Advertisement

ಎಂಆರ್‌ಪಿಗಿಂತ ಜಾಸ್ತಿ ಕೇಳಿದರೆ ನೀವು ಹೀಗೆ ಮಾಡಿ!

03:45 AM Jun 26, 2017 | |

ಬಸ್‌ ನಿಲ್ದಾಣಗಳಲ್ಲಿ ಮಾರಾಟ ಮಾಡುವ ಎಲ್ಲ ಪದಾರ್ಥಗಳ ಬೆಲೆ ಎಂಆರ್‌ಪಿಗಿಂತ ಜಾಸ್ತಿ. ಇದಕ್ಕೊಂದು ಅಲಿಖೀತ ಸಮ್ಮತಿಯನ್ನು ಅಧಿಕಾರಿಗಳು ಕೂಡ ಕೊಟ್ಟಿರಬೇಕು. ಅದರಲ್ಲೂ ರಾತ್ರಿ ಸಮಯದಲ್ಲಿ ಬಸ್‌ ನಿಲ್ಲುವ ಡಾಬಾ ಸುತ್ತಮುತ್ತಲಿನ ಅಂಗಡಿಗಳಲ್ಲಂತೂ ಅವರು ಹೇಳಿದ್ದೇ ಬೆಲೆ. ಎಂಆರ್‌ಪಿಗಿಂತ ಜಾಸ್ತಿ ಪಡೆಯುವಂತಿಲ್ಲ ಎಂಬ ಅಂಶ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು. ಆದರೂ ತಕರಾರು ಮಾಡುವುದಿಲ್ಲ.

Advertisement

ಈ ಕುರಿತು ತೂಕ ಮತ್ತು ಅಳತೆ ಇಲಾಖೆಗೆ ದೂರು ನೀಡಬಹುದು. ಅಧಿಕಾರಿಗಳು ದಾಳಿ ಮಾಡಿ ದುಬಾರಿ ಬೆಲೆ ಪ್ರಕರಣ ಕಂಡುಬಂದರೆ ದಂಡ ವಿಧಿಸುತ್ತಾರೆ. ಇಂತಹ ಹಲವು ಪ್ರಕರಣಗಳು ಜಾಗೃತ ಗ್ರಾಹಕರ ಕಾರಣದಿಂದ ನಡೆದಿದೆ. ಆದಾಗ್ಯೂ ಅಂಗಡಿಯವರು ಚಾಳಿ ಬಿಡುತ್ತಿಲ್ಲ. ಕಾರಣ ಸ್ಪಷ್ಟ. ಒಬ್ಬ ಗ್ರಾಹಕನ ಕಾರಣಕ್ಕೆ ಅವರು ದಂಡ ಕೊಡಬೇಕಾಗಿದೆಯಾದರೂ ಈ ಪ್ರಕರಣಗಳು ನಿರಂತರವಾಗಿ ನಡೆಯುವುದಿಲ್ಲ. ಆದರೆ ಎಂಆರ್‌ಪಿಗಿಂತ ಹೆಚ್ಚಿನ ಕಮಾಯಿಯನ್ನು ಪ್ರತಿ ಗ್ರಾಹಕನಿಂದ ಮಾಡುತ್ತಾರೆ. ಅದರ ಎದುರು ಈ ದಂಡದ ಮೊತ್ತ ಒಂದು ಒಪ್ಪತ್ತಿನೊಳಗೆ ಭರ್ತಿಯಾಗುತ್ತದೆ. ಅದೇ ಪ್ರತಿಯೊಬ್ಬರೂ ಎಂಆರ್‌ಪಿಗೆ ಜಗಳ ಬಿದ್ದು, ತೂಕ ಮತ್ತು ಅಳತೆ ಅಧಿಕಾರಿಗಳಿಗೆ ದೂರು ಸಲ್ಲಿಸುವಂತಾಗಿದ್ದರೆ ಎಲ್ಲರೂ ನೇರ ದಾರಿಯಲ್ಲಿ ನಡೆಯುತ್ತಿದ್ದರೇನೋ…!

ನೀರು ಕುಡಿದಿದ್ದು ಯಾರು?
ಜನಕ್ಕೆ ಇಂತಹ ಕೆಲವು ದೃಷ್ಟಾಂತಗಳನ್ನು ಒದಗಿಸಿದರೆ ಸ್ಫೂರ್ತಿ ತುಂಬಬಹುದೇ? ಬೆಂಗಳೂರಿನಿಂದ ರಾಣೆಬೆನ್ನೂರಿಗೆ ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಜೆ.ಎಂ.ರಾಜಶೇಖರ್‌ರಿಗೆ ಬಾಯಾರಿಕೆಯಾಗುತ್ತದೆ. ರೈಲೊಳಗೇ ಖರೀದಿಗೆ ಸಿಕ್ಕ ನೀರಿನ ಬಾಟಲಿಗೆ ಇದ್ದುದು 15 ರೂ. ಆದರೆ, 20 ರೂಪಾಯಿಗೆ ಒಂದರಂತೆ ನೀರಿನ ಬಾಟಲಿಯನ್ನು ಮಾರಲಾಗುತ್ತಿತ್ತು. ನೀರನ್ನು ಖರೀದಿಸಿದ ರಾಜಶೇಖರ್‌ 15 ರೂ. ಮಾತ್ರ ಪಡೆಯಬೇಕೆಂದು ಪ್ರತಿಭಟಿಸಿದರು. ಆದರೆ ನೀರು ಮಾರಾಟಗಾರ 20 ರೂ. ಅನ್ನೇ ಕೊಡಬೇಕೆಂದು ಹಟ ಮಾಡಿದ. ಇತ್ತ ರಾಜಶೇಖರ್‌ ರೈಲಿನ ಟಿಕೆಟ್‌ ತಪಾಸಣಾ ಅಧಿಕಾರಿಯನ್ನು ಕರೆದು ದೂರು ಕೊಟ್ಟರು.

ದೂರಿನ ಹಿನ್ನೆಲೆಯಲ್ಲಿ ಅವರಿಗೆ 5 ರೂ. ವಾಪಾಸು ಬಂತು. ಸಮಾಧಾನವಾಗಲಿಲ್ಲ. ಆ ವೇಳೆಗೆ ಅವ ನೂರಾರು ಸಂಖ್ಯೆಯ ಗ್ರಾಹಕರಿಗೆ 20 ರೂ.ಗೆ ನೀರಿನ ಬಾಟಲಿ ಮಾರಿದ್ದಾನೆ. ಒಂದು 5 ರೂ. ಅವನಿಗೆ ಲೆಕ್ಕವಲ್ಲ. ಈವರೆಗೆ ಖರೀದಿಸಿದವರಿಗೆಲ್ಲ ಹೆಚ್ಚುವರಿ ಹಣವನ್ನು ಅವ ಮರಳಿಸಲೇಬೇಕು ಎಂದು ರಾಜಶೇಖರ್‌ ಗಟ್ಟಿಯಾಗಿ ಪ್ರತಿಪಾಧಿಸಲಾರಂಭಿಸಿದರು. ಸಹ ಪ್ರಯಾಣಿಕರ ಬೆಂಬಲವೂ ಸಿಕ್ಕಿತು. ಕೊನೆಗೆ ಅವರು ಆವರೆಗೆ ರೈಲಿನಲ್ಲಿ ಎಷ್ಟು ಗ್ರಾಹಕರಿಗೆ 20 ರೂಪಾಯಿಯಂತೆ ನೀರಿನ ಬಾಟಲಿಯನ್ನು ಮಾರಿದ್ದನೋ ಆ ಎಲ್ಲಾ ಪ್ರಯಾಣಿಕರಿಗೂ ಹೆಚ್ಚುವರಿ ಪಡೆದ 5 ರೂ.ಗಳನ್ನು ವಾಪಾಸ್‌ ಮಾಡಿದ!

