Advertisement
ಪಬ್‌ಗಳ ಮಬ್ಬು ಬೆಳಕಿನ ಪಾರ್ಟಿಗಳಲ್ಲಿ, ಸೂಪರ್‌ಸ್ಟಾರ್‌ಗಳ ಕಾರ್ಯಕ್ರಮಗಳಲ್ಲಿ ಯಾರಾದರೂ ಕಿರಿಕ್ ಮಾಡಿದರೆ, ಅಂಥವರನ್ನು ಹೊತ್ತೂಯ್ದು ಹೊರಗೆ ಹಾಕುವುದು ಈ ಬೌನ್ಸರ್‌ಗಳ ಅಸಲಿ ಕೆಲಸ. ನೀವು ಇದನ್ನು ದೌರ್ಜನ್ಯ ಎಂದರೆ, ಅವರು ಅದನ್ನ ಕರ್ತವ್ಯ ಅಂತಾರೆ! ಹಣ ಕೊಡುವ ಧಣಿಗೆ ಅಪಾಯ ಎದುರಾದರೆ, ಎದೆಗೆ ಎದೆ ಕೊಟ್ಟು ಆತನ ರಕ್ಷಿಸುವ ಬೌನ್ಸರ್‌ಗಳ ಬದುಕು-ಬವಣೆ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ.
Related Articles
Advertisement
ತುಂಬ ಟೆನ್ಷನ್ ಇರುತ್ತೆ: “ಬೌನ್ಸರ್‌ಗಳದ್ದು ಒತ್ತಡದ ಕೆಲಸ. ಬಾರ್, ಪಬ್, ರೆಸ್ಟೋರೆಂಟ್ ಹಾಗೂ ಸೆಲೆಬ್ರಿಟಿಗಳ ಜತೆ ಇದ್ದಾಗ ಸದಾ ಎಚ್ಚರದಿಂದಿರಬೇಕು. ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಡಬೇಕು. ಅಷ್ಟೇ ಅಲ್ಲ ಬಾರ್, ಪಬ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ರಕ್ಷಣೆ ಕೂಡ ಇವರ ಹೊಣೆ. ಇನ್ನು ಸಿನಿಮಾ ನಟರ ಹುಟ್ಟುಹಬ್ಬ, ಇವೆಂಟ್‌ಗಳಿಗೆ ಹೋದಾಗ ಒತ್ತಡ ದುಪ್ಪಟ್ಟಾಗುತ್ತದೆ.
ಕೆಲವೊಮ್ಮೆ ಅಭಿಮಾನಿಗಳು ಸ್ಟಾರ್‌ಗಳನ್ನು ತಬ್ಬಿಕೊಳ್ಳುವುದು, ಮುತ್ತಿಡುವುದು ಮಾಡುತ್ತಾರೆ. ಆಗೆಲ್ಲಾ ನಾವುಗಳು ಅನಿವಾರ್ಯವಾಗಿ ಅವರನ್ನು ತಡೆಯುತ್ತೇವೆ. ಇನ್ನು ಮಹಿಳಾ ಸೆಲೆಬ್ರಿಟಿಗಳ ಬೌನ್ಸರ್‌ಗಳಾದರೆ ಅದು ಮತ್ತೂಂದು ದೊಡ್ಡ ಸವಾಲು. ಯಾರೊಬ್ಬರೂ ಹತ್ತಿರ ಬರದಂತೆ ಎಚ್ಚರ ವಹಿಸಬೇಕು. ಇಷ್ಟೆಲ್ಲ ರಿಸ್ಕ್ಗಳ ನಡುವೆ ಕೆಲಸ ಮಾಡಿದರೂ ಸೆಲೆಬ್ರಿಟಿಗಳ ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ನಿಂದನೆಗೆ ಗುರಿಯಾಗುತ್ತೇವೆ,’ ಎನ್ನುತ್ತಾರೆ ಬೌನ್ಸರ್ ರಮೇಶ್.
ಜೀವನ ನಿರ್ವಹಣೆ ಕಷ್ಟ: ಜೀವನ ನಿರ್ವಹಣೆಗಾಗೇ ಕೆಲವರು ಬೌನ್ಸರ್‌ಗಳಾಗುತ್ತಾರೆ. ಆದರೆ, ನಾವಂದುಕೊಂಡಷ್ಟು ಸುಲಭದ ಜೀವನ ಇವರದಲ್ಲ. ನಾಲ್ಕೈದು ಗಂಟೆ ಸೆಲೆಬ್ರಿಟಿಗಳಿಗೆ ರಕ್ಷಣೆ ಒದಗಿಸಿದರೆ ಸಿಗುವುದು ಒಂದೂವರೆಯಿಂದ ಎರಡು ಸಾವಿರ ರೂ. ಆದರೆ ನಿತ್ಯ ಇಂಥ ಕೆಸಲ ಸಿಗುವುದಿಲ್ಲ. ಕೆಲವರು ಬೌನ್ಸರ್ ಕೆಲಸದ ಜತೆಗೆ ಜಿಮ್ ಇಟ್ಟುಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವುದು ಬಿಟ್ಟರೆ ಹಲವರಿಗೆ ಬೇರೆ ಆದಾಯದ ಮುಲ ಇರುವುದಿಲ್ಲ.
ಬರುವ ಚೂರು ಪಾರು ಹಣದಲ್ಲೇ ಇದರಲ್ಲೇ ತಮ್ಮ ದೇಹದ ನಿರ್ವಹಣೆ ಹಾಗೂ ಕುಟುಂಬ ನಿರ್ವಹಣೆ ಮಾಡಬೇಕು. ಒಮ್ಮೆ ಭದ್ರತೆಗೆ ಹೋಗಲು ಸಾಧ್ಯವಾಗದಿದ್ದರೆ ಅಥವಾ ನಿರಾಕರಿಸಿದರೆ, ಏಜೆನ್ಸಿ ಅಥವಾ ಇವೆಂಟ್ ಮ್ಯಾನೆಜ್‌ಮೆಂಟ್ ಸದಸ್ಯರು ಮತ್ತೂಮ್ಮೆ ಕರೆಯಲು ಹಿಂದೇಟು ಹಾಕುತ್ತಾರೆ
ದಿನಕ್ಕೆ 500, ತಿಂಗಳಿಗೆ 7 ಸಾವಿರ ರೂ.: ಬೌನ್ಸರ್ಸ್‌ಗಳಿಗೆ ಬಾಡಿ ಲಾಂಗ್ವೇಜ್ ಅತಿ ಮುಖ್ಯ. ಎಲ್ಲೇ ರಕ್ಷಣೆಗೆ ಹೋದರೂ ಎದುರಿರುವವರು ನಮ್ಮ ದೇಹ ನೋಡಿಯೇ ಹೆದರಬೇಕು. ಇಲ್ಲವಾದರೆ ಪುಂಡಾಟ ಮಾಡುತ್ತಾರೆ. ಧಡೂತಿ ದೇಹ ಹೊಂದಲು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಗಂಟೆಗಟ್ಟಲೇ ಜಿಮ್‌ನಲ್ಲಿ ವಕೌಟ್ ಮಾಡಬೇಕು.
20-25 ಮೊಟ್ಟೆಗಳು, ಒಂದು ಕೆ.ಜಿ ಚಿಕನ್, ಬೆಣ್ಣೆ, ಬ್ರೆಡ್, ಹಣ್ಣುಗಳು, ಡ್ರೈಫೂಟ್ಸ್ ಸೇವಿಸಬೇಕು. ಒಟ್ಟಾರೆ ದಿನವೊಂದಕ್ಕೆ 500ರಿಂದ 700 ರೂ. ವ್ಯಯಿಸಬೇಕು. ಇದರೊಂದಿಗೆ ವಕೌಟ್‌ಗೆ ಮೊದಲು, ನಂತರ ಪ್ರೋಟಿನ್ ಪೌಡರ್ ಸೇವಿಸಬೇಕು. ಪ್ರೋಟಿನ್‌ಗಾಗೇ ತಿಂಗಳಿಗೆ ಕನಿಷ್ಠ 7 ಸಾವಿರ ಖರ್ಚು ಮಾಡಬೇಕು ಎನ್ನುತ್ತಾರೆ ಬೌನ್ಸರ್ ಶಶಿಕಾಂತ್.
