ಎಷ್ಟು ಚೆಂದ ಅಲ್ವ ನಮ್ಮ ಕಲ್ಪನೆ… ಈ ಜಗತ್ತಿನಲ್ಲಿರುವ ಎಲ್ಲರ ಕಲ್ಪನೆಗಳಂತೆ, ಆಶಯದಂತೆ ಎಲ್ಲಾ ಕೆಲಸ ಸುಸೂತ್ರವಾಗಿ ಆಗಿದ್ದರೆ ಎಲ್ಲಿರುತ್ತಿತ್ತು ದ್ವೇಷ, ಕೋಪ ಎಲ್ಲ? “ಯಪ್ಪಾ , ಸದ್ಯ ಎರಡು ಕಾಯಿನ್ ಫೋನ್ ಇದೆ’, ಇವೆಲ್ಲ ಕಾಲೇಜ್ ಸೇರಿ ಮೊದಲನೆಯ ಬಾರಿ ನಾನು ಇರುವ ಹಾಸ್ಟೆಲ್ ನೋಡಿದಾಗ ಅನಿಸಿ ಗೆಳೆಯರೊಡನೆ ಹೇಳಿಕೊಂಡ ಮಾತುಗಳು. ಬಹುಶಃ ಈ ಮಾತು ಎಲ್ಲರೊಡನೆ ಹೇಳುತ್ತ ತಿರುಗುತ್ತಿದ್ದ ನನ್ನನ್ನು ಕಂಡ ನನ್ನ ಅಮ್ಮ ಮನದೊಳಗೆ ವಾಸ್ತವವನ್ನು ಅರಿಯದೆ ಕಲ್ಪನಾ ಲೋಕದಲ್ಲೇ ಇರುವ ಪೆದ್ದು ಎಂದು ಕೊಂಡಿರುತ್ತಾರೆ ಎನ್ನುವುದು, ನಾನು ನನ್ನ ಹಾಸ್ಟೆಲ್ ಜೀವನಕ್ಕೆ ಬಂದಾಗ ಅರಿವಿಗೆ ಬಂತು.
ಒಂದು ದಿನ ಕಳೆಯಿತು. ಎಲ್ಲ ಅಂದು ಕೊಂಡಹಾಗೆ ನೆಮ್ಮದಿಯಾಗಿ ನನ್ನ ಗೆಳತಿ ಮಹಿಮಾಳಿಗೆ ಕರೆ ಮಾಡಿ ಮಾತಾಡಿದೆ. ಎರಡನೆಯ ದಿನ ಯಥಾ ಪ್ರಕಾರ ಫೋನ್ ಮಾಡಲು ಹೋದೆ. ಅಲ್ಲೇ ನೋಡಿ ನನ್ನ ಕಲ್ಪನೆಗೆ ಬ್ರೇಕ್ ಬಿದ್ದದ್ದು. ಅಯ್ಯೋ ಭಗವಂತ ಕರೆ ಮಾಡಲು ನನ್ನ ಸರದಿ ಯಾವಾಗ ಬರುತ್ತದೆ? ಅಮ್ಮನ ಜೊತೆ ಯಾವಾಗ ಮಾತಾಡುತ್ತೀನಿ ಎಂದು ಒಳಗೆ ಪ್ರಶ್ನಿಸಿಕೊಳ್ಳುತ್ತ ಕುಳಿತೆ. ಅಮ್ಮನೊಡನೆ ಮಾತನಾಡುವುದಕ್ಕೆ ಆಗಲ್ವೇನೋ ಅಂತ ಮನಸ್ಸಿನಲ್ಲೇ ಮರುಗೋಕೆ ಶುರು ಮಾಡಿದೆ. ಕಣ್ಣಂಚಿನಲ್ಲಿ ನೀರು ಜಾರಿತು. ಗೆಳತಿ ತಲೆ ಸವರಿ, “ಎಲ್ಲಾ ಒಳ್ಳೆಯದಾಗುತ್ತದೆ, ಥಿಂಕ್ ಪಾಸಿಟಿವಿ’ ಎಂದಳು. ಎಷ್ಟು ಹೇಳಿದರೂ ಅಷ್ಟೇ ಅಲ್ವಾ? ದುಃಖ ತಡೆಯೋಕೆ ಆಗುತ್ತದೆಯೇ? ನೋಡುವವರ ಕಣ್ಣಿಗೆ ಅಳು ಕಾಣದಿರಲಿ ಎಂದು ನಗುವಿನ ಮುಖವಾಡ ಧರಿಸಿದ್ದೇ ಹೊರತು ಅಂತರಂಗದಲ್ಲಿ ಕಷ್ಟವಾಗಿತ್ತು. ದಿನಗಳು ಉರುಳಿದಂತೆ ಮಹಿಮಾಗೆ ಕರೆ ಮಾಡಲೇ ಇಲ್ಲ. ಕಾಯಿನ್ಸ್‌ಗಾಗಿ ಎಲ್ಲರೂ ಉದ್ದ ಕ್ಯೂ ನಿಲ್ಲುತ್ತಿದ್ದರು. ಅಲ್ಲೂ ಒಳಗೊಳಗೆ ನನಗೆ ಕಾಯಿನ್ಸ್ ಸಿಗದೇ ಹೋದರೆ ಅಥವಾ ಬರೀ ಐದೇ ಕಾಯಿನ್ಸ್ ಸಿಕ್ಕರೆ ಎಂದು ಭಯ ಶುರುವಾಗುತ್ತಿತ್ತು. ಜೀವನ ಒಂದೊಂದು ಹೇಳಿಕೊಡುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ.
