Advertisement

ಪರಸ್ಪರ ಪ್ರೀತಿ-ವಿಶ್ವಾಸವಿದ್ದರೆ ಮನೆಯೇ ಕೈಲಾಸ

01:09 PM May 08, 2019 | Suhan S |

ಹಾವೇರಿ: ದುಡಿಮೆ ಇದ್ದರೆ ಮಾತ್ರ ಸಂಸಾರ ನಿಭಾಯಿಸಲು ಸಾಧ್ಯವಾಗುತ್ತದೆ. ಹಾಗಾಗಿ ಕಾಯಕ ಮಾಡಲು ಶಕ್ತಿ ಇರುವ, ಆತ್ಮಬಲ ಇರುವರು ಮಾತ್ರ ಮದುವೆಯಾಗಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು.

Advertisement

ನಗರದ ಹುಕ್ಕೇರಿಮಠದ ಆವರಣದಲ್ಲಿ ನಡೆದ ಬಸವಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಪುರುಷರಿಗೆ ದುಡಿಮೆ ಇರಲೇ ಬೇಕು. ಇನ್ನು ಮಹಿಳೆಯರು ಶ್ರಮದ ಪ್ರತೀಕ. ಅವರು ಮನೆಯಲ್ಲಿರಲಿ, ಉದ್ಯೋಗಕ್ಕೆ ಹೋಗಲಿ ಕಾಯಕ ಮಾಡುತ್ತಲೇ ಇರುತ್ತಾರೆ. ಕಾಯಕ ಮಾಡಿಯೇ ಬದುಕಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದರು.

ಸತಿ-ಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದರೆ ಮನೆಯೇ ಕೈಲಾಸವಾಗಿ, ಸ್ವರ್ಗವಾಗಿ ಮಾರ್ಪಡುತ್ತದೆ. ಮನೆಯನ್ನು ಕೈಲಾಸವನ್ನಾಗಿಸುವ ಶಕ್ತಿ ಸತಿ-ಪತಿಯಲ್ಲಿದೆ ಎಂದ ಶ್ರೀಗಳು, ಎಲ್ಲರ ರಕ್ತದ ಬಣ್ಣವೂ ಒಂದೇ. ಎಲ್ಲರೂ ಸೇವಿಸುವ ಗಾಳಿ, ಆಹಾರವೂ ಒಂದೇ. ಹೀಗಿದ್ದಾಗ ಎಲ್ಲರೂ ಎಲ್ಲರನ್ನು ಸಮಾನವಾಗಿ ಕಾಣಬೇಕು. ಯಾರಲ್ಲಿಯೂ ತಾರತಮ್ಯ ಮಾಡಬಾರದು, ಮೇಲು-ಕೀಳು ಎಂಬ ಭಾವನೆಯಿಂದ ನೋಡಬಾರದು ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಸತ್ಯಶುದ್ಧ ಕಾಯಕದಿಂದ ಬರುವ ದುಡಿಮೆಯಲ್ಲಿ ಒಂದಿಷ್ಟು ಭಾಗ ದಾಸೋಹಕ್ಕೆ ಮೀಸಲಿಡಬೇಕು. ಬಸವಣ್ಣನವರ ಆದರ್ಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಪರಿಪಾಲಿಸಬೇಕು. ಕಾಯಕ, ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

Advertisement

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಜಡ್ಡುಗಟ್ಟಿದ ಸಮಾಜಕ್ಕೆ ‘ಕಾಯಕವೇ ಕೈಲಾಸ’ ಎಂಬ ಸಂದೇಶದ ಮೂಲಕ ಚಲನಶೀಲತೆಯನ್ನು ತಂದು ಕೊಟ್ಟು, ಆಧುನಿಕ ಸಂವಿಧಾನದ ಬೀಜಸ್ವರೂಪವಾದ ಅನುಭವ ಮಂಟಪವನ್ನು ಸ್ಥಾಪಿಸಿ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಸಮಾಜವಾದಿ ಬಸವಣ್ಣನವರು ಎಂದರು.

ಆಧುನಿಕ ಯುಗದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳುಚುತ್ತಿದ್ದು, ವರ್ಣಬೇಧ, ಲಿಂಗಬೇಧ, ವರ್ಗಬೇಧಗಳ ಸಂಕೋಲೆ ತೆಗೆದು ಹಾಕಿ, ಸರ್ವ ಜನಾಂಗದ ಏಳ್ಗೆ ಬಯಸಿ ವೈಚಾರಿಕತೆ ತಳಹದಿಯ ಮೇಲೆ ಮಾನವೀಯ ಮೌಲ್ಯಗಳ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ ನಿಜವಾಗಿಯೂ ವಿಶ್ವಗುರು ಎಂದರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೋವಿಂದಸ್ವಾಮಿ ಮಾತನಾಡಿ, ಕೇವಲ ಮೇಲ್ವರ್ಗದ ಆಸ್ತಿಯಾಗಿದ್ದ ಸಾಹಿತ್ಯವನ್ನು ವಚನ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೂ ಮುಟ್ಟಿಸಿದ ಬಸವಾದಿ ಶರಣರು, ಬಡವರ ಮನೆಗೆ ದೇವರನ್ನು ತಂದು ಗುರು ಮನೆಯನ್ನು ಅರಮನೆಯನ್ನಾಗಿಸಿದರು ಎಂದರು.

ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದೆ ಭಾರತಿ ಯಾವಗಲ್ಲ ವಚನ ಸಂಗೀತ ಪ್ರಸ್ತುತ ಪಡಿಸಿದರು. ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಪ್ಪ ಹಲಗಣ್ಣನವರ, ಕಾರ್ಯದರ್ಶಿ ರಾಜೇಂದ್ರಬಾಬು ಚೌಶೆಟ್ಟಿ, ಎಸ್‌.ಎಸ್‌ ಮುಷ್ಠಿ, ಉಳಿವೆಪ್ಪ ಪಂಪಣ್ಣನವರ, ಮುರುಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಮುದ್ದಿ, ವಿಜಯಾ ಗೋವಿಂದಸ್ವಾಮಿ, ವಿ.ವಿ ಬನ್ನಿಮಟ್ಟಿ, ಎ.ಎಚ್. ಕೋಳಿವಾಡ, ಎಸ್‌.ಪಿ ಹಳೇಮನಿ, ಎಸ್‌.ವಿ ಹಿರೇಮಠ, ಶಿವಲಿಂಗಯ್ಯ ಮಠಪತಿ ಮತ್ತಿತರರು ಇದ್ದರು. ನಿವೃತ್ತ ಪ್ರಾಚಾರ್ಯ ಬಿ.ಬಸವರಾಜ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್‌. ನಾಶೀಪುರ ವಂದಿಸಿದರು.

ಸಾಮೂಹಿಕ ವಿವಾಹ: ಬಸವ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ಸತಿ-ಪತಿಗಳಾಗಿ ನವಜೀವನಕ್ಕೆ ಕಾಲಿಟ್ಟರು. ಶ್ರೀಗಳು, ಗಣ್ಯರು, ನೆರೆದ ಬಂಧು ಬಳಗದವರು ನವದಂಪತಿಗಳಿಗೆ ಶುಭ ಹಾರೈಸಿದರು. ಸಂಜೆ ಸಕಲ ವಾದ್ಯ ವೈಭೋಗದೊಂದಿಗೆ ವಿಶ್ವಗುರು ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next