ಯಾರ್ಯಾರು ಬೌನ್ಸರ್ಸ್ ಇಟ್ಕೊತ್ತಾರೆ: ಸೆಲೆಬ್ರಿಟಿಗಳು, ಸಚಿವರು, ಶಾಸಕರು, ಗಣ್ಯರು, ಸಿನಿಮಾ ನಟರು ಹಾಗೂ ಚಿನ್ನಾಭರಣ ವ್ಯಾಪಾರಿಗಳು, ಮದುವೆ, ಶುಭ ಕಾರ್ಯಕ್ರಮಗಳಲ್ಲಿ ಸ್ಟೇಜ್ ಕಂಟ್ರೋಲ್‌ಗೆ ಬೌನ್ಸರ್‌ಗಳನ್ನು ನೇಮಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ವ್ಯವಹಾರ ವ್ಯಾಪಕವಾಗಿ ಬೆಳೆದಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಹೀಗಾಗಿ ರಿಯಲ್ ಎಸ್ಟೇಟ್ ಕುಳಗಳಿಗೂ ಬೌನ್ಸರ್‌ಗಳು ಬೇಕು.
ಬೌನ್ಸರ್ ನೇಮಕ ಹೇಗೆ?: ಬೌನ್ಸರ್‌ಗಳನ್ನು ನೇಮಕ ಮಾಡಲೆಂದೇ “ಸೆಕ್ಯೂರಿಟಿ ಆ್ಯಂಡ್ ಮ್ಯಾನ್ ಪವರ್ ಸ್ಪೆಷಲ್ ಎಸ್ಕಾರ್ಟ್’ ಏಜೆನ್ಸಿಗಳಿವೆ. ಪೊಲೀಸ್ ಹಾಗೂ ಸಂಬಂಧಿಸಿದ ಇತರ ಇಲಾಖೆಯಿಂದ ಪರವಾನಿಗೆ ಪಡೆದು ಏಜೆನ್ಸಿ ತೆರೆಯಬೇಕು. ಇಂಥ ಏಜೆನ್ಸಿಗಳು ತಮ್ಮ ಗ್ರಾಹಕರಿಗೆ ಬೌನ್ಸರ್‌ಗಳನ್ನು ಕಳುಹಿಸಿಕೊಡುತ್ತಾರೆ. ಕೆಲ ಬೌನ್ಸರ್‌ಗಳು ಇವೆಂಟ್ ಮ್ಯಾನೆಜ್‌ಮೆಂಟ್ (ಹೋಟೆಲ್, ಪಬ್, ಬಾರ್ ಇತರೆ) ಜತೆ ನೇರ ಸಂಪರ್ಕ ಹೊಂದಿ ನೇಮಕಗೊಳ್ಳುತ್ತಾರೆ. ಏಜೆನ್ಸಿ ಮೂಲಕ ತೆರಳಿದರೆ 700ರಿಂದ 800 ರೂ. ಸಿಗುತ್ತೆ. ನೇರವಾಗಿ ಹೋದರೆ 1500ರಿಂದ 2000 ಸಾವಿರ ನಿಗಳಿಸಬಹುದು.
ಏಜೆನ್ಸಿಗಳಿಂದ ತರಬೇತಿ: ಏಜೆನ್ಸಿ ಮೂಲಕ ನೇಮಕಗೊಳ್ಳುವ ಬೌನ್ಸರ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರತಿಷ್ಠಿತ ಏಜೆನ್ಸಿಗಳು ತಮ್ಮ ಬೌನ್ಸರ್ಸ್‌ಗಳಿಗೆ ಕರಾಟೆ, ಬಾಡಿ ಬಿಲ್ಡಿಂಗ್ ತರಬೇತಿ ನೀಡುತ್ತಾರೆ. ಜತೆಗೆ ಸಭೆ, ಸಮಾರಂಭಗಳಲ್ಲಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು, ಬಾಡಿ ಲಾಂಗ್ವೇಜ್ ಹೇಗಿರಬೇಕು ಎಂಬೆಲ್ಲ ತರಬೇತಿ ನೀಡಲಾಗುತ್ತೆ. ಒಂದೇ ಕಾರ್ಯಕ್ರಮಕ್ಕೆ ಹತ್ತಾರು ಬೌನ್ಸರ್‌ಗಳನ್ನು ಕಳುಹಿಸಿದಾಗ ಏಜೆನ್ಸಿಗಳು ಅವರಿಗೆ ವಾಕಿಟಾಕಿ ಕೂಡ ಒದಗಿಸುತ್ತವೆ. ಮತ್ತೂಂದೆಡೆ ನೇರವಾಗಿ ಬೌನ್ಸರ್ಸ್ ಕೆಲಸ ಮಾಡುವವರು ತಮ್ಮ ಕೆಲಸವನ್ನು ಕಿರಿಯರಿಗೆ ಹೇಳಿಕೊಡುತ್ತಾರೆ.
