ಬೆಂಗಳೂರು: “ಜುಬ್ಬಾ-ಪೈಜಾಮಾ ಹಾಕಿ ಕೊಂಡು, ಒಂದು ಕಾರು ಇಟ್ಟುಕೊಂಡು ನನ್ನನ್ನು ಎಂಎಲ್‌ಸಿ ಮಾಡಿ, ಅಧ್ಯಕ್ಷಗಿರಿ ಕೊಡಿ ಅಂದರೆ ಆಗದ ಮಾತು. ಬಿಬಿಎಂಪಿ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರು ತ್ತಿವೆ. ಬೂತ್‌ನಲ್ಲಿ ನಿಂತು, ಪಕ್ಷಕ್ಕೆ ನಾಲ್ಕು ವೋಟ್ ಹಾಕಿಸಿ. ಅಲ್ಲಿ ಲೀಡ್ ತಂದು ಅಧಿಕಾರ ಕೇಳಿ. ಇಲ್ಲವಾದರೆ ದಯವಿಟ್ಟು ಪಕ್ಕಕ್ಕೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಡಿ…’
-ಮೇಲ್ಮನೆ ಚುನಾವಣೆ ಬೆನ್ನಲ್ಲೇ ಅಧಿಕಾರ, ಹುದ್ದೆಗಾಗಿ ತಮಗೆ ದುಂಬಾಲು ಬೀಳುತ್ತಿರುವ ಪಕ್ಷದ ಕೆಲವು ಸ್ಥಳೀಯ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಸ್ಪಷ್ಟ ಎಚ್ಚರಿಕೆ ಇದು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು.
ನಾಯಕರಾಗಬೇಕು ಎಂದು ಬಯಸುವವರು ಮುಂಬರುವ ಚುನಾವಣೆಗಳಲ್ಲಿ ನಿಮ್ಮ ಬೂತ್‌ಗಳಲ್ಲಾದರೂ ಲೀಡ್ ತರಬೇಕು. ಅದು ಸಾಧ್ಯವಾಗದವರು ಅಧಿಕಾರ ಅಥವಾ ನಾಯಕತ್ವ ಕೇಳಬಾರದು ಎಂದು ಸ್ಪಷ್ಟಪಡಿಸಿದರು.
ಹೊಸ ತಂಡ ಕಟ್ಟುವ ಕಾಲ: ಪಕ್ಷದ ಬ್ಲಾಕ್ ಮಟ್ಟದಿಂದ ಹಿಡಿದು ರಾಜ್ಯ ಘಟಕದ ವರೆಗೆ ಎಲ್ಲವನ್ನೂ ರದ್ದುಗೊಳಿಸಿ ಹೊಸ ತಂಡ ಕಟ್ಟುವ ಕಾಲ ಸನ್ನಿಹಿತವಾಗಿದೆ. ಯಾರು ಕ್ರಿಯಾಶೀಲವಾಗಿರುತ್ತಾರೋ ಅವರು ಉಳಿದುಕೊಳ್ಳುತ್ತಾರೆ. ಉಳಿದವರನ್ನು ಮುಲಾ ಜಿಲ್ಲದೆ ತೆಗೆದು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ ಡಿ.ಕೆ. ಶಿವಕುಮಾರ್, ಪಕ್ಷಕ್ಕೆ ನಾಲ್ಕು ವೋಟ್ ಹಾಕಿಸಿ, ಅಲ್ಲಿ ಲೀಡ್ ತಂದು ಅಧಿಕಾರ ಕೇಳಬೇಕು ಎಂದು ತೀಕ್ಷ್ಣವಾಗಿ ಹೇಳಿದರು.
ಸ್ಥಳೀಯ ಮಟ್ಟದಿಂದ ಬೆಳೆದರು: ಕೆಲವರು ಏಕಾಏಕಿ ಎಂಎಲ್‌ಸಿಗಾಗಿ ಲಾಬಿ ಮಾಡು ತ್ತಾರೆ ಎಂದು ಹೇಳಿದ ಡಿಸಿಎಂ, ನೆಹರೂ, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ, ಬಿ.ಡಿ. ಜತ್ತಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕ ಮಹಾನ್ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ಬೆಳೆದವರು ಎಂದು ಡಿ.ಕೆ. ಶಿವಕುಮಾರ್ ಕಾರ್ಯಕರ್ತರನ್ನು ಎಚ್ಚರಿಸಿದರು.
ನಾನು ಎಷ್ಟು ದಿನ ಕೆಪಿಸಿಸಿ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಮುಂದಿನ ಮೂರು-ನಾಲ್ಕು ತಿಂಗಳಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ.
– ಡಿ.ಕೆ. ಶಿವಕುಮಾರ್, ಡಿಸಿಎಂ