವುದಿಲ್ಲ. ಹಿರಿತನಕ್ಕೆ ಗೌರವ ಕೊಡಬೇಕು ಎಂಬುದಷ್ಟೇ ಬಯಕೆ. ಮನಸ್ಸಿಗೆ ಘಾಸಿಯಾದಾಗ ತೀರ್ಮಾನ ಸಹಜ. ಆದರೆ, ಅಧಿಕಾರದಲ್ಲಿರುವವರು ಅದಕ್ಕೆ ಅವಕಾಶ ನೀಡಬಾರದು. 

ನಂಜನಗೂಡು ಉಪ ಚುನಾವಣೆಗೆ ಬೇರೆ ಪಕ್ಷಗಳಿಂದ ಅಭ್ಯರ್ಥಿಯನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಅಂತ ಹೇಳಿದ್ರಿ, ಆದ್ರೂ ಜೆಡಿಎಸ್‌ನಿಂದ ಕರೆತಂದರಲ್ಲಾ? 
ನಿಜ. ಕಾಂಗ್ರೆಸ್‌ನಲ್ಲೂ ಅಭ್ಯರ್ಥಿಗಳಾಗಲು ಅರ್ಹತೆ ಇದ್ದ ನಾಯಕರ ಕೊರತೆ ಇರಲಿಲ್ಲ. ಹೀಗಾಗಿಯೇ ನಾನು ಹೇಳಿದ್ದೆ. ಇದೀಗ ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿ ಅವರನ್ನು ಕರೆದಂತಾಗಿದೆ. ಅವರೇ ಅಭ್ಯರ್ಥಿ ಅಂತಲೂ ನಿರ್ಧಾರ ಆಗಿದೆ. ಈಗ ಅವರನ್ನು ಗೆಲ್ಲಿಸಿಕೊಳ್ಳುವುದಷ್ಟೇ ನಮ್ಮ ಗುರಿ. ಪಕ್ಷದಲ್ಲಿ ಒಮ್ಮೆ ತೀರ್ಮಾನ ಆದರೆ ಎಲ್ಲರೂ ಅದನ್ನು ಒಪ್ಪಬೇಕು. 

ನಿಜ ಹೇಳಿ ಸಾರ್‌, ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಹೇಗಿದೆ?
ಚೆನ್ನಾಗಿದೆಯಲ್ಲಾ.  

ಹಾಗಲ್ಲ ಸಾರ್‌, ನಿಮ್ಮ ಸರ್ಕಾರ ನಾಲ್ಕು ವರ್ಷಗಳತ್ತ ಸಾಗಿದೆ. ಸಾಧನೆ ಮಾಡಿದೆ ಅನ್ಸುತ್ತಾ? 
ಖಂಡಿತ. ಸಿದ್ದರಾಮಯ್ಯ ಸರ್ಕಾರ ಒಳ್ಳೆಯ ಯೋಜನೆ-ಕಾರ್ಯಕ್ರಮ ಕೊಟ್ಟಿದೆ. ಆದರೆ, ಅದು ಜನರಿಗೆ ಮುಟ್ಟಿಸುವ ಕೆಲಸ ಆಗುತ್ತಿಲ್ಲ, ಮಾಡಿದ ಸಾಧನೆ ಜನರಿಗೆ ತಿಳಿಸುವ ಕೆಲಸವೂ ಆಗುತ್ತಿಲ್ಲ. ಅಲ್ಲಿ ಲೋಪವಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ನೀವು ಹೇಳಬಹುದಲ್ಲಾ? 
ಪಕ್ಷದ ವೇದಿಕೆಯಲ್ಲಿ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇನೆ. ಸರಿಪಡಿಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟದ್ದು. 

ಸಿದ್ದರಾಮಯ್ಯ ವಿರುದ್ಧವೇ ಹಿರಿಯರಿಗೆ ಅಸಮಾಧಾನ ಎಂಬ ಮಾತಿದೆ. ಅವರನ್ನು ಕಾಂಗ್ರೆಸ್‌ಗೆ ಕರೆತರಲು ನೀವೂ ಕಾರಣ, ನಿಮಗೆ ತಪ್ಪು ಮಾಡಿದೆ ಎಂದು ಅನಿಸುತ್ತಿದೆಯಾ?
ಇಲ್ಲ. ಆಗಿನ ರಾಜಕೀಯ ಸಂದರ್ಭದ ಅನಿವಾರ್ಯತೆ ಹಾಗಿತ್ತು. ಕಾಂಗ್ರೆಸ್‌ ಸಮುದ್ರ ಇದ್ದಂತೆ ಸಾಕಷ್ಟು ನಾಯಕರಿಗೆ ಆಶ್ರಯ ಕೊಟ್ಟಿದೆ. ಆದರೆ, ಇಲ್ಲಿ ಬಂದವರು ಹಿರಿಯರನ್ನು ಗೌರವಿಸಬೇಕಲ್ಲವೇ. ಪಕ್ಷದಲ್ಲಿ ಚಲ್ತಾ ಹೈ ವರ್ತನೆ ಸರಿಯಲ್ಲ. ಪಕ್ಷದಿಂದ ಅಧಿಕಾರ ಪಡೆದವರಿಗೆ ವಿಧೇಯತೆ ಇರಬೇಕು, ಪಕ್ಷದಿಂದ ಬೆಳೆದವರು ಪಕ್ಷ ಬೆಳೆಸಬೇಕು. ಹಿರಿಯರಿಗೆ ಗೌರವ ಕೊಡದಿದ್ದರೆ ಹೇಗೆ? 