ರಕ್ಷಿಸುವ ಬೌನ್ಸರ್‌ಗಳಿಗೇ ಇಲ್ಲ ರಕ್ಷಣೆ: ಜೀವದ ಹಂಗು ತೊರೆದು, ಸಾರ್ವಜನಿಕರು, ಗ್ರಾಹಕರು, ಅಭಿಮಾನಿಗಳಿಂದ ಬೈಸಿಕೊಂಡು ಕರ್ತವ್ಯ ನಿರ್ವಹಿಸುವ ಬೌನ್ಸರ್‌ಗಳಿಗೇ ಸೂಕ್ತ ರಕ್ಷಣೆಯಿಲ್ಲ. ಕೆಲವೊಮ್ಮೆ ಪಬ್, ಬಾರ್ ಅಥವಾ ಜಮೀನು ವಿವಾದ ಸಂದರ್ಭದಲ್ಲಿ ಕಠಿಣವಾಗಿ ನಡೆದುಕೊಂಡಾಗ ಕೋಪಗೊಂಡ ವ್ಯಕ್ತಿಗಳು ಸಾಮೂಹಿಕವಾಗಿ ಹಲ್ಲೆ ನಡೆಸುತ್ತಾರೆ. ಹೆಚ್ಚುಕಡಿಮೆಯಾದರೆ ಪೊಲೀಸರು ಬಂಧಿಸುತ್ತಾರೆ.
ಒಳ್ಳೆಯ ಮಾಲೀಕನಾದರೆ ಬೌನ್ಸರ್‌ಗಳ ರಕ್ಷಣೆಗೆ ಬರುತ್ತಾರೆ. ಕೆಲವರು ಜೈಲಿಗೆ ಹೋದರೆ ಹೋಗಲಿ ಎಂದು ಸುಮ್ಮನಾಗುತ್ತಾರೆ. ಇದರಿಂದ ಬೌನ್ಸರ್ ಜೀವನ ಹಾಳಾಗುತ್ತದೆ. ತಿಂಗಳುಗಟ್ಟಲೆ ಜೈಲಲ್ಲಿದ್ದರೆ ದೇಹದ ಶಕ್ತಿ ಕುಂದುತ್ತದೆ. ವಕೌಟ್, ಉತ್ತಮ ಊಟ ಇಲ್ಲದೇ ಅನಾರೋಗ್ಯಕ್ಕೆ ತುತ್ತಾಗಬಹುದು. ಇನ್ನು ಜೈಲಿನಿಂದ ಹೊರಬಂದರೆ ಮೊದಲಿನ ದೇಹ ಹೊಂದಲು ಹಲವು ತಿಂಗಳು ಕಠಿಣ ಕಸರತ್ತು ಮಾಡಬೇಕು.
ರಿಯಲ್ ಎಸ್ಟೇಟ್ ದಂಧೆಗೆ ಬಳಕೆ: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕುಳಗಳಿಂದ ಬೌನ್ಸರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ರಿಯಾಲ್ಟಿ ಜನ ಹಣ ಬಲದಿಂದ ಬೌನ್ಸರ್ಸ್‌ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ಜಮೀನು ಅಥವಾ ನಿವೇಶನ ಖರೀದಿಗೆ ಅಥವಾ ಭೂ ವಾಜ್ಯ ಸಂಬಂಧಿ ವ್ಯವಹಾರಗಳಿಗೆ ಕರೆದೊಯ್ದು ಅಮಾಯಕರ ಮೇಲೆ ಹಲ್ಲೆ ನಡೆಸುತ್ತಾರೆ. ಆದರೆ, ಕೊನೆಗೆ ಬೌನ್ಸರ್ಸ್‌ಗಳ ರಕ್ಷಣೆಗೆ ಮಾತ್ರ ಬರುವುದಿಲ್ಲ.
