ತುರುವೇಕೆರೆ: ತಾಲೂಕಿನಲ್ಲಿರುವ ಹೇಮಾವತಿ ನಾಲೆಯಲ್ಲಿ ನೀರು ಹರಿದು ಹೋಗುತ್ತಿದ್ದರೂ, ವಿತರಣಾ ನಾಲೆಗಳ ಮೂಲಕ ಕೆರೆ-ಕಟ್ಟೆಗಳಿಗೆ ನೀರು ಹರಿಸದ ಜಿಲ್ಲಾಡಳಿತ ರೈತರಿಗೆ ವಂಚನೆ ಎಸಗುತ್ತಿದ್ದು, ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ಹರಿಸದಿದ್ದರೆ ಪಟ್ಟಣದ ಹೇಮಾವತಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸ ಲಾಗುವುದೆಂದು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌ಗೌಡ ಎಚ್ಚರಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿಗಾಗಿ ಅತಿ ಹೆಚ್ಚು ಭೂಮಿ ಕಳೆದುಕೊಂಡವರು ನಮ್ಮ ತಾಲೂಕಿನ ರೈತರು. ಆದರೂ ನೀರುಕೊಡದೇ ವಂಚಿಸಲಾಗಿದೆ. ಕೊನೇ ದಿನಗಳಲ್ಲಿ ಅಲ್ಪಮಟ್ಟಿನ ನೀರು ಬಿಡುಗಡೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿಗೆ 5 ಟಿ.ಎಂ.ಸಿ. ನೀರು ನ್ಯಾಯಯುತ ವಾಗಿ ಸಿಗಬೇಕು. ಜಲಾಶಯ ಭರ್ತಿಯಾಗಿದ್ದರೂ, ತಾಲೂಕಿಗೆ ನೀರು ಹರಿಸದೆ ನೇರವಾಗಿ ಕುಡಿವ ನೀರಿನ ಉದ್ದೇಶಕ್ಕೆಂದು ನೆಪಹೇಳುತ್ತ ತಾಲೂಕಿನಿಂದ ಮುಂದೆ ತಗೆದುಕೊಂಡು ಹೋಗುತ್ತಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ತಾಲೂಕಿನ ಕೆರೆ-ಕಟ್ಟೆಗಳಿಗೆ ವಿತರಣಾ ನಾಲೆಗಳ ಮೂಲಕ ನೀರು ಹರಿಸಬೇಕು. ಇಲ್ಲದಿದ್ದರೆ ಆ. 26 ರಂದು ಧರಣಿ ಹಮ್ಮಿಕೊಳ್ಳಲಾಗುವುದೆಂದು ಗುಡುಗಿದರು.
ರೈತ ಸಂಘಟನೆ ಗೌರವಾಧ್ಯಕ್ಷ ಅಸ್ಲಾಂಪಾಷ ಮಾತನಾಡಿ, ನೀರು ಬಿಡುಗಡೆಗೂ ಮುನ್ನ ನಾಲೆಯಲ್ಲಿ ಹೂಳೆತ್ತುವ ಹಾಗೂ ಜಂಗಲ್ ಕಟ್ಟಿಂಗ್ ನೆಪದಲ್ಲಿ ಕೋಟ್ಯಂತರ ರೂ. ಲಪಟಾಯಿಸಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಾಲೂಕಿನ ರೈತರಿಗೆ ಮೋಸ ಮಾಡಿದ್ದಾರೆ.
ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದಬ್ಬೇಘಟ್ಟ ಏತ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳಿಗೂ ನೀರು ಹರಿಸಬೇಕು.
ಸಾಧ್ಯವಾದರೆ ಏತ ನೀರಾವರಿಯಲ್ಲಿ ಬಳಸಿರುವ ಪೈಪ್‌ಲೈನ್ ಸಂಪೂರ್ಣ ಕಳಪೆಯಾಗಿದ್ದು, ಹೊಸ ದಾಗಿ ಗುಣಮಟ್ಟದ ಪೈಪ್‌ಲೈನ್ ಅಳವಡಿಸಿ ಸಮರ್ಪಕ ರೀತಿಯಲ್ಲಿ ನೀರು ಹರಿಸುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ರೆಹಮತ್, ಶಿವಕುಮಾರ್, ಬಸವಣ್ಣ, ಬಾಬಾಜಾನ್, ಶೇಖರ್, ಗೋವಿಂದರಾಜು, ಕುಮಾರ್, ಚಂದ್ರಯ್ಯ, ಕಿರಣ್, ಲೋಕೇಶ್, ಸುರೇಶ್ ಇತರರು ಇದ್ದರು.