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ಎಸ್‌.ಎಂ.ಕೃಷ್ಣ ತಪ್ಪು ಮಾಡಿದರು ಅಂತ ಜಾಫ‌ರ್‌ ಷರೀಫ್ ಹೇಳಿದ್ದಾರಲ್ಲ? 
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಲು ಜಾಫ‌ರ್‌ ಷರೀಫ್ ಅವರ ಪಾತ್ರವೂ ಇದೆ. ನಾನೇ ಸಿದ್ದರಾಮಯ್ಯ ಅವರನ್ನು ಷರೀಫ್ ಸಾಹೇಬರ ಮನೆಗೆ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಹೈಕಮಾಂಡ್‌ಗೆ ಶಿಫಾರಸು ಮಾಡಿ ಎಂದು ಹೇಳಿದ್ದೆ. ಆಗ ಷರೀಫ್ ಸಾಹೇಬರು ದೊಡ್ಡ ಮನಸ್ಸಿನಿಂದ ಸಿದ್ದರಾಮಯ್ಯ ಬರಲಿ ಪಕ್ಷಕ್ಕೆ ಶಕ್ತಿ ಬರುತ್ತೆ ಅಂತ ಹೇಳಿದ್ದರು. 

ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗ್ತಾರಂತೆ? 
ಆಗಲಿ ಬಿಡಿ. ಅದೆಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನಂತೂ ಡಾ.ಜಿ.ಪರಮೇಶ್ವರ್‌ಗೆ ನೇರವಾಗಿಯೇ ಹೇಳಿದ್ದೇನೆ. ಸಚಿವಗಿರಿ ಬಿಡಿ, ಚುನಾವಣೆಗೆ ಒಂದು ವರ್ಷ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ  ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟಿಸಿ, ಸರ್ಕಾರದ ಸಾಧನೆ-ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ ಅಂತ. ಗೃಹ ಸಚಿವ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷ ಹೀಗೆ ನಾನಾ ಹುದ್ದೆಗಳಲ್ಲಿದ್ದಾಗ ಯಾವುದಕ್ಕೂ ನ್ಯಾಯ ಒದಗಿಸಲಾಗುವುದಿಲ್ಲ. 

ಬಿಜೆಪಿಯವರು 150 ಟಾರ್ಗೆಟ್‌, ಜೆಡಿಎಸ್‌ 130 ಟಾರ್ಗೆಟ್‌.  ಕಾಂಗ್ರೆಸ್‌ನದು? 
ಅಯ್ಯೋ ಟಾರ್ಗೆಟ್‌ ವರ್ಕ್‌ಔಟ್‌ ಆಗಬೇಕಲ್ಲಾ. ಭ್ರಮಾಲೋಕದಲ್ಲಿ ಇರುವವರಿಗೆ ಏನು ಹೇಳಕ್ಕಾಗುತ್ತೆ. ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸಬೇಕಲ್ಲವೇ? ನೋಡಿ. ಇಂದು ರಾಜ್ಯ ರಾಜಕೀಯ ವಿಚಿತ್ರ ತಿರುವಿಗೆ ಬಂದು ನಿಂತಿದೆ, ಮುಂದೆ ಕಾದು ನೋಡಿ. 

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನೀವು ಕಣಕ್ಕಿಳಿಯುತ್ತೀರಾ?
ಇಲ್ಲ. ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ. 

ಹೈಕಮಾಂಡ್‌ಗೆ ಕಪ್ಪ ಕೊಡುವ ವಿಚಾರ ದೊಡ್ಡ ಸದ್ದು ಮಾಡುತ್ತಿದೆಯಲ್ಲಾ? 
ಸದ್ದು ಮಾಡುವವರು ಇದ್ದಾಗ ಸದ್ದು ಆಗುವುದು ಸಹಜ ಅಲ್ಲವೇ. 

ಹೈಕಮಾಂಡ್‌ಗೆ ಕಪ್ಪ ಕೊಡುವ ಸಂಸ್ಕೃತಿ ಇದೆಯಾ? 
ಕಪ್ಪ ಕೊಡುವ ಸಂಸ್ಕೃತಿ ಕೇವಲ ರಾಜಕೀಯ ಪಕ್ಷಗಳಿಗೆ ಹಾಗೂ ಈಗಿನ ಸಂದರ್ಭಕ್ಕೆ ಸೀಮೀತವಲ್ಲ. ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. 

ಹಾಗಾದರೆ, ಹೈಕಮಾಂಡ್‌ಗೆ ಕಪ್ಪ ಕೊಡುವುದನ್ನು ನೀವು ಒಪ್ಪುತ್ತೀರಿ? 
ಇಲ್ಲಿ ನಾನು ಒಪ್ಪುವ ಪ್ರಶ್ನೆ ಅಲ್ಲ. ಅದು ಎಲ್ಲ ಕಾಲದಲ್ಲೂ ಇದ್ದದ್ದೇ. ಆದರೆ, ಯಾರೂ ಕಿವಿ ಬಳಿ ಬಂದು ಕಪ್ಪ ಕೊಡುತ್ತಿದ್ದೇನೆ ಎಂದು ಹೇಳುವುದಿಲ್ಲ. 

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಅದೇ ವಿಚಾರದಲ್ಲಿ ಮಾತಿನ ಸಮರ ನಡೆಯುತ್ತಿದೆಯಲ್ಲಾ? 
ನೋಡಿ, ಈ ವಿಚಾರದಲ್ಲಿ ಒಂದು ರೀತಿಯಲ್ಲಿ ಐಲು ಪೈಲು ಎಂಬಂತೆ ಮಾತನಾಡಲಾಗುತ್ತಿದೆ. ಇಬ್ಬರೂ ಮುಖಂಡರು ರಾಷ್ಟ್ರೀಯ ಪಕ್ಷಕ್ಕೆ ಸೇರಿದವರು. ರಾಜ್ಯದ ಜನತೆ ನಮ್ಮನ್ನು ನೋಡುತ್ತಿದ್ದಾರೆ ಎಂಬ ಅರಿವು ಇಬ್ಬರಿಗೂ ಇರಬೇಕು. ಯಡಿಯೂರಪ್ಪ ಅವರು ಹುಚ್ಚುಚ್ಚಾಗಿ ಮಾತನಾಡಬಾರದು.

ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರಲ್ಲಾ? 
ಯಾರು ಯಾರನ್ನು ಜೈಲಿಗೆ ಹಾಕಿಸಲು ಸಾಧ್ಯ. ಇದೊಂದು ಬಾಲಿಶ ಹೇಳಿಕೆ. ಚೈಲ್ಡಿಶ್‌ ಆಗಿ ಮಾತನಾಡಬಾರದು. 

ಯಡಿಯೂರಪ್ಪ ಕಪ್ಪ ಕೊಟ್ಟಿದ್ದಾರೆ ಅಂತಾರೆ, ಸಿದ್ದರಾಮಯ್ಯ ದಾಖಲೆ ತೋರಿÕ ಅಂತಾರೆ, ಕುಮಾರಸ್ವಾಮಿ, ಕಾಂಗ್ರೆಸ್‌-ಬಿಜೆಪಿ ರಾಜ್ಯದ ಸಂಪತ್ತು ಲೂಟಿ ಮಾಡಿ  ಕಪ್ಪ ಕೊಟ್ಟಿವೆ ಅಂತಾರೆ. ಯಾವುದು ಸತ್ಯ, ಯಾವುದು ಸುಳ್ಳು? 
ಸತ್ಯ -ಸುಳ್ಳು ಅವರವರಿಗೆ ಮಾತ್ರ ಗೊತ್ತು. ಎಚ್‌.ಡಿ.ದೇವೇಗೌಡರು ಹಿಂದೆ ಕಪ್ಪ ಕೊಟ್ಟವರೆ. ಇದೀಗ ಅವರೇ ಪಕ್ಷದ ಹೈಕಮಾಂಡ್‌, ಹೀಗಾ ಗಿ, ಸಮಸ್ಯೆ ಇಲ್ಲ. ಹಿಂದೆ ಹಾಗಿರಲಿಲ್ಲವಲ್ಲಾ. ನನಗೆ ಅದೇ ಬೇಸರ. ಜೆಡಿಎಸ್‌ನವ್ರು  ಇವರ ಬಗ್ಗೆ ಮಾತನಾಡುವ ರೀತಿ ಆಯ್ತಲ್ಲಾ ಅಂತ. 

ಹಳ್ಳಿ ಹಕ್ಕಿಯ ಹಾಡು’ “ಮತಸಂತೆ’ ನಂತರ ಮುಂದೆ ? 
ಗ್ರೀಕ್‌ ಇತಿಹಾಸದ ಬಗ್ಗೆ ಕೃತಿ ಬರೆಯುತ್ತಿದ್ದೇನೆ. 

ಎಚ್‌.ವಿಶ್ವನಾಥ್‌ ಮಾಜಿ ಸಂಸದ, ಹಿರಿಯ ಕಾಂಗ್ರೆಸ್‌ ಮುಖಂಡ 

Advertisement

Udayavani is now on Telegram. Click here to join our channel and stay updated with the latest news.