Advertisement
ಬೆಂಗಳೂರು: ನಾಡು ನುಡಿ ರಕ್ಷಣೆಗಾಗಿ ಹೋರಾಟ, ಹರತಾಳ ನಡೆಸುವವರ ನಡುವೆಯೇ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಕನ್ನಡ ಭಾಷೆ ಉಳಿವು ಹಾಗೂ ಬೆಳವಣಿಗೆಗಾಗಿ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಕನ್ನಡವನ್ನು ಪಸರಿಸುವ ಹಾಗೂ ಕನ್ನಡವನ್ನು “ಅನ್ನದ ಭಾಷೆ’ಯಾಗಿ ಪರಿವರ್ತಿಸುವ ಕಾರ್ಯವನ್ನು ಸದ್ದಿಲ್ಲದೆ ನಡೆಸುತ್ತಿಸದ್ದಾರೆ.
Related Articles
Advertisement
ಕನ್ನಡಿಗರಿಗೆ ಮಾರ್ಗದರ್ಶಿ: ಸಾಫ್ಟ್ವೇರ್ ಉದ್ಯೋಗಿಯಾಗಿರುವ ಗುರುರಾಜ್, ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಬರುವ ನಿರುದ್ಯೋಗಿ ಕನ್ನಡ ಯುವಕರಿಗೆ ಕೆಲಸದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅದಕ್ಕಾಗಿಯೇ 5 ವಾಟ್ಸ್‌ಆ್ಯಪ್ ಗ್ರೂಪ್‌ಗ್ಳನ್ನು ಸೃಷ್ಟಿಸಿರುವ ಅವರು, ಎಲ್ಲೆಲ್ಲಿ ಕೆಲಸಗಳು ಖಾಲಿ ಇವೆ ಎಂಬ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಕಂಪನಿಗಳಿಗೆ ತಮ್ಮ ಮೂಲಕ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಗಳ ಮೂಲಕ, ಇತರರಿಗೂ ಕೆಲಸ ಕೊಡಿಸಲು ಶಿಫಾರಸು ಮಾಡಿಸುತ್ತಾರೆ. ಈ ರೀತಿ ಇದುವರೆಗೆ 500ಕ್ಕೂ ಹೆಚ್ಚು ಮಂದಿ ಗ್ರಾಮೀಣ ಕನ್ನಡ ಪ್ರತಿಭೆಗಳನ್ನು ಐಟಿ ಕ್ಷೇತ್ರಕ್ಕೆ ಬರುವಂತೆ ಮಾಡಿದ್ದಾರೆ.
ಇಂಗ್ಲಿಷ್ ಕಲಿಸಿ, ಆತ್ಮಸ್ಥೈರ್ಯ ತುಂಬುತ್ತಾರೆ: ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಹಾಗೂ ಇಂಗ್ಲಿಷ್ ಕಲಿಕೆ ಮತ್ತು ಸಂದರ್ಶನ ಎದುರಿಸುವ ಬಗ್ಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಕರವೇ ಐಟಿ ವಿಭಾಗದ ಫೇಸ್‌ಬುಕ್ ಪೇಜ್ ಮಾಡುತ್ತಿದೆ. ಪ್ರಮುಖವಾಗಿ ಮಾರ್ಗದರ್ಶಿ ಶಿಬಿರಗಳನ್ನು ನಡ3ಎಸುವ ಮೂಲಕ ನೇರವಾಗಿ ತರಬೇತಿ ನೀಡಲಾಗುತ್ತಿದೆ. ಜತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರು ಹೆಚ್ಚಾಗಬೇಕೆಂಬ ಉದ್ದೇಶದಿಂದ ಉಚಿತ ಕಾರ್ಯಾಗಾರ ಸಹ ಹಮ್ಮಿಕೊಳ್ಳಲಾಗುತ್ತಿದ್ದು, ಸಾವಿರಾರು ಜನರಿಗೆ ಫೇಸ್‌ಬುಕ್ ಪೇಜ್‌ನಿಂದ ಉದ್ಯೋಗ ಸಿಕ್ಕಿದೆ ಎಂದು ಕರವೇ ಐಟಿ ವಿಭಾಗದ ಗಿರೀಶ್ ಕರಗದ್ದೆ ಹರ್ಷ ವ್ಯಕ್ತಪಡಿಸುತ್ತಾರೆ.
