ಹರಿಹರ: ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದನ್ನು ದಾಂಪತ್ಯ ಬದುಕಿಗೆ ಕಾಲಿಡುತ್ತಿರುವ ಎಲ್ಲಾ ವಧು-ವರರು ನೆನಪಿಟ್ಟುಕೊಳ್ಳಬೇಕು ಎಂದು ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು. ನಗರ ಸಮೀಪವಿರುವ ಗುತ್ತೂರು ಗ್ರಾಮದಲ್ಲಿ ಗಂಗಾಪರಮೇಶ್ವರಿ ಟ್ರಸ್ಟ್ ಹಾಗೂ ವಿರಾಂಜನೇಯ ಸ್ವಾಮಿ ನೂತನ ರಥದ ಕಳಾಸರೋಹಣ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸಾರದಲ್ಲಿ ತಾಳ್ಮೆ ಬಹು ಮುಖ್ಯ, ವ್ಯಕ್ತಿ ವ್ಯಕ್ತಿಗಳ ಮಧ್ಯೆ ಬರುವಂತೆ ಗಂಡ-ಹೆಂಡತಿ ನಡುವೆಯೂ ಭಿನ್ನಾಭಿಪ್ರಾಯಗಳು ಸಾಮಾನ್ಯ ಆದರೆ ಸಿಟ್ಟಿಗೆ ಬುದ್ದಿಕೊಡದೆ ತಾಳ್ಮೆಯಿಂದ ಆಲೋಚಿಸಬೇಕು. ಕೂಡಿ ಬಾಳುವುದರಲ್ಲಿ ಸ್ವರ್ಗಕ್ಕಿಂತ ಹೆಚ್ಚಿನ ಸುಖ ಪಡೆಯಲು ಸಾಧ್ಯ ಎಂದು ಹಿರಿಯರು ಹೇಳಿದಂತೆ ಮನೆಯ ಎಲ್ಲಾ ಸದಸ್ಯರೊಂದಿಗೂ ಸಾಮರಸ್ಯದಿಂದ ಬಾಳಬೇಕು ಎಂದರು.
ಗುತ್ತೂರು ಗ್ರಾಮಸ್ಥರು ಹಣದಲ್ಲಿ ಶಕ್ತಿವಂತರಾಗಿದ್ದು, ಶ್ರಮಕ್ಕೆ, ಗುರು ಸೇವೆಗೆ ಕೊರತೆ ಇಲ್ಲ. ಪಂಚ ಪೀಠಾಧಿ ಧೀಶ್ವರರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಈ ದೊಡ್ಡ ಮಟ್ಟದ ಅಭೂತವಾದ ಕಾರ್ಯಕ್ರಮದ ಶ್ರಮದ ಹಿಂದೆ ಎಲ್ಲಾ ಗ್ರಾಮಸ್ಥರ ಪರಿಶ್ರಮ ಕಾರಣವಾಗಿದೆ ಎಂದರು. ಬಸವ ಮಾಚಿದೇವ ಮಹಾಸ್ವಾಮಿಗಳು ಮಾತನಾಡಿ, ಬದುಕಿಗೆ ಅನೇಕ ಸಂತೋಷಗಳು ಬೇಕು.
ಮನಸ್ಸಿಗೆ ಆನಂದ ಸಿಗಬೇಕಾದರೆ, ಸಾರ್ಥಕವಾಗುವಂತಹ ಸಮಾರಂಭಗಳಲ್ಲಿ ಭಾಗವಹಿಸುವುದರ ಮೂಲಕ ಮನಸ್ಸಿಗೆ ನೆಮ್ಮದಿ ಮತ್ತು ಆನಂದ ಎರಡು ಪಡೆಯಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕುಸ್ತಿಗೆ ಹೆಚ್ಚು ಪ್ರಸಿದ್ಧಿಯಾದ ಗುತ್ತೂರು ಗ್ರಾಮಗಳಲ್ಲಿ ಎಲ್ಲಾ ಸಮಾಜದವರು ಸಹಭಾಳ್ವೆ ಹಾಗೂ ಹೊಂದಾಣಿಕೆ ಜೀವನ ನಡೆಸುವುದರ ಜೊತೆಗೆ ಎಲ್ಲಾ ಸಮಾಜದವರ ಸಾಮೂಹಿಕ ವಿವಾಹ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಕಾಂಗ್ರೆಸ್ ಮುಖಂಡ ಎಸ್. ರಾಮಪ್ಪ ಮಾತನಾಡಿ, ರಾಜಕೀಯ ಚಟುವಟಿಕೆಗಳು ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆ ನಂತರ ಎಲ್ಲಾ ಗ್ರಾಮಸ್ಥರು ಒಟ್ಟಾಗಿ, ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಹಬ್ಬ-ಹರಿದಿನಗಳನ್ನು ಪಕ್ಷ, ಜಾತಿ ಬೇಧವಿಲ್ಲದೇ ಎಲ್ಲರೂ ಒಟ್ಟಾಗಿ ಚರಿಸಿದರೆ ಅದರ ಸಂಭ್ರಮವೇ ವಿಶೇಷ ಆಗಿರುವುದಲ್ಲದೆ ಮಾನವೀಯತೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ರಾಮಘಟ್ಟದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಥಣಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪದ್ಮಸಾಲಿ ಗುರುಪೀಠದ ಪ್ರಭುಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಹಾವುಗಪ್ಪ, ಉಪಾಧ್ಯಕ್ಷ ಕೊಟ್ರಪ್ಪ, ಶಂಕರಪ್ಪ ಗೌಡ್ರು, ಚಂದ್ರಪ್ಪ, ಎಂ.ಡಿ. ನಾಗರಾಜ್, ಅಂಗಡಿ ಚಂದ್ರಪ್ಪ, ಪೇಟೆ ಬಸಪ್ಪ, ಅಶೋಕ್ ಜಾಲಗರ್, ಎ.ಪಿ.ಆನಂದ, ನಿಂಬಯ್ಯ ಸ್ವಾಮಿ, ಗರಡಿ ಮನೆ ಬಸವರಾಜಪ್ಪ, ತಾಪಂ ಉಪಾಧ್ಯಕ್ಷ ಜಯಮ್ಮ ಬಸವಲಿಂಗಪ್ಪ, ಶಾಂತಮ್ಮ, ಮಂಜಪ್ಪ ಬಿ.ವಿ., ಹನುಮಂತಪ್ಪ ಐರಣಿ, ಬೆಳ್ಳೂಡಿ ಬಸವರಾಜ್ ಮತ್ತಿತರರಿದ್ದರು.