Advertisement

ನೇರ ಸಿಕ್ಕಿದರೆ ಮೌನ ಮೌನ ಮೊಬೈಲ್‌ನಲ್ಲಿ ಮಾತು ಮಾತು

08:15 AM Mar 09, 2018 | |

ಮಹಿಳೆ ಎಂದಾಕ್ಷಣ ಗೃಹಕೃತ್ಯ ಹಾಗೂ ಉದ್ಯೋಗ ಎರಡನ್ನೂ ಸಂಭಾಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಈ ನಡುವೆ ಮದುವೆ, ಸಮಾರಂಭಗಳಿಗೆ ಹಾಜರಾಗುವುದು ದುಸ್ಸಾಹಸವೇ ಸರಿ. ಇತ್ತೀಚೆಗೆ ಊರಿನಲ್ಲೊಂದು ಗೃಹಪ್ರವೇಶವಿದ್ದು, ನಮ್ಮ ಮನೆಗೂ ಆಮಂತ್ರಣ ಪತ್ರಿಕೆ ಬಂದಿತ್ತು. ವಾರದ ಮಧ್ಯೆಯ ಕಾರ್ಯಕ್ರಮವಾದ್ದರಿಂದ ಹಾಜರಾಗಲಿಲ್ಲ. ಭಾನುವಾರದಂದು ಸ್ವಆಸಕ್ತಿಯ ಮೇರೆಗೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿತ್ತಾದರೂ ಅದನ್ನು ಬಿಟ್ಟು ಹೊಸ ಮನೆಗೆ ತೆರಳಿ ಶುಭಹಾರೈಸೋಣವೆಂದು ಹೋದೆ. ಭಾನುವಾರ ರಜಾದಿನವಾದ್ದರಿಂದ ಎಲ್ಲರೂ  ಮನೆಯಲ್ಲಿ ಇರಬಹುದೆಂಬ ಲೆಕ್ಕಾಚಾರ ನನ್ನದಾಗಿತ್ತು. ಅದು ನಿಜವೂ ಆಗಿತ್ತು. ಆದರೆ, ಮನೆಯಂಗಳ ತಲುಪುತ್ತಿದ್ದಂತೆ ಮನೆಮಂದಿಯ ನಿರುತ್ಸಾಹ ಭಾವ, ನಿರ್ಲಕ್ಷ್ಯ ಧೋರಣೆ  ಪರಿಚಿತ ಸ್ಥಳವಾದರೂ ಅಪರಿಚಿತ ಭಾವನೆ ಮೂಡುವಂತಾಗಿತ್ತು. ಮನೆಯಾಕೆ ಔಪಚಾರಿಕವಾಗಿ ಒಳಗೆ ಕರೆದರೂ ಆತ್ಮೀಯತೆಯ ಮುಖವಾಡ ಧರಿಸಿಕೊಂಡಂತೆ  ಭಾಸವಾಯಿತು. ಮದುವೆ ವಯಸ್ಸಿಗೆ ಬಂದಿದ್ದ ಹೆಣ್ಣುಮಕ್ಕಳಿಬ್ಬರೂ ಅತಿಥಿಗಳು ಮನೆಯೊಳಗಿದ್ದರೂ, ಮಾತಾಡದೆ ಮೊಬೈಲಿನಲ್ಲಿ  ಹುದುಗಿ ಹೋದದ್ದು ಕಂಡಾಗ ಇಲ್ಲಿರುವುದು ಹೆಚ್ಚು ಸೂಕ್ತ ಅಲ್ಲ ಎಂದೆನಿಸಿತು. 

Advertisement

ಕೊನೆಗೆ ನಾನೆ, “”ಮನೆ ಸ್ವಲ್ಪ ನೋಡಬಹುದೆ?” ಎಂದು ಕೇಳಿದಾಗ ಹೊಸ ಮನೆಯನ್ನು ತೋರಿಸಿದರು. ಅದೂ, ಇದೂ ಎಂದು ನಾನೇ ಮಾತಿಗೆಳೆದಾಗ ಮಾತಿಗೆ ಶುರುವಿಟ್ಟ ಮನೆಯಾಕೆ ನನ್ನ ಪ್ರತಿಕ್ರಿಯೆಗೂ ಕಾಯದೆ ತನ್ನನ್ನು ಹಾಗೂ ತನ್ನ ಮನೆಮಂದಿಯನ್ನು ಗುಣಗಾನ ಮಾಡಲು ಶುರುವಿಟ್ಟರು. ಆಕೆ ತಾವು ಹಾಗೂ ತನ್ನ ಮಕ್ಕಳೇ ಉತ್ತಮರೆಂದು ಹೊಗಳಿಕೊಳ್ಳುತ್ತಿರುವುದು  ಕಂಡಾಗ ಇಷ್ಟವಿಲ್ಲದಿದ್ದರೂ ಸಹಿಸಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಅಮ್ಮನ ನಡೆನುಡಿಯನ್ನು ಕಂಡು ಮಕ್ಕಳೂ ಅನುಸರಿಸುವುದರಿಂದ ದೊಡ್ಡ ಮನೆ ಕಟ್ಟಿಕೊಂಡಿದ್ದರೆ ಸಾಲದು, ಹೃದಯವಂತಿಕೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಆ ಸನ್ನಿವೇಶ ತಿಳಿಸಿಕೊಡುತ್ತಿತ್ತು. ನಮ್ಮ ಮನೆಗೆ ಒಮ್ಮೆ ಬಂದ ಅತಿಥಿ ಮಗದೊಮ್ಮೆ ಅವರಾಗಿಯೇ ಇಷ್ಟಪಟ್ಟು ಬರಬೇಕೆಂದರೆ ಮುಖ್ಯವಾಗಿ ಮನೆ ಒಡತಿಯ ವ್ಯಕ್ತಿತ್ವ ಸ್ನೇಹಮಯವಾಗಿರಬೇಕು. ಮನೆಯೊಂದರ ಅಂದ-ಚಂದ, ಜೀವಂತಿಕೆ ಅಡಗಿರುವುದು ಮನೆಯಾಕೆಯ ಸ್ವಭಾವದ ಮೇಲೆ ಎಂಬ ಮಾತು ಸತ್ಯ ಎನಿಸಿತು. ಅವರ ಮಾತಿಗೆ ಪೂರ್ಣವಿರಾಮ ದೊರೆಯುತ್ತಿದ್ದಂತೆ ಬೇರೆ ಕೆಲಸವಿದೆಯೆಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮನೆಯೊಳಗೆ ಹಾಗೂ ಹೊರಗೆ ಮಹಿಳೆಯ ಪಾತ್ರ ಬಹು ಮಹತ್ತರವಾದುದು.

