Advertisement

ಕಾಟ ಕೊಟ್ರೇ ಪೊಲೀಸರಿಗೇಳಿ ಒಳಗ್‌ ಹಾಕಿಸ್ತೀವಿ!

11:50 AM Dec 05, 2018 | Team Udayavani |

ಬೆಂಗಳೂರು: 2016 ರಲ್ಲಿ ಪರೀಕ್ಷೆ ಬರೆದಿದ್ದೇವೆ. ಪರೀಕ್ಷೆ ಬರೆದು ಮೌಲ್ಯ ಮಾಪನ ಆದರೂ, ಇನ್ನೂ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ. ಕೆಪಿಎಸ್‌ಸಿ ಕಚೇರಿಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಸೂಕ್ತ ಸ್ಪಂದನೆ ನೀಡುವುದಿಲ್ಲ, ದೂರವಾಣಿ ಕರೆಗಳನ್ನು ಸ್ವೀಕರಿಸೋಲ್ಲ. ಹೀಗೆ ಕಾಟ ಕೊಟ್ರೆ, ಪೋಲಿಸರಿಗೆ ಹೇಳಿ ಒಳಗ್‌ ಹಾಕಿಸ್ತೀವಿ ಅಂತ ಗೇಟಿನಲ್ಲಿರೋ ಕಾವಲುಗಾರರ ಮುಖಾಂತರ ಹೇಳಿಸ್ತಾರೆ. ಸಾಕಾಗಿ ಹೋಗಿದೆ ಸರ್‌.. ಕೆಲಸವಿಲ್ಲದೆ ಅಲೆದಾಡೋ ಬದುಕು.

Advertisement

ಇದು 2016 ರಲ್ಲಿ ಕೆಪಿಎಸ್‌ಸಿ ನಡೆಸಿದ ಬೆರಳಚ್ಚುಗಾರರ ಮತ್ತು ಅಬಕಾರಿ ನಿರೀಕ್ಷಕರ ಹುದ್ದೆಗಳಿಗೆ ಪರೀಕ್ಷೆ ಬರೆದು ಅಂತಿಮ ಪಟ್ಟಿಗಾಗಿ ಜಾತಕ ಪಕ್ಷಿಯಂತೆ ಎದುರು ನೋಡುತ್ತಿರುವ ಆಕಾಂಕ್ಷಿಗಳು ಅಳಲು. ಅಂತಿಮ ಪಟ್ಟಿ ಬಿಡುಗಡೆ ಮಾಡದ ಕೆಪಿಎಸ್ಸಿ ಧೋರಣೆ ಖಂಡಿಸಿ ಮಂಗಳವಾರ ಮಾಜಿ ಸಚಿವ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಉದ್ಯೋಗ ಸೌಧದ ಎದುರು ನೂರಾರು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

ಬೀದರ್‌, ಯಾದಗಿರಿ, ರಾಯಚೂರು ಕಡೆಯಿಂದ ಬಂದಿದ್ದೇವೆ. ಎರಡು ವರ್ಷ ಕಳೆದರೂ ಕೆಪಿಎಸ್ಸಿ ಅಧಿಕಾರಿಗಳು ಇನ್ನೂ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ. ಈ ಸಂಬಂಧ ಕೆಪಿಎಸ್‌ಸಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ, ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈಗಾಗಲೇ ಏಳೆಂಟು ಬಾರಿ ಉದ್ಯೋಗ ಸೌಧಕ್ಕೆ ಬಂದು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಪಟ್ಟಿ ಬಿಡುಗಡೆ ಬಗ್ಗೆ ಖಾತ್ರಿ ಸಿಗುತ್ತಿಲ್ಲ ಎಂದು ದೂರಿದರು.