ದಿನದಲ್ಲಿ ಮೂರು ಬಾರಿ ಮನೆಗೆ ಕಾಲ್ ಮಾಡುತ್ತಿದ್ದ ನಾನು ಎರಡು ಬಾರಿಗೆ ಇಳಿಸಲೇ ಬೇಕಾಯಿತು. ಇಲ್ಲಿಂದ ಕರೆ ಬರುವುದೆಂದು ಮನೆಯವರು ಕಾಯುತ್ತಿದ್ದರು. ಇಲ್ಲಿಂದ ಯಾವಾಗ? ಕರೆ ಮಾಡುತ್ತೇನೋ ಎಂದು ನಾನು ಚಡಪಡಿಸುತ್ತಿ¨ªೆ. ಹತ್ತು ದಿನ ಕಳೆದ ನಂತರ ಎಲ್ಲ ವ್ಯವಸ್ಥೆಗಳು ಅರಿವಿಗೆ ಬರಲು ಶುರುವಾಯಿತು. ರಾತ್ರಿ ಏಳಕ್ಕೆ ಮನೆಗೆ ಕರೆ ಮಾಡಲು ನಿಂತರೆ ಒಂದು ಊಟ ತ್ಯಜಿಸಬೇಕು, ಇಲ್ಲ ಸೀನಿಯರ್ ಕಾಲು, ಕೈ ಹಿಡಿದು ಬೇಗ ಕರೆ ಮಾಡುವುದಾಗಿ ಬೇಡಿಕೊಂಡು ಕೂರಬೇಕು. ಎಲ್ಲವನ್ನು ಅರಿಯುವ ತನಕ ಹುಚ್ಚು ಹಿಡಿಯುವುದೊಂದೇ ಬಾಕಿಯಾಗಿತ್ತು.
ಸೀನಿಯರ್ಗೆ ಹೆದರಬೇಕು ಎನ್ನುವುದು ವಾಡಿಕೆಯಾಗಿ ಹೋಗಿದೆ ಎಂದೆನಿಸುತ್ತದೆ. ಎಲ್ಲರ ಮುಂದೆ ನಿಂದನೆಗೆ ಒಳಗಾಗೋ ಅನುಭವ ಹೊಸತಾಗಿತ್ತು. ಚಿಕ್ಕವರು ತಗ್ಗುತ್ತಾರೆ ಎಂದು ಬಗ್ಗಿ ನಮಸ್ಕರಿಸಬೇಕೆಂದು ಅಪೇಕ್ಷಿಸುವುದು ತಪ್ಪು. ಎದ್ದುನಿಂತು ಪ್ರತ್ಯುತ್ತರ ನೀಡೋಣ ಎಂದರೆ ಬಜಾರಿ ಎಂಬ ಹೆಸರು ಖಾಯಂ ಆಗಿಹೋಗುತ್ತದೆ ಎಂಬ ಭಯ. ನಯವಾಗಿ ಹೇಳಿದರೆ, ಸುಮ್ಮನೆ ರೇಗುತ್ತಿದ್ದರು. ಹೀಗೆ ಉತ್ತರ ಕೊಟ್ಟು ಕೂತ ಮೇಲೆ ಮನಸ್ಸಿನಲ್ಲಿ ಅಳುಕು ಉಂಟಾಗುತ್ತಿತ್ತು. ಗಂಟಲಿನಲ್ಲಿ ಗದ್ಗದತೆ. ಕರೆ ಮಾಡಿ ಅತ್ತು ಬಿಡುತಿ¨ªೆ, ಆಗ, “ಇದ್ದಿದ್ದೇ ಕಂದ, ಯಾಕೆ ಬೇಜಾರು?’ ಎಂದು ಅಮ್ಮ ಸಮಾಧಾನವೂ ಮಾಡುತ್ತಿದ್ದರು. ಆತ್ಮವಿಶ್ವಾಸ, ಶ್ರದ್ಧೆ, ಧೈರ್ಯ ಎಲ್ಲಾ ಬೆಳೆಸಿಕೊಳ್ಳಲಿಲ್ಲ ಅಂದರೆ ಎಲ್ಲೂ ಉಳಿಗಾಲ ಇಲ್ಲವೆನಿಸಿತು. ಚಾಣಾಕ್ಷತೆ ಆವಶ್ಯಕತೆಯೆನಿಸಿತು.
ಸಂಹಿತಾ ಎಸ್. ಮೈಸೂರೆ ತೃತೀಯ ಪತ್ರಿಕೋದ್ಯಮ ಎಸ್‌ಡಿಎಂ ಕಾಲೇಜು, ಉಜಿರೆ