ನಾಗ್ಪುರ: ‘ಅಗ್ನಿಪಥ’ ಯೋಜನೆಯ ವಿರುದ್ಧ ಹಿಂಸಾಚಾರದ ನಡುವೆ, ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ ಸಿಂಗ್ (ನಿವೃತ್ತ) ಭಾನುವಾರ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ರೂಪಿಸಿರುವ ಹೊಸ ನೀತಿಯನ್ನು ಇಷ್ಟಪಡದಿದ್ದರೆ ಅವರು ಸೈನೆಯನ್ನು ಆರಿಸಿಕೊಳ್ಳಬಾರದು ಎಂದು ಹೇಳಿದರು.
ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಕೆ. ಸಿಂಗ್, ಭಾರತೀಯ ಸೇನೆಯು ಸೈನಿಕರನ್ನು ಬಲವಂತಪಡಿಸುವುದಿಲ್ಲ ಮತ್ತು ಸೇನೆಗೆ ಸೇರಬಯಸುವ ಆಕಾಂಕ್ಷಿಗಳು ತಮ್ಮ ಸ್ವಂತ ಇಚ್ಛೆಯಿಂದ ಸೇರಬೇಕು ಎಂದು ಹೇಳಿದರು.
“ಸ್ವಯಂಪ್ರೇರಿತವಾಗಿ ಸೇನೆಗೆ ಸೇರಬೇಕು, ಬಲವಂತದಿಂದಲ್ಲ. ಯಾವುದೇ ಆಕಾಂಕ್ಷಿಗಳು ಸೇರಲು ಬಯಸಿದರೆ, ಅವರು ತಮ್ಮ ಇಚ್ಛೆಯಂತೆ ಸೇರಬಹುದು, ನಾವು ಸೈನಿಕರನ್ನು ಬಲವಂತಪಡಿಸುವುದಿಲ್ಲ. ಆದರೆ ನಿಮಗೆ ಈ ನೇಮಕಾತಿ ಯೋಜನೆ (‘ಅಗ್ನಿಪಥ್’) ಇಷ್ಟವಾಗದಿದ್ದರೆ ಬರಬೇಡಿ, ಯಾರು ನಿಮ್ಮನ್ನು ಬರಲು ಒತ್ತಾಯ ಮಾಡುತ್ತಿದ್ದಾರೆ? ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮಾತ್ರ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ, ಬಸ್ ರೈಲುಗಳನ್ನು ಸುಟ್ಟರೆ ಅಲ್ಲ” ಎಂದು ವಿ.ಕೆ.ಸಿಂಗ್ ಹೇಳಿದರು.
ಇದನ್ನೂ ಓದಿ:ವಿವಾದಕ್ಕೆ ಕಾರಣವಾದ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ
ವಿ.ಕೆ.ಸಿಂಗ್ ಅವರ ಹೇಳಿಕೆಯ ವೀಡಿಯೊವನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ನ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, “ತನ್ನ ನಿವೃತ್ತಿಯನ್ನು ಮುಂದೂಡಲು ನ್ಯಾಯಾಲಯಕ್ಕೆ ಹೋದ ವ್ಯಕ್ತಿ ಯುವಕರನ್ನು 23 ಕ್ಕೆ ನಿವೃತ್ತಿ ಹೊಂದಲು ಕೇಳುತ್ತಿದ್ದಾನೆ” ಎಂದು ಟೀಕೆ ಮಾಡಿದ್ದಾರೆ.