ಇನ್ನೊಂದು ಘಟನೆ. ಕರಜಗಿ ರೈಲು ನಿಲ್ದಾಣದಲ್ಲಿ 12 ರೂ. ಎಂಆರ್‌ಪಿಯ ಮಿನರಲ್‌ ವಾಟರ್‌ ಬಾಟಲ ಖರೀದಿಗೆ 15 ರೂ.!  ಖಂಡಿಸಿದರೆ, ಬೇಕಾದರೆ ತೆಗೆದುಕೊಳ್ಳಿ, ಬೇಡವಾದರೆ ಇಟ್ಟು ಹೋಗಿರಿ ಎಂದು  ಮಾರಾಟಗಾರನಿಂದ ಬೆದರಿಕೆ. ಹುಬ್ಬಳ್ಳಿಯ ರೈಲ್ವೆ ಸ್ಟೇಷನ್‌ ಮಾಸ್ಟರ್‌ ಅವರಿಗೆ ಫೋನಾಯಿಸಿ, 12 ರೂ. ಮಿನರಲ್‌ ನೀರಿನ ಬಾಟಲ್‌ಅನ್ನು 15 ರೂ.ಗೆ ಮಾರಿದ್ದನ್ನು ಆಕ್ಷೇಪಿಸಿ ದೂರು ಸಲ್ಲಿಸಲಾಯಿತು. ಹುಬ್ಬಳ್ಳಿ ತಲುಪಿದ ಮೇಲೆ ಲಿಖೀತವಾಗಿ ದೂರು ಸಲ್ಲಿಸಲಾಯಿತು. ಸ್ಟೇಷನ್‌ ಮಾಸ್ತರ್‌ ಅವರು ನೀರು ಮಾರಾಟ ಮಾಡಿದ ಅಂಗಡಿ ಮಾಲೀಕನಿಗೆ ಫೋನುಮಾಡಿದಾಗ ತಪ್ಪಾಯಿತೆಂದು ಒಪ್ಪಿಕೊಂಡು ಹೆಚ್ಚುವರಿ ಪಡೆದ 3 ರೂ. ಮತ್ತು ಮೊಬೈಲ್‌ನಿಂದ ಕರೆ ಮಾಡಿದ ವೆಚ್ಚ 80 ಪೈಸೆಯನ್ನು ವಾಪಾಸ್‌ ಕೊಡುವುದಾಗಿ ಹೇಳಿದ. 

Advertisement

ಒಂದು ತಿಂಗಳು ಕಾದರೂ ಹಣ ವಾಪಾಸ್‌ ಬರಲಿಲ್ಲ. ಆಗ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಾಗಿ ಕರಜಗಿ ರೈಲು ನಿಲ್ದಾಣದ ಆಹಾರ ಮತ್ತು ನೀರು ಪೂರೈಕೆ ಮಾಲೀಕನಿಗೆ ಲೀಗಲ್‌ ನೋಟಿಸ್‌ ನೀಡಲಾಯಿತು. ಹೆಚ್ಚುವರಿ ಪಡೆದ 3 ರೂ. ದೂರವಾಣಿ ಕರೆಯ 80 ಪೈಸೆ, ಲೀಗಲ್‌ ನೋಟಿಸ್‌ ಟೈಪ್‌ ಮಾಡಿದ ವೆಚ್ಚ, ಅಂಚೆಯ ವೆಚ್ಚ, ಲೀಗಲ್‌ ನೋಟಿಸ್‌ ಕೊಟ್ಟ ವೆಚ್ಚ ಹಾಗೂ ಪರಿಹಾರ ಒಟ್ಟು 3,120 ರೂಪಾಯಿಗಳನ್ನು ಕೊಡುವಂತೆ ತಿಳಿಸಲಾಯಿತು. ಈಗ ಮಾತ್ರ ಮಾಲೀಕ ನೇರವಾಗಿ ಮನೆಗೆ ಬಂದು ಕೇಳಿದ ಪರಿಹಾರ ಸಹಿತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಹೋಗಿದ್ದರು.
ಇವು ರೈಲ್ವೆ ಪ್ರಯಾಣದ ಪ್ರಯಾಣಿಕರ ಅನುಭವಗಳು. ಪ್ರತಿಭಟಿಸಿದರೆ ಗ್ರಾಹಕ ಶಕ್ತಿಗೆ ಸಾರ್ವಜನಿಕರ ಬೆಂಬಲವೂ ದೊರೆಯುತ್ತದೆ. ತಪ್ಪು ಮಾಡಿದವರು ಮೆತ್ತಗೂ ಆಗುತ್ತಾರೆ. ಗ್ರಾಹಕರು ತಮ್ಮ ಜೇಬಿನಿಂದ ಹೆಚ್ಚುವರಿ ಹಣ ತೆತ್ತರೆ ವ್ಯಾಪಾರಸ್ಥನಿಗೇ ಖುಷಿ. ಆದರೆ, ಅದೇ ಗ್ರಾಹಕನಿಗೆ ವ್ಯಾಪಾರಸ್ಥ ತಪ್ಪು ದಂಡವನ್ನು ತುಂಬುವ ಸಂದರ್ಭ ಬಂದಾಗ ಆತನಿಗೆ ಗ್ರಾಹಕರ ಶಕ್ತಿಯ ಅರಿವು ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತದೆ.

