Advertisement

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಏಳ್ಗೆಗೆ ಬದ್ಧ​​​​​​​

06:25 AM Feb 12, 2018 | Team Udayavani |

ಸಿಂಧನೂರು: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಏಳಿಗೆಗಾಗಿ ದುಡಿಯಲು ಬದ್ಧ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ರಾಯಚೂರು ಜಿಲ್ಲೆ ಸಿಂಧನೂರಿನ ಸ್ತ್ರೀಶಕ್ತಿ ಭವನದಲ್ಲಿ ಭಾನುವಾರ ಸಂಜೆ ರೈತರೊಂದಿಗೆ ಅವರು ಸಂವಾದ ನಡೆಸಿದರು. ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಅವರು ರೈತರ ಸಾಲ ಮನ್ನಾ ಮಾಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, ಕಳೆದ ವರ್ಷ ಬಂಡವಾಳ ಶಾಹಿಗಳ 1.30 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರು ಕಾಣಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜ್ಯದ ರೈತರ ಸಾಲ ಮನ್ನಾ ಮಾಡಿಸಿದ್ದೇವೆ. ಅದರಂತೆ ಪಂಜಾಬ್‌ ಸರ್ಕಾರದಿಂದ ಕೂಡ ರೈತರ ಸಾಲ ಮನ್ನಾ ಮಾಡಿಸಿದ್ದೇವೆ. ರೈತರಿಗಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.

ನೋಟ್‌ ಬ್ಯಾನ್‌ನಿಂದಾಗಿ ಸೂಟು, ಬೂಟು ಹಾಕಿದ ಬಂಡವಾಳಶಾಹಿಗಳು ಯಾವುದಾದರೂ ಬ್ಯಾಂಕಿನ ಮುಂದೆ ನಿಂತಿದ್ದನ್ನು ನೀವು ನೋಡಿದ್ದೀರಾ? ನೋಡಿಲ್ಲ. ಯಾಕೆ ಅವರ ಹತ್ತಿರ ಹಣ ಇರಲಿಲ್ಲವೇ?, ಇತ್ತು. ಅವರೆಲ್ಲಾ ಮೋದಿ ಸಹಾಯದೊಂದಿಗೆ ಬ್ಯಾಂಕಿನ ಹಿಂಬಾಗಿಲ ಮೂಲಕ ವ್ಯವಹಾರ ಮಾಡಿದ್ದಾರೆ. ಇದಕ್ಕೆಲ್ಲ ಪ್ರಧಾನಿ ಮೋದಿಯವರು ರೈತ ಕಾರ್ಮಿಕರನ್ನು ಬಲಿ ಪಡೆದುಕೊಂಡಿದ್ದಾರೆ. ರೈತ ಕಾರ್ಮಿಕರನ್ನು ಬ್ಯಾಂಕ್‌ ಮುಂದೆ ನಿಲ್ಲುವಂತೆ ಮಾಡಿದರೇ ವಿನಃ ನಿಜವಾದ ಬಂಡವಾಳಶಾಹಿಗಳನ್ನಲ್ಲ ಎಂದು ರಾಹುಲ್‌ ಹರಿಹಾಯ್ದರು.

ಮದ್ಯ ಮಾರಾಟ ನಿಷೇಧವಿಲ್ಲ: ಸಿಎಂ
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಸಿಂಧನೂರಿನ ಮಹಿಳೆಯೊಬ್ಬರು ಕೋರಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಮಾತ್ರ ಮದ್ಯ ನಿಷೇಧಿಸಿದರೆ ಅಷ್ಟೊಂದು ಪರಿಣಾಮಕಾರಿಯಾಗಿ ಯಶಸ್ವಿಯಾಗುವುದಿಲ್ಲ. ರಾಜ್ಯದಲ್ಲಿ ಮದ್ಯ ಬಂದ್‌ ಮಾಡಿದರೆ, ಪಕ್ಕದ ರಾಜ್ಯದಿಂದ ಕಳ್ಳ ಮಾರಾಟ, ಕಳ್ಳಭಟ್ಟಿ ಸಾರಾಯಿ ಪ್ರಾರಂಭವಾಗಿ ಅನೈತಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಆದ್ದರಿಂದ ರಾಷ್ಟ್ರಮಟ್ಟದಲ್ಲೇ ಮದ್ಯ ಮಾರಾಟ ನಿಲ್ಲಿಸಲು ತಿದ್ದುಪಡಿ ಮಾಡಿ ಮದ್ಯ ನಿಷೇಧ ಮಾಡಿದರೆ ಯಶಸ್ವಿಯಾಗುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮದ್ಯ ಮಾರಾಟ ನಿಲ್ಲಿಸಲು ಚಿಂತನೆ ನಡೆಸಲಾಗುವುದು ಎಂದರು.

ಬಾಯಿ ಬಡಾಯಿ, ಸಾಧನೆ ಶೂನ್ಯ
ಕೊಪ್ಪಳ: ಪ್ರಧಾನಿ ಮೋದಿ ಅವರದ್ದು ಬಾಯಿ ಬಡಾಯಿ, ಆದರೆ ಸಾಧನೆ ಮಾತ್ರ ಶೂನ್ಯ. ಅವರದ್ದು ಖಾಲಿ ಮನ್‌ ಕೀ ಬಾತ್‌, ನಮ್ಮದು ಕಾಮ್‌ ಕೀ ಬಾತ್‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಾರಟಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಮೋದಿ ಬಂದಾಗ ಅವರ ಪಕ್ಕದಲ್ಲೇ ಬಿಎಸ್‌ವೈ ಸೇರಿದಂತೆ ಹಲವು ಭ್ರಷ್ಟರು ಕುಳಿತಿರುತ್ತಾರೆ. ಜೈಲಿಗೆ ಹೋದವರು ಇರ್ತಾರೆ. ಕೊಲೆ ಕೇಸಲ್ಲಿ ಜೈಲಿಗೆ ಹೋಗಿದ್ದ, ಗಡಿಪಾರು ಮಾಡಿದ್ದ ಅಮಿತ್‌ ಶಾರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಾರಲ್ಲ, ಬಿಜೆಪಿಗೆ ನಾಚಿಕೆ ಆಗಲ್ವಾ ಎಂದರು.

Advertisement

ನಮ್ಮ ಸಾಧನೆ ಶೂನ್ಯ ಎನ್ನುವ ಬಿಎಸ್‌ವೈ, ಜಗದೀಶ ಶೆಟ್ಟರ್‌ ಅವರಿಗೆ ತಾಕತ್ತಿದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಕರೆದಿದ್ದೆ. ಆದರೆ,ಅವರು ಬರಲಿಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next