ಬೆಂಗಳೂರು: : ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತಿಕ್ಕಾಟ ಪ್ರಾರಂಭವಾಗಿರುವ ಬೆನ್ನಲ್ಲೇ, “”ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಜೆಡಿಎಸ್ ಮಾತಿಗೆ ಹೆಚ್ಚಿನ ಬೆಲೆ ಸಿಗಬೇಕು. ಇಲ್ಲದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ” ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಖಡಕ್ ಆಗಿ ಹೇಳಿದ್ದಾರೆ.
ಈ ನಡುವೆಯೇ ಮಂಗಳವಾರ ದಿಢೀರ್ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧದ ವಿವಾದ, ಜೆಡಿಎಸ್ ಕೋಟಾದಡಿ ನಿಗಮ ಮಂಡಳಿಗಳಿಗೆ ನೇಮಕ ವಿಚಾರದ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವ ಸಾಧ್ಯತೆಯಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, ನಿಗಮ ಮಂಡಳಿ ನೇಮಕ ಮಾಡುವ ವಿಚಾರದಲ್ಲಿ ನಮ್ಮ ಜಿಲ್ಲೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಅಭಿಪ್ರಾಯ ಕೇಳಬೇಕು. ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಆರು ಜನ ಶಾಸಕರಿದ್ದೇವೆ. ನಮ್ಮ ಜಿಲ್ಲೆಯಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲದಿದ್ದರೆ ಹೇಗೆ ? ಬೇರೆ ಜಿಲ್ಲೆಯ ವಿಷಯದಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ” ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಮ್ಮ ಬಗ್ಗೆ ಯೋಚನೆ ಮಾಡುವ ಬದಲು ತಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಲಿ ಎಂದು ತಿರುಗೇಟು ನೀಡಿದರು. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ನಮಗೆ ಹೇಳಲು ಅವರ್ಯಾರು ? ಅವರು ತಮ್ಮ ಪಕ್ಷದ ನಾಯಕರ ಮುಂದೆ ಹೇಳಿಕೊಳ್ಳಲಿ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಕೆಆರ್‌ಡಿಎಲ್‌ಗೆ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ ಅವರನ್ನು ನೇಮಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಶಿಫಾರಸು ಮಾಡಿರುವ ಬಗ್ಗೆ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿದ್ದಾರೆ ಎನ್ನಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಎರಡೂ ಪಕ್ಷಗಳ ನಾಯಕರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ನೀಡಿದ್ದಾರೆ. ರೇವಣ್ಣ ಅವರಿಗೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದಂತೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಸಭೆಯಲ್ಲೇನಿರುತ್ತದೆ?: ಮಂಗಳವಾರ ನಡೆಯಲಿರುವ ಸಭೆಯಲ್ಲಿ, ಚುನಾವಣೆ ಸಿದ್ಧತೆ ಸಂಬಂಧ ಪಕ್ಷ ಸಂಘಟನೆಗಾಗಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಕ್ಷೇತ್ರಾವಾರು ಹೊಣೆಗಾರಿಕೆ ನೀಡಲಾಗುತ್ತದೆ. ಎರಡು ತಿಂಗಳ ಕಾಲ ಎಲ್ಲ ಸಚಿವರು, ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಚುನಾವಣೆ ಕೆಲಸಕ್ಕೆ ನಿಯೋಜಿಸಲು ತೀರ್ಮಾನಿಸಲಾಗುತ್ತದೆ.
ಜೆಡಿಎಸ್ ಸಚಿವರ ವ್ಯಾಪ್ತಿಗೆ ಬರುವ ನಿಗಮ ಮಂಡಳಿಗಳಿಗೆ ಆದಷ್ಟೂ ಜೆಡಿಎಸ್‌ನವರನ್ನೇ ನೇಮಿಸಿದರೆ ಸಮನ್ವಯತೆ ಇರಲಿದೆ ಎಂಬ ಕಾರಣಕ್ಕೆ ಈ ಕುರಿತು ಸಹ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಜೆಡಿಎಲ್‌ಪಿ ಸಭೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರೊಂದಿಗೆ ಹಲವು ವಿಚಾರಗಳ ಬಗ್ಗೆ ದೂರವಾಣಿ ಮೂಲಕ ಚರ್ಚಿಸಿದರು. ಪಕ್ಷದ ಮುಖಂಡರ ಜತೆಯೂ ಸಮಾಲೋಚನೆ ನಡೆಸಿದರು.