ರೈಲಿನಲ್ಲಿ ಆಹಾರಕ್ಕೆ ಹೆಚ್ಚು ಬೆಲೆ ಕೇಳಿದರೆ ದರಪಟ್ಟಿ ಕೇಳಿ!
ರೈಲಿನಲ್ಲಿ ಕುಡಿಯುವ ನೀರಿನ ಬಾಟಲಿಗೆ ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದವರನ್ನು ಪ್ರಶ್ನಿಸಿ ಆ ರೈಲಿನಲ್ಲಿ ಹೆಚ್ಚಿಗೆ ದರ ಕೊಟ್ಟವರೆಲ್ಲರಿಗೆ ಮಾರಾಟಗಾರನಿಂದ ಹೆಚ್ಚುವರಿ ಹಣ ವಾಪಾಸು ಮಾಡಿಸಿದ ಕಥೆ ಒಂದಾದರೆ ಹುಬ್ಬಳ್ಳಿಯ ಮಯೂರ್‌ ಪಾಟೀಲ್‌ರ ಹೋರಾಟದಿಂದ ಇನ್ನೊಂದು ಯಶ ಸಿಕ್ಕಿದೆ. ರೈಲಿನಲ್ಲಿ ನಾವು ಖರೀದಿಸುವ ಟೀ, ಕಾಫಿ ಮೊದಲಾದ ಆಹಾರ ಪದಾರ್ಥದ ದರ ತಿಳಿಯಲು ನಾವು ಆ ಮಾರಾಟಗಾರರಿಂದ ಅಧಿಕೃತ ದರಪಟ್ಟಿಯನ್ನು ಕೇಳಿಪಡೆಯಬಹುದು. ಖಾಯಂ ಆಗಿ ಇಟ್ಟುಕೊಳ್ಳಬೇಕಾದುದು ಅವರ ಧರ್ಮ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ತುತ್ತಾಗಬೇಕಾದುದು ಅವನ ಕರ್ಮ.

ಈ ರೀತಿ ರೈಲ್ವೆ ತೀರ್ಮಾನ ಪ್ರಕಟಿಸುವ ಹಿಂದೆ ಸ್ವಲ್ಪ ಫ್ಲಾಶ್‌ಬ್ಯಾಕ್‌ ಇದೆ. ಒಂದೇ ಗುಣಮಟ್ಟದ ಟೀ. ಜನರಲ್‌ ಬೋಗಿಯಲ್ಲಾದರೆ 5 ರೂ. ಸ್ಪೆಶಲ್‌, ರಿಸವ್‌xì ಬೋಗಿಯಲ್ಲಾದರೆ 10 ರೂ. ಇದು ಮಯೂರ್‌ರಿಗೆ ಅನುಮಾನಾಸ್ಪದ ಬೆಲೆ ನೀತಿಯಂತೆ ಕಾಣಿಸಿತು. ಅವರು ರೈಲ್ವೆಯ 1800-111-321ಗೆ ದೂರು ಸಲ್ಲಿಸಿದರು.

