Advertisement
ದೇರಳಕಟ್ಟೆಯಲ್ಲಿ ಆಟೋ ರಿಕ್ಷಾ ಚಾಲಕರು ಅಧಿಕ ಬಾಡಿಗೆ ದರ ವಸೂಲು ಮಾಡುತ್ತಿದ್ದಾರೆ. ರಿಕ್ಷಾದಲ್ಲಿ ಎಲ್ಲಿಗೇ ಹೋಗ ಬೇಕಿದ್ದರೂ ಕನಿಷ್ಠ 30 ರೂ. ತಗೊಳ್ತಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಡಿಸಿಪಿ, ದೇರಳಕಟ್ಟೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಅಲ್ಲಿಗೆ ಹೊರ ಜಿಲ್ಲೆಗಳಿಂದಲೂ ರೋಗಿಗಳನ್ನು ಕರೆದುಕೊಂಡು ಜನ ಬರುತ್ತಾರೆ. ಹಾಗಾಗಿ ಅಲ್ಲಿನ ರಿಕ್ಷಾ ಚಾಲಕರು ಹೆಚ್ಚಿನ ದರ ವಸೂಲು ಮಾಡುತ್ತಾರೆ. ಆದ್ದರಿಂದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ದೇರಳಕಟ್ಟೆಯಲ್ಲಿ ಸಾರ್ವಜನಿಕರನ್ನು ಮತ್ತು ರಿಕ್ಷಾ ಚಾಲಕರನ್ನು ಸೇರಿಸಿ ಸಭೆಯನ್ನು ನಡೆಸಿ, ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ರಿಕ್ಷಾ ಪಾರ್ಕ್‌ಗಳಲ್ಲಿ ಬಾಡಿಗೆ ದರದ ನಾಮ ಫಲಕ, ರಿಕ್ಷಾಗಳಲ್ಲಿ ಬಾಡಿಗೆ ದರವನ್ನು ನಮೂದಿಸುವ ಬಗ್ಗೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ದೇರಳಕಟ್ಟೆ ಅಂಬೇಡ್ಕರ್ ಪದವಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರೊಬ್ಬರು ಆಗ್ರಹಿಸಿದಾಗ, ಈ ಬಗ್ಗೆ ಆರ್‌ಟಿಒ ಗಮನಕ್ಕೆ ತಂದು ಕೆಎಸ್‌ಆರ್‌ಟಿಸಿ ಬಸ್ ಹಾಕಲು ಸಲಹೆ ನೀಡಲಾಗುವುದು ಎಂದು ಡಿಸಿಪಿ ತಿಳಿಸಿದರು. ಈ ಸಂದರ್ಭ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಪ್ರತಿಕ್ರಿಯಿಸಿ, ಏರಿಯಾ ಸ್ಕೀಮ್‌ನಡಿ ಬಸ್ ಸಂಚಾರ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡುವ ನಿಟ್ಟಿನಲ್ಲಿ ಖಾಸಗಿಯಾಗಲಿ, ಕೆಎಸ್‌ಆರ್‌ಟಿಸಿಯಾಗಲಿ ಬಸ್ ಓಡಿಸಲು ಹೊಸ ಪರವಾನಿಗೆಯನ್ನೇ ನೀಡಲಾಗುತ್ತಿಲ್ಲ. ಹಾಗಿರುವಾಗ ಬಸ್ ಹಾಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
Related Articles