ಮನೆಯೊಳಗೆ ದೀಪ ಬೆಳಗುತ್ತಿದ್ದರೆ ಆ ಮನೆಯು ಶೋಭಾಯಮಾನವಾಗಿರುತ್ತದೆ. ದೀಪದ ಬೆಳಕು ಸ್ಥಳದ ಮಹತ್ವವನ್ನು ಹೆಚ್ಚಿಸುತ್ತದೆ. ಅಂತೆಯೇ ಮನೆಯೊಡತಿಯ ಇರುವಿಕೆ ಮನೆಮಂದಿಯ ಖುಷಿಯನ್ನು ಇಮ್ಮಡಿಸುತ್ತದೆ. ಮಹಿಳೆಯು ದೀಪವಿದ್ದಂತೆ, ಸದಾ ಮನೆಯೊಳಗೆ ಬೆಳಗುತ್ತಿರಬೇಕು. ಮನೆಮಂದಿಯ ಮನಸ್ಸನ್ನು ಮುದಗೊಳಿಸುತ್ತಿರಬೇಕು. ಪತಿ, ಮಕ್ಕಳು ಹಾಗೂ ಅತಿಥಿಗಳು ಮನೆಗೆ ಬಂದಾಗ ನಗುಮೊಗದಿಂದ ಸ್ವಾಗತಿಸುವ ಮನೆಯಾಕೆಯಿದ್ದರೆ ಅಂತಹ ಮನೆಯಲ್ಲಿ ಕಷ್ಟಗಳು, ಸಮಸ್ಯೆಗಳು ಮಹತ್ತರ ಸ್ಥಾನವನ್ನು ಪಡೆಯಲಾರದು. ಸಮಸ್ಯೆಗಳು ಹುಟ್ಟಿಕೊಳ್ಳುವುದು ನಮ್ಮ ಚಿಂತನೆಯ ಪ್ರತಿಫ‌ಲವಾಗಿಯಾದ ಕಾರಣ ಮನೆಮಂದಿಯ ಮನಸ್ಥಿತಿಗೆ ಪೂರಕವಾಗಿ ಯೋಚನೆಗಳು ಉದಯಿಸಬೇಕು.

ನಮ್ಮ ವರ್ತನೆಗಳು ವ್ಯಕ್ತಿತ್ವವನ್ನು ನಿರ್ದೇಶಿಸುತ್ತವೆ. ಮನಸ್ಸಿನ ಯೋಚನೆಗಳು ವರ್ತನೆಗಳ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ.ಸತ್‌ ಚಿಂತನೆಗಳು ಹಾಗೂ ನಿರಹಂಕಾರ ಮನೋಭಾವ ಮನದಲ್ಲಿ ಸ್ಥಿರಸ್ಥಾಯಿಯಾಗಿದ್ದಾಗ ಇತರರೆದುರಿಗೆ ನಮ್ಮ ನಡೆನುಡಿಗಳು ಅನುಸರಣೀಯವೆನಿಸಿಕೊಳ್ಳುತ್ತದೆ ಮತ್ತು ಪ್ರಶಂಸಾರ್ಹವೆನಿಸಿಕೊಳ್ಳುತ್ತದೆ.ಅದರಲ್ಲೂ ಮಹಿಳೆ ಎಂದಾಕ್ಷಣ ಆಕೆ ಎರಡು ರೀತಿಯ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಮನೆಯ ಸದಸ್ಯರ ನೆಮ್ಮದಿ, ಸುಖ, ಸಂತೋಷ ಇವೆಲ್ಲವೂ ಆಕೆಯ ತ್ಯಾಗ, ಇತರರಿಗೆ ಸಮಯ ವಿನಿಯೋಗಿಸುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಕಚೇರಿಯಲ್ಲಿ ಮನೆಯ ಚಿಂತೆ, ದುಗುಡ, ದುಮ್ಮಾನಗಳನ್ನೆಲ್ಲಾ ಮರೆತು ಲವಲವಿಕೆಯಿಂದ  ತನ್ನ ಕರ್ತವ್ಯದಲ್ಲಿ ನಿರತಳಾದರೆ ಆಕೆಯ ಕರ್ತವ್ಯಪರತೆ ಶ್ಲಾಘನೀಯವೆನಿಸಿಕೊಳ್ಳುತ್ತದೆ. ಹಾಗೆಯೇ ಆಫೀಸಿನಿಂದ ಸಂಜೆ ಮನೆಗೆ ಬರುತ್ತಿದ್ದಂತೆ ಅಲ್ಲಿನ ಚಿಂತೆ, ದುಗುಡ ಮನಸ್ಸನ್ನು ಕೊರೆದು ಮನೆಮಂದಿಯ ನೆಮ್ಮದಿಯನ್ನು ಹಾಳುಮಾಡುವಂತಿರಬಾರದು.ಗುಡಿಸಲು ಮನೆಯಾಗಿದ್ದರೂ ನೆಮ್ಮದಿಯೊಂದಿದ್ದರೆ ಅದು ಅರಮನೆಗೆ ಸಮಾನವಾಗಿರುತ್ತದೆ. ಹೆಣ್ಣೊಬ್ಬಳು ನಗುನಗುತ್ತಾ ಓಡಾಡಿಕೊಂಡಿದ್ದರೆ ಆ ಗೃಹಕ್ಕೆ ಯಾವ ಗೃಹಸಂಬಂಧಿ ಸಮಸ್ಯೆಗಳೂ ಬಾಧಿಸದು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಎಂಬುದು ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ವಾಟ್ಸಾಪ್‌, ಫೇಸ್ಬುಕ್ ನಲ್ಲಿ ಸಮಯವನ್ನು ವ್ಯರ್ಥಮಾಡುತ್ತಿರುವ ಜನ ಸಂಬಂಧಗಳ ಬೆಲೆಯನ್ನು ಮರೆಯುತ್ತಿದ್ದಾರೆ. ಹಿಂದೆ ಮನೆಗೆ ಆತಿಥಿಗಳು ಬಂದರೆಂದರೆ ಅಮ್ಮನ ಆದಿಯಾಗಿ ಎಲ್ಲರೂ ಸಂತಸದಿಂದ ಓಡಾಡುತ್ತ¤ ಕ್ಷೇಮ ಸಮಾಚಾರ ವಿಚಾರಿಸುತ್ತಾ, ಮನೆಯ ವಾತಾವರಣವೇ ಬದಲಾಗಿ ಹೋಗುತ್ತಿತ್ತು. ಸಂಭ್ರಮ ಕಳೆಗಟ್ಟುತಿತ್ತು. ಬಂದವರೊಂದಿಗೆ ಹರಟೆ, ಮಾತುಕತೆ, ನಗುವಿನೊಂದಿಗೆ ಸಮಯ ಉರುಳಿದ್ದೇ ತಿಳಿಯುತ್ತಿರಲಿಲ್ಲ.ರಾತ್ರಿಯೆಲ್ಲಾ ತಮ್ಮ ಕತೆಯನ್ನು ಹೇಳುತ್ತ, ಅವರ ಕತೆಯನ್ನು ಕೇಳುತ್ತ ಮಲಗಿದರೂ ಮುಗಿಯದ ಮಾತುಕತೆ. ಇಂದು ಮನೆಯಲ್ಲಿ ಇರೋ ಆತ್ಮೀಯರಿಗಿಂತ, ಸಂಬಂಧಿಗಳಿಗಿಂತ  ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ  ಪರಿಚಯವಾದವರೊಂದಿಗಿನ ಹರಟೆಯೇ ಸಮಯವನ್ನು ವ್ಯರ್ಥಮಾಡುವಂತೆ ಮಾಡುತ್ತಿದೆ. ಸಂಬಂಧಗಳನ್ನು ಮೂಲೆಗುಂಪು ಮಾಡಿಬಿಟ್ಟಿದೆ. ಅಂಗೈನಲ್ಲೇ ಬೆಣ್ಣೆಯನ್ನು ಹಿಡಿದುಕೊಂಡು ಊರೆಲ್ಲ ತಿರುಗುವಂತೆ ನಮ್ಮೊಂದಿಗಿರುವ, ಕಣ್ಣೆದುರೇ ಕಾಣುತ್ತಿರುವ ಮಾನವ ಸಂಬಂಧಗಳಿಗೆ ಬೆಲೆ ನೀಡೋದು ಒಳ್ಳೆಯದಲ್ವೆ?

Advertisement

ಹರಿಣಾಕ್ಷಿ ಕೆ.

Advertisement

Udayavani is now on Telegram. Click here to join our channel and stay updated with the latest news.

Next