Advertisement

ನಾವು ಗೆದ್ದರೆ ಜಾತಿಗಣತಿ, ನ್ಯಾಯ್‌ ಜಾರಿ: ರಾಹುಲ್‌

12:19 AM Dec 29, 2023 | Team Udayavani |

ಹೊಸದಿಲ್ಲಿ: ದೇಶದ ಹಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರು, ದಲಿತರು, ಬುಡಕಟ್ಟು ಜನಾಂಗಕ್ಕೆ ಪ್ರಾತಿನಿಧ್ಯವೇ ಸಿಗುತ್ತಿಲ್ಲ. ಐಎನ್‌ಡಿಐಎ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ದೇಶದಲ್ಲಿ ಜಾತಿಗಣತಿಯನ್ನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ. ಬಡವರಿಗೆ ಆರ್ಥಿಕವಾಗಿ ನೆರವಾಗುವ “ನ್ಯಾಯ್‌’ ಯೋಜನೆಯನ್ನು ಜಾರಿಗೊಳಿಸುತ್ತೇವೆಂದು ಭರವಸೆ ನೀಡುವ ಮೂಲಕ ಆರೆಸ್ಸೆಸ್‌ನ ಭದ್ರಕೋಟೆ ನಾಗಪುರದಿಂದಲೇ ಲೋಕಸಭಾ ಚುನಾವಣ ಸಮರಕ್ಕೆ ಅವರು ಕಹಳೆಯೂದಿದ್ದಾರೆ.
ಕಾಂಗ್ರೆಸ್‌ನ 139ನೇ ಸಂಸ್ಥಾಪನ ದಿನದ ಹಿನ್ನೆಲೆ ಯಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿ ಸಲಾಗಿದ್ದ “ಹೈ ತಯ್ನಾರ್‌ ಹಮ್‌’ ರ್ಯಾಲಿ ಉದ್ದೇಶಿಸಿ ರಾಹುಲ್‌ ಮಾತನಾಡಿದರು.

Advertisement

ಈ ವೇಳೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದ ಜನಸಂಖ್ಯೆ ಎಷ್ಟಿದೆಯೋ ಆ ಮಟ್ಟದ ಪ್ರಾತಿನಿಧ್ಯವನ್ನು ಹಲವಾರು ಕ್ಷೇತ್ರಗಳಲ್ಲಿ ಅವರಿಗೆ ನೀಡಲಾಗಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಜಾತಿಗಣತಿಯ ಅಗತ್ಯವಿದೆ. ವಿಪಕ್ಷಗಳ ಒಕ್ಕೂಟ ಅಧಿಕಾರವೇರಿದರೆ ಜಾತಿಗಣತಿಯನ್ನು ಖಂಡಿತ ಜಾರಿಗೊಳಿಸುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.

ಇದೇ ವೇಳೆ ಪ್ರಧಾನಿ ವಿರುದ್ಧ ಕಿಡಿಕಾರಿರುವ ರಾಹುಲ್‌, ಹಿಂದೆ ಪ್ರಧಾನಿ ಮೋದಿ ತಮ್ಮನ್ನು ತಾವು ಒಬಿಸಿ ವರ್ಗದವರು ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ನಾನು ಯಾವಾಗ ಜಾತಿ ಗಣತಿಯ ವಿಚಾರದ ಬೇಡಿಕೆ ಇರಿಸಿದೆನೋ ಅಂದಿನಿಂದ ಬಡವರೆಲ್ಲರೂ ಒಂದೇ ಜಾತಿ ಎನ್ನುತ್ತಿದ್ದಾರೆ. ಒಂದೇ ಒಂದು ಜಾತಿ ಇರುವುದಾದರೆ ಈ ಹಿಂದೆ ಏಕೆ ನೀವು ಒಬಿಸಿ ಎಂದು ಹೇಳಿಕೊಂಡಿರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೂ ಬಿಜೆಪಿ ತನ್ನ ಅಂಕೆಯಲ್ಲಿಟ್ಟುಕೊಂಡಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ.

ಮೋದಿ ಮಣಿಪುರಕ್ಕೆ ಹೋಗಿಲ್ಲ: ಖರ್ಗೆ
ಮೋದಿ ಸರಕಾರದ ಅವಧಿಯಲ್ಲಿ ಬಡವರು ಮತ್ತಷ್ಟು ಬಡವರಾದರು, ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು. ಮಣಿಪುರದಲ್ಲಿ ಅಮಾನುಷ ಕೃತ್ಯ ನಡೆದರೂ ಮೋದಿ ಅಲ್ಲಿಗೆ ಭೇಟಿ ನೀಡಲಿಲ್ಲ. ಆದರೆ ಸೂರತ್‌ನಲ್ಲಿ ವಜ್ರ ವ್ಯಾಪಾರದ ಕಟ್ಟಡ ಉದ್ಘಾಟನೆಗೆ ಹೋದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ. ಇಂಡಿಯಾ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಡವರು ಮತ್ತು ಮಹಿಳೆಯರ ಸಶಕ್ತೀಕರಣಕ್ಕಾಗಿ ನ್ಯಾಯ್‌ ಯೋಜನೆಯನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next