ಅಂತೂ ರೈಲ್ವೆ ಅಧಿಕೃತ ದರಪಟ್ಟಿಯನ್ನು ಮಯೂರ್‌ರಿಗೆ ಒದಗಿಸಿತು. ಅದರ ಪ್ರಕಾರ, ಸಾಮಾನ್ಯ ಟೀಗೆ ರೈಲಿನ ಎಲ್ಲ ಕಂಪಾರ್ಟ್‌ಮೆಂಟ್‌ಗಳಲ್ಲಿ 5 ರೂ.ನ ಸಾಮಾನ್ಯ ದರ. ಸಕ್ಕರೆ ಪ್ಯಾಕ್‌ಅನ್ನು ಡಿಪ್‌ ಮಾಡಿ ಚಪ್ಪರಿಸುವ ಚಹಾಕ್ಕೆ 7 ರೂ. ಇದಕ್ಕಿಂತ ಹೆಚ್ಚು ಪಡೆಯುವುದು ಕಾನೂನುಬಾಹಿರ!

ಇಂತಹ ದೂರುಗಳು ಸಾಮಾನ್ಯವಾಗುತ್ತಿರುವ ಹೊತ್ತಿನಲ್ಲಿ ರೈಲ್ವೆ ಸ್ಪಷ್ಟಪಡಿಸಿದ, ಆಹಾರ ಸರಬರಾಜು ಮಾಡುವ ಫ್ರಾಂಚೈಸಿ ಸಿಬ್ಬಂದಿಯಲ್ಲಿ ಆಹಾರದ ದರಪಟ್ಟಿಯೂ ಇರಬೇಕಾದುದು ಕಡ್ಡಾಯ. ಒಂದೊಮ್ಮೆ ದುಬಾರಿ ಚಾರ್ಜ್‌ ಹಾಕುತ್ತಿದ್ದರೆ ಇದ್ದೇ ಇದೆಯಲ್ಲ ಉಚಿತ ದೂರವಾಣಿ ಸಂಖ್ಯೆ 1800-111-321!

ಇನ್ನೊಂದು ವಿಷಯವನ್ನು ಪರಿಗಣಿಸಲೇಬೇಕು. ಈ ಎಲ್ಲ ಹೋರಾಟಗಳಿಗೆ ಜೆ.ಎಂ.ರಾಜಶೇಖರ್‌, ಮಯೂರ್‌ ಯಾವುದೋ ಸುದೀರ್ಘ‌ ಪತ್ರ ವ್ಯವಹಾರಕ್ಕೋ, ವಕೀಲರ ಕಾನೂನು ಕ್ಲೀಷೆಯಲ್ಲೋ ತೊಡಗಿಸಿಕೊಂಡಿರಲಿಲ್ಲ. ಕೇವಲ ಎಂಆರ್‌ಪಿ ಎಂಬ ಸತ್ಯವನ್ನು ಕೈಯಲ್ಲಿಟ್ಟುಕೊಂಡಿದ್ದರು. ಅದರ ಜೊತೆಗೆ ಅನ್ಯಾಯದ ವಿರುದ್ಧ ಧೈರ್ಯವಾಗಿ ಹೋರಾಡಬೇಕು ಎಂಬ ಅಂಶದತ್ತ ಬೆಳಕು ಚೆಲ್ಲಿದ್ದರು.

ಎಂಆರ್‌ಪಿ ದೂರು ವ್ಯವಸ್ಥೆ ಗೊತ್ತೇ?
ಎಂಆರ್‌ಪಿ ಕುರಿತಾಗಿ ಬಹುತೇಕ ಎಲ್ಲರಿಗೂ ಗೊತ್ತು. ನಾವು ಖರೀದಿಸುವ ವಸ್ತು, ಸೇವೆಗಳಿಗೆ ತೆರಬೇಕಾಗುವ ಗರಿಷ್ಠ ದರವೇ ಎಂಆರ್‌ಪಿ, ಮ್ಯಾಕ್ಸಿಮಮ್‌ ರಿಟೈಲ್‌ ಪ್ರ„ಸ್‌. ನಾನು ಹಾಲನ್ನು ಫ್ರಿಜ್‌ನಲ್ಲಿಟ್ಟಿದ್ದೇನೆ ಎಂದು ಬೇಕರಿಯವನು ವಿದ್ಯುತ್‌ ಶುಲ್ಕ ಎಂದು ಪ್ಯಾಕ್‌ಗೆ ಎರಡು ರೂ. ಹೆಚ್ಚು ವಸೂಲಿ ಮಾಡುವುದು ಅಪರಾಧ. ಇದು ತಂಪುಪಾನೀಯಕ್ಕೂ ಅನ್ವಯ. ಇಂತವು ನೂರಾರು. 

ಇವೆಲ್ಲವುಗಳ ವಿರುದ್ಧ ನಾವು ದೂರಬಹುದು. ಇದಕ್ಕೆಂದೇ ರಾಜ್ಯ ಸರ್ಕಾರ ಇ-ಮಾಪನ್‌ ಎಂಬ ವೆಬ್‌ಸೈಟ್‌ನೆ°à ಆರಂಭಿಸಿದೆ. ಲಿಂಕ್‌://www.emapan.karnataka.gov.in/ ಇದರಲ್ಲಿ ದೂರು ದಾಖಲಿಸಲು ಮತ್ತು ದೂರಿನ ಹಂತಗಳನ್ನು ಅರಿಯುವ ವ್ಯವಸ್ಥೆ ಇದೆ. ದೂರು ಕೊಟ್ಟು ಅದಕ್ಕೆ ಪೂರಕ ದಾಖಲೆಗಳನ್ನು ಕೂಡ ಅಪ್‌ಲೋಡ್‌ ಮಾಡಬಹುದು. ಈ ವೆಬ್‌ನಲ್ಲಿ ಕಾನೂನುಗಳ ಸಂಪೂರ್ಣ ಮಾತಿಯೂ ಇದೆ. ಡೌನ್‌ಲೋಡ್‌ ಮಾಡಿಕೊಂಡು ಓದಲು ಅವಕಾಶವಿದೆ. ಇದೇ ರೀತಿ ದೂರವಾಣಿಯ ಮೂಲಕ ಕಾನೂನು ಮಾಪನ ಶಾಸ್ತ್ರ ಇಲಾಖೆಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-22342380, 22373500 ಹಾಗೂ 22383500. ಇ ಮೇಲ್‌ ಸಹಾಯದಿಂದ ಕೂಡ ದೂರು ದಾಖಲಿಸಲು ಸಾಧ್ಯ. ಆ ವಿಳಾಸ kar.lmdhelpdesk@gmail.com

ಸರ್ಕಾರದ ಮಾಹಿತಿ ಪ್ರಕಾರ ಈ ವಿಚಾರವಾಗಿ- 2014-15ರಲ್ಲಿ 1.37 ಲಕ್ಷ ದಾಳಿ ನಡೆಸಲಾಗಿದೆ. 31,400 ಪ್ರಕರಣ ದಾಖಲಾಗಿದ್ದು 6.78 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ಗೌರವಕ್ಕೆ ಚ್ಯುತಿ ಬಂದರೆ ಅಷ್ಟೇ?!
ಕಾನೂನಿನ ಅಂಶವುಳ್ಳ ಎಂಆರ್‌ಪಿ ಅಂತಲ್ಲ, ನಮ್ಮ ಗೌರವಕ್ಕೆ ಧಕ್ಕೆ ಬಂದಾಗ ಹೋರಾಟ ಮಾಡಿದರೂ ನ್ಯಾಯ ಸಿಗುತ್ತದೆ. ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್‌ ಸಿಗದಿದ್ದರಿಂದ ಸಂಕಷ್ಟಪಟ್ಟ ವೃದ್ಧರು, ದೂರು ನೀಡಿ ಲಕ್ಷಗಟ್ಟಲೆ ಪರಿಹಾರ ಪಡೆದಿದ್ದುಂಟು. ಈ ಪ್ರಕರಣ ಇನ್ನೂ ವಿಚಿತ್ರ. ಹಿರಿಯ ನಾಗರಿಕ, ಸಾಮಾಜಿಕ ಕಾರ್ಯಕರ್ತ ಆರ್‌.ಜಯರಾಂ ಮೈಸೂರಿನ ನಿವಾಸಿ. 2013ರ ಜನವರಿ 6ರಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿಗೆ ತೆರಳಲು ರೈಲು ನಿಲ್ದಾಣದ ಹಿರಿಯ ನಾಗರಿಕರ ಕೌಂಟರಿನಲ್ಲಿ ಟಿಕೆಟ್‌ಗಾಗಿ ಅರವತ್ತು ರೂಪಾಯಿ ನೀಡುತ್ತಾರೆ. ಟಿಕೆಟ್‌ ದರ ರೂ. 52 ಇದ್ದು, ಎರಡು ರೂಪಾಯಿ. ಚಿಲ್ಲರೆ ನೀಡಿದರೆ ಮಾತ್ರ ಟಿಕೆಟ್‌ ನೀಡುವುದಾಗಿ ಅಲ್ಲಿನ ಗುಮಾಸ್ತ ಅವರಿಗೆ ಟಿಕೆಟ್‌ ನಿರಾಕರಿಸುತ್ತಾನೆ. ಆಗ ಇಬ್ಬರಿಗೂ ಮಾತಿನ ಚಕಮಕಿ ನಡೆದು ಗುಮಾಸ್ತ ಅನುಚಿತ ಮತ್ತು ಅಗೌರವ ಮಾತುಗಳನ್ನು ಆಡುತ್ತಾನೆ. ಬೇಸರಗೊಂಡ ಜಯರಾಂ ಸಾರ್ವಜನಿಕ ಕೌಂಟರಿನಲ್ಲಿ ಟಿಕೆಟ್‌ ಪಡೆದು ಪ್ರಯಾಣಿಸುತ್ತಾರೆ.

ಇಲ್ಲಿಗೆ ಬಿಡದ ಅವರು ಜನವರಿ ಒಂಭತ್ತರಂದು ಸ್ಟೇಷನ್‌ ಮಾಸ್ಟರರಿಗೆ ಈ ಬಗ್ಗೆ ದೂರು ಸಲ್ಲಿಸಿ ತಮಗಾದ ಮಾನಸಿಕ ನೋವು ಮತ್ತು ತೊಂದರೆಯನ್ನು ವಿವರಿಸುತ್ತಾರೆ. ಉತ್ತರ ಬಾರದಿದ್ದರಿಂದ ಮತ್ತೂಂದು ಪತ್ರ ಬರೆದು ಉತ್ತರಿಸದಿದ್ದರೆ ತಾವು ಪರಿಹಾರಕ್ಕಾಗಿ ಗ್ರಾಹಕ ವೇದಿಕೆಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡುತ್ತಾರೆ. ಅದಕ್ಕೆ ಏಪ್ರಿಲ್‌ ನಾಲ್ಕರಂದು ಸಮಜಾಷಿ ನೀಡಿದ ಅಧಿಕಾರಿಗಳು ತಮ್ಮ ತಪ್ಪಿಗೆ ಕ್ಷಮೆ ಯಾಚಿಸುತ್ತಾರೆ ಮತ್ತು ಪ್ರಕರಣ ಮುಕ್ತಾಯಗೊಳಿಸಲು ಕೋರುತ್ತಾರೆ.

ಸಮಾಧಾನಗೊಳ್ಳದ ಜಯರಾಂ ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ  ಮೇ ಇಪ್ಪತ್ತೆ„ದರಂದು ದೂರು ದಾಖಲಿಸಿ ಖುದ್ದಾಗಿ ತಾವೇ ಹಾಜರಾಗಿ ವಿವರಣೆ ನೀಡುತ್ತಾರೆ. ಇಲಾಖೆಯ ಅಧಿಕಾರಿಗಳು ಟಿಕೆಟ್‌ ಕೊಡುವ ಸಮಯದಲ್ಲಿ ಸದರಿ ಗ್ರಾಹಕರ ಜೊತೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಗ್ರಾಹಕರು ಚಿಲ್ಲರೆ ನೀಡಿ ಸಹಕರಿಸಬೇಕಾಗಿತ್ತು. ಅದರೂ ಸ್ವಲ್ಪ ಹೊತ್ತು ಕಾಯಲು ತಿಳಿಸಿದಾಗ ಅವರು ಕೋಪಗೊಂಡು ಹೋಗಿದ್ದಾರೆ. ಈ ವಿಚಾರದಲ್ಲಿ ತಾವು ಯಾವುದೇ ಸೇವಾ ನ್ಯೂನ್ಯತೆ ಎಸಗಿಲ್ಲ ಹಾಗೂ ಪರಿಹಾರ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರೈಲ್ವೆ ಇಲಾಖೆ ವಾದಿಸುತ್ತದೆ.

ಹಿರಿಯ ನಾಗರಿಕರ ಕೌಂಟರಿನಲ್ಲಿರುವ ಗುಮಾಸ್ತ ಟಿಕೆಟ್‌ ನೀಡುವಾಗ ತಾಳ್ಮೆಯಿಂದ ವರ್ತಿಸದೆ, ಜಯರಾಂರೊಂದಿಗೆ ಮಾತಿನ ಚಕಮಕಿ ನಡೆದಿದೆಂಬುದರಲ್ಲಿ ಅನುಮಾನವಿಲ್ಲ. ಅಲ್ಲಿದ್ದ ನೌಕರನಿಗೂ ದೂರುದಾರರಿಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲವೆಂಬುದನ್ನು ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಅದರಿಂದಾಗಿಯೇ ಅವರು ಮಾನಸಿಕವಾಗಿ ನೊಂದು ಪರಿಹಾರಕ್ಕಾಗಿ ವೇದಿಕೆ ಮೊರೆಹೊಕ್ಕಿದ್ದಾರೆ.

ಮೇಲಾಧಿಕಾರಿಗಳು ಎಚ್ಚರಿಕೆ ನೀಡಿ ಗುಮಾಸ್ತನ ವರ್ತನೆಯನ್ನು ಸರಿಪಡಿಸುವುದರ ಬದಲಿಗೆ ಆತನ ನಡೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇಂತಹ ಪ್ರಕರಣಗಳನ್ನು ತಪ್ಪಿಸದಿದ್ದರೆ ಅನಾಹುತಗಳು ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಪಿರ್ಯಾದುದಾರರಿಗೆ ಟಿಕೆಟಅನ್ನು ನೀಡದೇ ಕಾಯುವಂತೆ ತಿಳಿಸುವುದು ಮತ್ತು ಅಗೌರವವಾಗಿ ನಡೆದುಕೊಳ್ಳುವುದು ಸೇವಾ ಕೊರತೆಯಾಗಿರುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿತು. ಪರಿಹಾರದ ಮೊತ್ತವನ್ನು ತಪ್ಪೆಸಗಿದ ನೌಕರನಿಂದಲೇ ವಸೂಲಿ ಮಾಡಲು ಸೂಚಿಸುತ್ತದೆ. 

ತೀರ್ಪು: ಎದುರುದಾರರು ಪಿರ್ಯಾದುದಾರರಿಗೆ ಉಂಟು ಮಾಡಿರುವ ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನ್ಯತೆಗೆ 5000 ರೂ. ಮತ್ತು ವ್ಯಾಜ್ಯದ ಖರ್ಚು 2000 ರೂ. ಸೇರಿದಂತೆ ಒಟ್ಟು 7000 ರೂ.ಗಳನ್ನು ಈ ಆದೇಶದ ದಿನದಿಂದ ಎರಡು ತಿಂಗಳೊಳಗಾಗಿ ನೀಡತಕ್ಕದ್ದು. ತಪ್ಪಿದಲ್ಲಿ ಶೇ. 9ರಂತೆ ಬಡ್ಡಿ ಸೇರಿಸಿ ನೀಡಬೇಕು. ಹಣ ಪಾವತಿಸಿದ ನಂತರ ಎದುರುದಾರರು 2013ರ ಜನವರಿ ಆರರಂದು ಒಂದನೇ ಕೌಂಟರಿನಲ್ಲಿ ಕರ್ತವ್ಯದಲ್ಲಿದ್ದ ನೌಕರನಿಂದ ವಸೂಲಿ ಮಾಡಿಕೊಳ್ಳಲು ಅರ್ಹರಿರುತ್ತಾರೆ ಎಂದು ತೀರ್ಪುಲ್ಲಿ ಆದೇಶಿಸಿತು.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next