ಮಹೇಶ್ ಬಾಬು ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ “ಸ್ಪೈಡರ್’ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಎಲ್ಲಾ ಸರಿ, ಕನ್ನಡ ಚಿತ್ರಂಗಕ್ಕೆ ಅವರು ಬರುವುದು ಯಾವಾಗ ಮತ್ತು ಕನ್ನಡ ಚಿತ್ರಗಳಲ್ಲಿ ಅವರು ನಟಿಸುವುದು ಯಾವಾಗ ಎಂಬ ಪ್ರಶ್ನೆ ಸಹಜ. “ಒಳ್ಳೆಯ ಸ್ಕ್ರಿಪ್ಟ್ಗಳು ಸಿಕ್ಕರೆ ಕನ್ನಡದಲ್ಲಿ ನಟಿಸುವುದಕ್ಕೆ ಸಿದ್ಧ’ ಎಂದು ಮಹೇಶ್ ಬಾಬು ಹೇಳಿಕೊಂಡಿದ್ದಾರೆ. ಭಾನುವಾರ ಸಂಜೆ ಅವರು ಬೆಂಗಳೂರಿಗೆ ಬಂದಿದ್ದರು.
ಈ ವಾರ ಬಿಡುಗಡೆಯಾಗುತ್ತಿರುವ ಅವರ ಹೊಸ ಚಿತ್ರ “ಸ್ಪೈಡರ್’ನ ಪ್ರಚಾರಕ್ಕಾಗಿ ನಿರ್ದೇಶಕ ಎ.ಆರ್. ಮುರುಗದಾಸ್ ಮತ್ತು ನಾಯಕಿ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಬೆಂಗಳೂರಿಗೆ ಬಂದು ಚಿತ್ರದ ಬಗ್ಗೆ ಮಾತನಾಡಿದರು. ಇದುವರೆಗೂ ಅವರು ಬೆಂಗಳೂರಿಗೆ ಹಲವು ಬಾರಿ ಬಂದು ಹೋಗಿದ್ದಾರಂತೆ. ಆದರೆ, ತಮ್ಮ ಚಿತ್ರದ ಪ್ರಚಾರಕ್ಕಾಗಿ ಅವರು ಬರುತ್ತಿರುವುದು ಇದೇ ಮೊದಲ ಬಾರಿಗೆ. ಈ ಕುರಿತು ಮಾತನಾಡಿದ ಅವರು, “ನನ್ನ ಸಿನಿಮಾಗಳನ್ನು ಬೆಂಗಳೂರಿನ ಜನ ಬಹಳ ಚೆನ್ನಾಗಿ ಸ್ವೀಕರಿಸಿದ್ದಾರೆ.
ಬರೀ ನನ್ನ ಸಿನಿಮಾಗಳು ಮಾತ್ರವಲ್ಲ, ತೆಲುಗಿನ ಎಲ್ಲಾ ಒಳ್ಳೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಿದ್ದಾರೆ’ ಎಂದು ಖುಷಿಪಟ್ಟರು. ಕನ್ನಡ ಚಿತ್ರಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ ಅವರು, “ನನಗೆ ಇಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ. ಪುನೀತ್ ನನ್ನ ಬಹಳ ಒಳ್ಳೆಯ ಸ್ನೇಹಿತ. ಕನ್ನಡ ಚಿತ್ರಗಳಲ್ಲಿ ನಟಿಸುವುದಕ್ಕೆ ನನ್ನ ಅಭ್ಯಂತರವೇನಿಲ್ಲ. ಒಳ್ಳೆಯ ಕಥೆಗಳು ಸಿಕ್ಕರೆ ಖಂಡಿತಾ ನಟಿಸುವುದಕ್ಕೆ ನಾನು ಸಿದ್ಧ’ ಎಂದರು ಮಹೇಶ್ ಬಾಬು.
“ಸ್ಪೈಡರ್’ ಅವರ ಚಿತ್ರಜೀವನದಲ್ಲಿ ದೊಡ್ಡ ಚಿತ್ರವಂತೆ. “ಈ ಚಿತ್ರವು ಏಕಕಾಲಕ್ಕೆ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾನು ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದೀನಿ. ತಮಿಳು ವರ್ಷನ್‌ಗೆ ನಾನೇ ಡಬ್ ಮಾಡಿದ್ದೇನೆ. ಸಾಮಾನ್ಯವಾಗಿ ಒಂದು ಚಿತ್ರದ ಡಬ್ಬಿಂಗ್ ಎರಡ್ಮೂರು ದಿನಗಳಲ್ಲಿ ಮುಗಿಸುತ್ತೇನೆ. “ಸ್ಪೈಡರ್’ನ ತಮಿಳು ಅವತರಣಿಕೆಗೆ 16 ದಿನ ತೆಗೆದುಕೊಂಡೆ’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.