ಸುಲ್ತಾನ್ ಬತ್ತೇರಿಗೆ ಸ್ಟೇಟ್ಬ್ಯಾಂಕ್‌ನಿಂದ 3 ಸಿಟಿ ಬಸ್‌ಗಳಿದ್ದು, ಸಂಜೆ 7 ಗಂಟೆ ವೇಳೆಗೆ ಎಲ್ಲ ಬಸ್‌ಗಳು ಸಂಚಾರವನ್ನು ಮೊಟಕುಗೊಳಿಸುತ್ತವೆ. ಕೆಲವು ದಿನಗಳ ಹಿಂದೆ ಸುಲ್ತಾನ್ ಬತ್ತೇರಿ ಕಡೆ ಹೋಗು ತ್ತಿದ್ದ ಒಂದು ಸಿಟಿ ಬಸ್ಸಿನ ಸಿಬಂದಿ ಬಸ್ ಯಾನವನ್ನು ಬೋಳೂರಿನಲ್ಲಿ ಮೊಟಕು ಗೊಳಿಸಿದ್ದು, ಇದರಿಂದ ಆ ಬಸ್ಸಿನಲ್ಲಿ ಮಗುವಿನ ಜತೆ ಪ್ರಯಾಣಿಸುತ್ತಿದ್ದ ಮಹಿಳೆ ಬೋಳೂರಿನಿಂದ ಸುಲ್ತಾನ್ ಬತ್ತೇರಿ ತನಕ ನಡೆದುಕೊಂಡೇ ಹೋಗ ಬೇಕಾಗಿ ಬಂತು. ಲೇಡಿಹಿಲ್ ಮಾರ್ಗವಾಗಿ ಸುಲ್ತಾನ್ ಬತ್ತೇರಿ ಕಡೆಗೆ ಸಂಚರಿಸುವ 16 ಸಿ ನಂಬ್ರದ ಬಸ್ ಕೂಡ ಸುಲ್ತಾನ್‌ಬತ್ತೇರಿ ತನಕ ಹೋಗದೆ ಅರ್ಧದಿಂದ ವಾಪಸಾಗುತ್ತಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಬಸ್ ಮಾಲಕರು ಮತ್ತು ಆರ್‌ಟಿಒ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು. ಇದು 115ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 29 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ, ಡಿಸಿಪಿ ಲಕ್ಷ್ಮೀ ಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಹರೀಶ್ ಕೆ. ಪಟೇಲ್, ಅಶೋಕ್ ಕುಮಾರ್, ಕೃಷ್ಣಾನಂದ ನಾೖಕ್, ಪಿಎಸ್‌ಐ ಯೋಗೀಶ್, ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
Advertisement
ಪ್ರಮುಖ ದೂರುಗಳು•ಪೊಲೀಸ್ ಇಲಾಖೆಯ ‘ಸಾಗರ್’ ವಾಹನಗಳು ಮಳೆಗಾಲದಲ್ಲಿ ಲೈಟ್ ಹಾಕಿಕೊಂಡು ಸಂಚರಿಸಬೇಕು. •ನಗರದ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ನಿರ್ವಾಹಕರು ಟಿಕೆಟ್ ನೀಡುವುದಿಲ್ಲ. • 15 ನಂಬ್ರದ ಬಸ್‌ಗಳು ಪ್ರಯಾಣಿಕರನ್ನು ಅರ್ಧದಲ್ಲಿ ಇಳಿಸಿ ಬಿಡುತ್ತವೆ. ••ಸುರತ್ಕಲ್ನಲ್ಲಿ ಮತ್ತು ಮಣ್ಣಗುಡ್ಡ ಕೆನರಾ ಹೈಸ್ಕೂಲ್ ಬಳಿ ವಾಹನಗಳನ್ನು ಫುಟ್ಪಾತ್‌ನಲ್ಲಿ ನಿಲ್ಲಿಸುತ್ತಾರೆ. ••ಹಳೆಯಂಗಡಿಯಲ್ಲಿ ರಸ್ತೆ ಗುಂಡಿ ನಿರ್ಮಾಣವಾಗಿದೆ. ••ವಾಹನಗಳಿಗೆ ಹೆಚ್ಚುವರಿ ಲೈಟ್‌ಗಳನ್ನು ಅಳವಡಿಸುವುದರಿಂದ ಇತರ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ••ಜಿ.ಎಚ್.ಎಸ್. ರಸ್ತೆಯಲ್ಲಿ ವಾಹನಗಳ ಒತ್ತಡದಿಂದ ಶಾಲಾ ಮಕ್ಕಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ.