Advertisement

ಸ್ಯಾನಿಟೈಜರ್‌ ಸೇವಿಸಿದರೆ ಸಾಯುವ ಸ್ಥಿತಿ ಸಂಭವ

01:34 PM Apr 17, 2020 | Suhan S |

ಹುಬ್ಬಳ್ಳಿ/ಧಾರವಾಡ: ಲಾಕ್‌ಡೌನ್‌ ಸಂದರ್ಭದಲ್ಲಿ ಹು-ಧಾ ಅವಳಿನಗರದಲ್ಲಿ ಹಲವು ಮದ್ಯವ್ಯಸನಿಗಳುತಮ್ಮ ಜೀವಕ್ಕೆ ಎರವಾಗುವ ಕಳ್ಳಭಟ್ಟಿ, ಸ್ಪಿರಿಟ್‌ ಹಾಗೂ ಸ್ಯಾನಿಟೈಸರ್‌ ಸೇವನೆಗೆ ಮುಂದಾಗುತ್ತಿರುವುದು ಆಘಾತಕಾರಿಯಾಗಿದೆ. ಮದ್ಯ ಮಾರಾಟ ನಿಷೇಧವಾಗಿದ್ದರಿಂದಕೆಲವರು ಕಳ್ಳಭಟ್ಟಿ ಹಾಗೂ ಸ್ಪಿರಿಟ್‌ ಬೆರೆಸಿದನೀರಿನ ಸೇವನೆಗೆ ಮುಂದಾಗಿದ್ದರೆ, ಇನ್ನು ಕೆಲವರು ಸ್ಯಾನಿಟೈಸರ್‌ಗೆ ತಂಪು ಪಾನೀಯ ಸೇರಿಸಿ ಸೇವನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಆರೋಗ್ಯ ಇಲಾಖೆ ಎಚ್ಚರಿಕೆ: ಆಲ್ಕೋಹಾಲ್‌ ಮಿಶ್ರಿತ ಸ್ಯಾನಿಟೈಸರ್‌ ಗಳು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ಕಾರಣಕ್ಕೂ ಸೇವನೆಗೆ ಯೋಗ್ಯವಲ್ಲ. ಇದರಿಂದ ಲಿವರ್‌ ಮತ್ತು ಬಹು ಅಂಗಾಂಗಗಳು ವೈಫಲ್ಯವಾಗಲಿವೆ ಎಂದು ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಸಿದೆ.

ಸ್ಯಾನಿಟೈಜರ್‌ ಸೇವನೆಗೆ ಯೋಗ್ಯವಲ್ಲ: ಸ್ಯಾನಿಟೈಜರ್‌ದಲ್ಲಿ ಅಲ್ಕೋಹಾಲ್‌ ಮಾತ್ರ ಇರಲ್ಲ. ಇದು ಶೇ.95 ಇಥೈಲ್‌ ಅಲ್ಕೋಹಾಲ್‌, ಶೇ.0.125 ಹೈಡ್ರೋಜನ್‌ ಪೆರಾಕ್ಸೈಡ್‌, ಶೇ.1.45 ಗ್ಲಿಸರಾಲ್‌ ಒಳಗೊಂಡಿರುತ್ತದೆ.ಹೆಚ್ಚಿನ ಪ್ರಮಾಣದಲ್ಲಿ ಇಥೆನಾಲ್‌ ಇರುವುದರಿಂದ ಕುಡಿಯಲು ಇದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಇದರ ಸೇವನೆಯಿಂದ ಅನ್ನನಾಳ, ಜಠರ, ಸಣ್ಣಕರಳು, ದೊಡ್ಡಕರಳು, ಪಿತ್ತಜನಕಾಂಗ (ಲೀವರ್‌) ಮತ್ತು ಮೇದೋಜ್ಜೀರಕ ಗ್ರಂಥಿಗಳಿಗೆ ತೀವ್ರ ಹಾನಿಯಾಗುತ್ತದೆ. ಪ್ರಾಣ ಹಾನಿಯಾಗುವ ಸಾಧ್ಯತೆಗಳು ಇರುತ್ತವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಶಿವಕುಮಾರ್‌ ಮಾನಕರ ತಿಳಿಸಿದ್ದಾರೆ.

ಸಾಯುವ ಸ್ಥಿತಿ ಬರಬಹುದು: ಸ್ಯಾನಿಟೈಸರ್‌ ಹೊಟ್ಟೆಯಲ್ಲಿ ಹೋದರೆ ಅನ್ನನಾಳ ತೂತು ಬೀಳುತ್ತದೆ. ಲೀವರ್‌ಗಳ ಕ್ರಿಯೆಗೂ ಧಕ್ಕೆ ಬರುತ್ತದೆ. ಮನುಷ್ಯ ಸಾಯುವ ಪರಿಸ್ಥಿತಿ ಬರಬಹುದು. ಆದ್ದರಿಂದ ಸ್ಯಾನಿಟೈಜರ್‌ ಸೇವಿಸಬಾರದು. ಇದು ಕುಡಿಯುವ ವಸ್ತು ಅಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ ಮದೀನಕರ ಎಚ್ಚರಿಕೆ  ನೀಡಿದ್ದಾರೆ.

ಅಬಕಾರಿ ಕಾಯ್ದೆ ಮೇಲೆ ಕ್ರಮ: ಔಷಧಿ ಅಂಗಡಿಯವರು ಯಾರಿಗೆ ಮತ್ತು ಎಷ್ಟು ಪ್ರಮಾಣದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಮಾರಾಟ ಮಾಡುತ್ತಿದ್ದೇವೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೇಜವಾಬ್ದಾರಿ ತೋರುವ ಔಷಧಿ ಅಂಗಡಿಗಳ ಮೇಲೆ ಅಬಕಾರಿ ಕಾಯ್ದೆ 1965ರ ಕಲಂ 33 ಹಾಗೂ 38ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣಗಳ ಅಡಿ ಎಸಗುವ ಅಪರಾಧಕ್ಕೆ 4 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಧಾರವಾಡ ಅಬಕಾರಿ ಉಪ ಆಯುಕ್ತ ಶಿವನಗೌಡರ ತಿಳಿಸಿದ್ದಾರೆ.

Advertisement

ಸಾರ್ವಜನಿಕರು ಕಳ್ಳಭಟ್ಟಿ, ಸ್ಪಿರಿಟ್‌ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗಳ ಅಕ್ರಮ ಮಾರಾಟ ಕಂಡು ಬಂದರೆ ಟೋಲ್‌ ಫ್ರೀ ಸಂಖ್ಯೆ 18004250742ಗೆ ಕರೆ ಮಾಡಬಹುದು. ಇದರ ಜತೆಗೆಜಿಲ್ಲಾಡಳಿತ ಸಹಾಯವಾಣಿ 1077 ಕರೆ ಮಾಡಬಹುದು. ವಾಟ್ಸ್‌ಅಪ್‌ ಸಂಖ್ಯೆಗಳಾದ 9449847646, 9449847641ಗೆ ಸಂದೇಶ ಕಳುಹಿಸಬಹುದು

Advertisement

Udayavani is now on Telegram. Click here to join our channel and stay updated with the latest news.

Next