ದಿಗ್ಗಜ ಸಂಸ್ಥೆಗಳಿಂದ ಕನ್ನಡ ಪಾಠ: ಹಲವಾರು ಐಟಿ-ಬಿಟಿ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿಯೇ “ಕನ್ನಡ ಕಲಿ’ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿವೆ. ಅದರಂತೆ ಇನ್ಫೋಸಿಸ್, ಸಿಸ್ಕೊ ಸೇರಿದಂತೆ ಹತ್ತಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕನ್ನಡ ಕಲಿಸುತ್ತಿವೆ.
“ಕನ್ನಡ ಗೊತ್ತಿಲ್ಲ’ ಅಂದ್ರೆ ಕಲಿಸ್ತಾರೆ!: ಅನೂಪ್ ಮಯ್ಯ ಎಂಬವರು “ಕನ್ನಡ ಗೊತ್ತಿಲ್ಲ’ ಎಂಬ ಫೇಸ್‌ಬುಕ್ ಪೇಜ್ ಆರಂಭಿಸಿದ್ದಾರೆ. ಮೂರು ಹಂತಗಳಲ್ಲಿ ಕನ್ನಡ ಭಾಷೆ ಬರೆಯುವುದು, ಓದುವುದು ಹಾಗೂ ಮಾತನಾಡುವುದನ್ನು ಅವರು ಕಲಿಸುತ್ತಾರೆ. ಕನ್ನಡ ಗೊತ್ತಿಲ್ಲ ಫೇಸ್‌ಬುಕ್ ಪೇಜ್ ಮೂಲಕ ಕಳೆದ ಎರಡು ವರ್ಷಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಕನ್ನಡ ಕಲಿಸಲಾಗಿದೆ ಎಂದು ಪೇಜ್‌ನ ಸದಸ್ಯೆ ನಿವೇದಿತಾ ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ದಿನಕ್ಕೊಂದು ಪದ, ವಾರಕ್ಕೊಂದು ವೀಡಿಯೋ: ಫೇಸ್‌ಬುಕ್ ಹಾಗೂ ಯುಟ್ಯೂಬ್ ಮೂಲಕ ಹೊರ ರಾಜ್ಯದವರಿಗೆ ಕನ್ನಡ ಕಲಿಸುವ ಕೆಲಸವನ್ನು ಇಂಡ್ ಲ್ಯಾಂಗ್ಸ್ ಸಂಸ್ಥೆ ಕಳೆದ 8 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಅದರಂತೆ ದಿನಕ್ಕೊಂದು ಕನ್ನಡ ಪದದ ಅರ್ಥ ಹಾಗೂ ವಾರಕ್ಕೊಂದು ವೀಡಿಯೋ ಎಂಬ ಯೋಜನೆಯಡಿ ಹೊರ ರಾಜ್ಯದವರಿಗೆ ಕನ್ನಡ ಭಾಷೆ ತಿಳಿಸಲಾಗುತ್ತದೆ ಎನ್ನುತ್ತಾರೆ ಇಂಡ್ ಲ್ಯಾಂಗ್ಸ್‌ನ ಸಂಸ್ಥಾಪಕ ರಾಘವೇಂದ್ರ ಪ್ರಸಾದ್.
ಪ್ರಮುಖವಾಗಿ ನಾವು ರಿಯಲ್ ಟೈಮ್ ಇಂಪ್ಲಿಮೆಂಟ್ ತರಗತಿ ಮಾಡುತ್ತೇವೆ. ನಾವು ಆನ್‌ಲೈನ್ ಅಥವಾ ಸ್ಕೈಪ್ ಮೂಲಕ ಹೇಳಿ ಕೊಟ್ಟಿದ್ದನ್ನು ಕೂಡಲೇ ರಸ್ತೆಗೆ ಹೋಗಿ ಜನರೊಂದಿಗೆ ಮಾತನಾಡಬೇಕಾಗುತ್ತದೆ. ಇದರಿಂದ ಅವರು ಶೀಘ್ರ ಕನ್ನಡ ಕಲಿಯುತ್ತಾರೆ. ಕನ್ನಡ ಭಾಷೆಯನ್ನು ಚೆನ್ನೈ, ಹೈದರಾಬಾದ್, ಕೇರಳ, ಇಂಗ್ಲೆಡ್, ನೆದರ್‌ಲ್ಯಾಂಡ್, ಸಿಂಗಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಲಿಸಲಾಗುತ್ತದೆ.
* ವೆಂ.ಸುನೀಲ್‌ಕುಮಾರ್