ಇದಕ್ಕೆ ಕೆಲವೊಂದು ನಿದರ್ಶನಗಳು: 2016 ಜ.27, ಸಂಜಯ್‌ನಗರದ ಜಮೀನು ವಿವಾದ ಮೂವರು ಬಿಲ್ಡರ್‌ಗಳು ಬೌನ್ಸರ್ ಕರೆದೊಯ್ದು ಅಮಾಯಕರ ಮೇಲೆ ಹಲ್ಲೆ ಐದು ತಿಂಗಳ ಹಿಂದೆ ಆನೇಕಲ್‌ನ ಅಲೆಯನ್ಸ್ ವಿವಿ ವಿವಾದ ಸಂದರ್ಭದಲ್ಲಿ ಹತ್ತಾರು ಮಂದಿ ಬೌನ್ಸರ್ಸ್ ಕೆಲಸಗಾರರನ್ನು ಹೊರಹಾಕಿದ್ದರು
ಇತ್ತೀಚೆಗೆ ಬೌನ್ಸರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಅನ್ಯಾಯವಾದಾಗ ಎದುರಿಸಲು ಸಂಘಟನೆ ಇಲ್ಲ. ಹೀಗಾಗಿ ಸರ್ಕಾರ ಬೌನ್ಸರ್‌ಗಳ ರಕ್ಷಣೆ ದೃಷ್ಟಿಯಿಂದ ಸಮಿತಿಯೊಂದನ್ನು ರಚಿಸಬೇಕು. ಈ ಮೂಲಕ ಬೌನ್ಸರ್‌ಗಳ ನೇರವಿಗೆ ಧಾವಿಸಬೇಕು. ಸರ್ಕಾರದಿಂದ ಸೌಲಭ್ಯ ನೀಡಿದರೆ ಆರ್ಥಿಕ ಸಂಕಷ್ಟದಲ್ಲಿರುವ ಬೌನ್ಸರ್ಸ್‌ಗಳ ಪರಿಸ್ಥಿತಿ ಸುಧಾರಿಸುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ನಮ್ಮ ರಕ್ಷಣೆಗೂ ನೆರವಾಗಬೇಕು.-ಶಶಿಕಾಂತ್, ಬೌನ್ಸರ್ ನಾನು ಏಜೆನ್ಸಿ ಮೂಲಕ ಹಾಗೂ ನೇರವಾಗಿ ಬೌನ್ಸರ್ ಆಗಿ ಹೋಗುತ್ತೇನೆ. ಜತೆಗೆ ರಾತ್ರಿ ವೇಳೆ ಪಬ್‌ವೊಂದರಲ್ಲಿ ಕೆಲಸ ಮಾಡುತ್ತೇನೆ. ಬೌನ್ಸರ್ಸ್ ಕೆಲಸದಲ್ಲಿ ಬಹಳ ಒತ್ತಡ ಇರುತ್ತೆ. ಇಲ್ಲಿ ಬಾಡಿ ಲಾಂಗ್ವೇಜ್ ಅತಿ ಮುಖ್ಯ. ಗಲಾಟೆ ಮಾಡುವವರಿಗೆ ನಮ್ಮನ್ನು ನೋಡಿದಾಗಲೇ ಭಯ ಹುಟ್ಟಬೇಕು. ಆ ರೀತಿ ನಮ್ಮ ದೇಹ, ದೇಹದ ಭಾಷೆ ಇರಬೇಕು. ಹೀಗಾಗಿ ದೇಹ ನಿರ್ವಹಣೆಗೆ ತಿಂಗಳಿಗೆ 8ರಿಂದ 10 ಸಾವಿರ ವ್ಯಯಿಸಬೇಕು.
-ರಮೇಶ್, ಬೌನ್ಸರ್ * ಮೋಹನ್ ಭದ್ರಾವತಿ