ಅಥಣಿ: ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಸ್ಥಳೀಯ ಪಿ.ಡಬ್ಲ್ಯು.ಡಿ ಕಾರ್ಯಾಲಯದಲ್ಲಿ ಶುಕ್ರವಾರ ಸಾಯಂಕಾಲ ಪಕ್ಷಾತೀತವಾಗಿ ನಡೆದ ಹೋರಾಟದ ರೂಪು ರೇಷೆ ನಿರ್ಧರಿಸುವ ತುರ್ತು ಸಭೆಯಲ್ಲಿ ಪಟ್ಟಣದ ಗಣ್ಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಗಣ್ಯರು ಒಗ್ಗಟ್ಟಾಗಿ ಸೋಮವಾರ ಅಥಣಿ ಬಂದ್‌ಗೆ ಕರೆ ನೀಡುವುದಾಗಿ ಒಕ್ಕೊರಲಿನಿಂದ ಠರಾವು ಪಾಸು ಮಾಡಿದರು. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸ್ಥಳೀಯ ಎಲ್ಲ ಪ್ರತಿನಿಧಿಗಳು ಕೂಡ ತಮ್ಮ ರಾಜೀನಾಮೆ ನೀಡುವಂತೆ ಕೋರಲಾಯಿತಲ್ಲದೇ, ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರದತ್ತ ಗಮನ ಹರಿಸುವಂತೆ ಸೂಚಿಸಲಾಯಿತು.
ಈ ವೇಳೆ ಸ್ಥಳೀಯ ಕರವೇ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಕಳೆದ ಒಂದು ದಶಕದಲ್ಲಿ ಕೃಷ್ಣೆಯ ಒಡಲು ಎಂದಿಗೂ ಬರಿದಾಗಿರಲಿಲ್ಲ, ಈ ಸರ್ಕಾರದ ಕಾಲಾವಧಿಯಲ್ಲಿ ಮಾತ್ರ ಇಂತಹ ಪರಿಸ್ಥಿತಿ ಉದ್ಭವವಾಗಿದ್ದು, ಕೂಡಲೇ ಕ್ರಮ ಜರುಗಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ನಮ್ಮ ಹೋರಾಟದಲ್ಲಿ ಕೃಷ್ಣಾ ನದಿ ತೀರದ ಸಂಸದರು, ಶಾಸಕರು ಮತ್ತು ನದಿ ತೀರದ ಸುಮಾರು 800 ಗ್ರಾಮಗಳ ಸಾರ್ವಜನಿಕರು ಪಾಲ್ಗೊಳ್ಳುವಂತೆ ವಿನಂತಿಸಿದರು.
ಈ ವೇಳೆ ವಕೀಲರ ಸಂಘದ ಪದಾಧಿಕಾರಿ ಸುನೀಲ ಸಂಕ ಮಾತನಾಡಿ, ರಾಜಕೀಯ ಮುಖಂಡರು ಕೇವಲ ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಮುಖಂಡರುಗಳು ಶಾಶ್ವತ ಪರಿಹಾರಕ್ಕಾಗಿ ಯೋಚಿಸುತ್ತಿಲ್ಲ. ನದಿ ತೀರ ಸೇರಿದಂತೆ ತಾಲೂಕಿನ ಸಾರ್ವಜನಿಕರು ನೀರಿಗಾಗಿ ಸಂಕಷ್ಟ ಎದುರಿಸುತ್ತಿರುವುದು ದುರದೃಷ್ಟವೇ ಸರಿ ಎಂದು ಖೇದ ವ್ಯಕ್ತ ಪಡಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ ಮಾತನಾಡಿ, ಸಾರ್ವಜನಿಕರು ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತ ಪಡಿಸಿ ಕೃಷ್ಣೆಗೆ ನೀರು ಹರಿಸಲು ಅನುವು ಮಾಡಿಕೊಡುವಂತೆ ವಿನಂತಿಸಿದರು.
ಈ ವೇಳೆ ಮಲ್ಲಿಕಾರ್ಜುನ ಕನಶೆಟ್ಟಿ, ರಮೇಶ ಸಿಂದಗಿ, ಸಿದ್ಧಾರ್ಥ ಶಿಂಗೆ, ರಾಜೇಂದ್ರ ಐಹೊಳೆ, ಪ್ರಶಾಂತ ತೋಡಕರ, ಮಹಾದೇವ ಮಡಿವಾಳ, ರಾಜು ಗಾಲಿ, ವೆಂಕಟೇಶ ದೇಶಪಾಂಡೆ, ಸುಭಾಷ ಕಾಂಬಳೆ, ದೀಪಕ ಶಿಂಧೆ, ರಮೇಶ ಬಾದವಾಡಗಿ, ರಾಕೇಶ ಮೈಗೂರ, ಪ್ರಶಾಂತ ನಂದೇಶ್ವರ, ವಿನಯ ಪಾಟೀಲ, ಸುನೀಲ ನಾಯಿಕ, ಅನಿಲ ಸೌದಾಗರ, ಚಿದಾನಂದ ಶೇಗುಣಸಿ, ಸಂಜೀವ ಕಾಂಬಳೆ ಇದ್ದರು.