ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯ ಮಾನ್ವಿ, ಸಿರವಾರ ಹಾಗೂ ರಾಯಚೂರು ಕೊನೆ ಭಾಗದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಎರಡು ದಿನಗಳಲ್ಲಿ ಸಮರ್ಪಕ ನೀರು ತಲುಪದೇ ಇದ್ದರೆ ಹೋರಾಟಕ್ಕೆ ಇಳಿಯಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಭೋಸರಾಜು ಎಚ್ಚರಿಸಿದರು.
ಶುಕ್ರವಾರ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 69ರಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಕಾಲುವೆ ಒಡೆದು ರಿಪೇರಿ ಬಳಿಕ ಕೆಳಭಾಗಕ್ಕೆ ಸಮಪರ್ಕ ನೀರು ಬರುತ್ತಿಲ್ಲ. ಕಾಲುವೆಗೆ ನೀರು ಹರಿಸಿ ನಾಲ್ಕು ದಿನಗಳಾದರೂ ಇನ್ನು ಕೆಳಭಾಗದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಮುಟ್ಟಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕ ಗೇಜು ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ತುಂಗಭದ್ರಾ ಎಡದಂಡೆ ಮೈಲ್-69ರಲ್ಲಿ 9.2 ಅಡಿ ನೀರು ಹರಿದರೆ ಮಾತ್ರ ಕೊನೆ ಭಾಗಕ್ಕೆ ನೀರು ತಲುಪಲು ಸಾಧ್ಯ, ಆದರೆ ಸದ್ಯ ಕೇವಲ 7.85 ಅಡಿ ನೀರು ಹರಿಯುತ್ತಿದೆ. ಮೈಲ್ 47ರ ಮೇಲ್ಭಾಗದಲ್ಲಿ ಅತಿ ಹೆಚ್ಚು ನೀರು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ ಎಂದರು.
ಮೈಲ್ 69 ಬಳಿ 1100 ಕ್ಯೂಸೆಕ್‌ನಷ್ಟು ಪ್ರಮಾಣದಲ್ಲಿ ಹರಿಯಬೇಕಾದ ನೀರು ಕೇವಲ 800 ಕ್ಯೂಸೆಕ್ ಹರಿಯುತ್ತಿದೆ. 300 ಕ್ಯೂಸೆಕ್‌ನಷ್ಟು ನೀರಿನ ಅಭಾವ ಇದೆ. ಇದರಿಂದಾಗಿ ಕೊನೆ ಭಾಗದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖುದ್ದು ನಾನೇ ಕಾಲುವೆಯ ಗೇಜು ನಿರ್ವಹಣೆ ಪರಿಶೀಲನೆ ಮಾಡಿದ್ದು, ನೀರಾವರಿ ನಿಗಮದ ಮುನಿರಾಬಾದ್ ವೃತ್ತದ ಮುಖ್ಯ ಎಂಜನಿಯರ್ ಶಿವಶಂಕರ ಅವರಿಗೆ ದೂರವಾಣಿಯಲ್ಲಿ ಮಾತನಾಡಿ ನೀರಿನ ಪ್ರಮಾಣ ಹೆಚ್ಚಿಸಿ ಮೈಲ್ 69 ರಲ್ಲಿ 9.2 ನೀರು ಹರಿಯುವಂತೆ ಸೂಚಿಸಿದ್ದೇನೆ. ರಾಯಚೂರು ಜಿಲ್ಲಾಧಿಕಾರಿ ಜತೆಗೂ ಚರ್ಚೆ ಮಾಡಿದ್ದು, ಅಗತ್ಯ ಬಿದ್ದರೆ ಪೊಲೀಸ್ ಬಂದೋಬಸ್ತ್ ಪಡೆದು ಕೆಳಭಾಗಕ್ಕೆ ನೀರು ತಲುಪಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಎರಡು ದಿನದಲ್ಲಿ ಕೆಳಭಾಗಕ್ಕೆ ನೀರು ಹರಿಸುವ ವಾಗ್ಧಾನ ಮಾಡಿದ್ದಾರೆ. ಒಂದು ವೇಳೆ ನೀರು ಸಿಗದೇ ಇದ್ದರೆ ಹೋರಾಟಕ್ಕೆ ಇಳಿಯಲಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಕಿರಿಲಿಂಗಪ್ಪ, ಶಿವಣ್ಣ ವಕೀಲ, ಮಲ್ಲಿಕಾರ್ಜುನಗೌಡ ಕವಿತಾಳ ಸೇರಿ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು.