Advertisement
ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆ ಬೇಡವಾಗಿ ಹೋಗಬಹುದು! ನೀವು ಯಾರಿಗಾದರೂ ಅಲ್ ದ ಬೆಸ್ಟ್ ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಹಭಾಷ್ ಹೇಳಲು ಕಾಯುತ್ತಿರಬಹುದು!
Related Articles
Advertisement
ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!
ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!
ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ ಇದ್ದರೆ ಇಂದೆ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!
ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಇನ್ನಷ್ಟು ಮೋಹವು ಹೆಚ್ಚಾಗಬಹುದು!
ಯಾರದಾದರೂ ಆಳುವ ಕಣ್ಣೀರಿಗೆ ನಿಮ್ಮ ಹೆಗಲು ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!
ನೀವು ಯಾರಿಗಾದರೂ ಬೆಸ್ಟ್ ಫ್ರೆಂಡ್ ಗೆ ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!
ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!
ನೀವು ಯಾವುದೇ ಹುಡುಗಿಗೆ ಪ್ರೊಪೋಸ್ ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರೊಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ ಎಂದು ಹೇಳಬಹುದು!
ರಾಜೇಂದ್ರ ಭಟ್ ಕೆ, ಜೇಸಿಐ ರಾಷ್ಟ್ರಮಟ್ಟದ ತರಬೇತಿದಾರರು.