ಬೆಂಗಳೂರಿಗೆ ಬರಲು ಬಸ್‌ ಪ್ರಯಾಣಕ್ಕಾಗಿಯೇ ಸಾವಿರಾರು ರೂ. ಖರ್ಚಾಗಿದೆ. ಅಪ್ಪ, ಅಮ್ಮ ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದಾರೆ. ಈಗಾಗಲೇ ನಮ್ಮ ಕಲಿಕೆಗಾಗಿಯೇ ಸಾಕಷ್ಟು ಸಾಲ ಮಾಡಿದ್ದು, ಇನ್ನು ಎಷ್ಟು ಅಂತ ಸಾಲ ಮಾಡ್ತಾರೆ. ರಾತ್ರಿ ಹಗಲು ಅನ್ನದೇ ಓದಿ, ಪರೀಕ್ಷೆ ಬರೆದು ಪಾಸಾದರೂ, ಸರ್ಕಾರ ಕೆಲಸ ನೀಡಲು ಮುಂದಾಗುತ್ತಿಲ್ಲ ಎಂದು ಮಹಿಳಾ ಉದ್ಯೋಗ ಆಕಾಂಕ್ಷಿಯೊಬ್ಬರು ಕಣ್ಣೀರು ಹಾಕಿದರು.

ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳ ನಿಯೋಗ ಕೆಪಿಎಸ್ಸಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ವಿಳಂಬದ ಸಂಬಂಧ ಮಾಹಿತಿ ಪಡೆಯಿತು.

Advertisement

ಅಧಿವೇಶನದಲ್ಲಿ ದನಿ ಎತ್ತುತ್ತೇನೆ: ಶಾಸಕ ಸುರೇಶ್‌ ಕುಮಾರ್‌, ಈಗಾಗಲೇ ಕೆಪಿಎಸ್ಸಿ ಹಿರಿಯ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕೆಎಎಸ್‌, ಬೆರಳಚ್ಚುಗಾರರ ಅಂತಿಮ ಪಟ್ಟಿ ಕುರಿತು ಮಾಹಿತಿ ಪಡೆದಿದ್ದೇನೆ. ಕೆಎಎಸ್‌ ಅಂತಿಮ ಪಟ್ಟಿ ಬಿಡುಗಡೆ ಮಾಡದ ವಿಚಾರ ಸೇರಿದಂತೆ ಯುವಕರಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಬೆಳಗಾವಿ ಅಧಿವೇಶನದಲ್ಲಿ ದನಿ ಎತ್ತಿ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು. 

ಬೆರಳಚ್ಚುಗಾರರ ಮತ್ತು ಮಹಿಳಾ ಅಬಕಾರಿ ನಿರೀಕ್ಷಕರ ಹುದ್ದೆಗೆ ಆಯ್ಕೆಯಾದ ಅಂತಿಮ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕ್ರಿಯೆ ಮುಗಿದಿದೆ. ಕ್ರಿಸ್‌ಮಸ್‌ ವೇಳೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಪಿಎಸ್ಸಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದು ವೇಳೆ ಪಟ್ಟಿ ಬಿಡುಗಡೆ ಮಾಡದೇ ಇದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಸುರೇಶ್‌ ಕುಮಾರ್‌ ಎಚ್ಚರಿಕೆ ನೀಡಿದರು.

ನನ್ನ ಮಗಳಿಗೆ 2ತಿಂಗಳು ಮಗುವಾಗಿದ್ದಾಗ ಬೆರಳಚ್ಚುಗಾರರ ಪರೀಕ್ಷೆಗಾಗಿ ದಾಖಲಾತಿ ಪರೀಶಿಲನೆ ನಡೆದಿತ್ತು. ಈಗ ಅವಳಿಗೆ 2 ವರ್ಷ, ಇನ್ನೂ ಕೆಪಿಎಸ್ಸಿ ಈ ಸಂಬಂಧದ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಲ್ಲ. ಎಷ್ಟು ದಿನ ಅಂತ ಹೀಗೆ ಉದ್ಯೋಗ ಸೌಧದ ಮುಂದೆ ಅಲೆದಾಡೋದು.
-ಶಾಂತ (ಹೆಸರು ಬದಲಾಯಿಸಿದೆ) ಉದ್ಯೋಗ ಆಕಾಂಕ್ಷಿ ಬೀದರ್‌.

Advertisement

Udayavani is now on Telegram. Click here to join our channel and stay updated with the latest news.

Next