Advertisement

ಕೊಯ್ನಾ ನೀರು ಬರದಿದ್ದರೆ ಜಲ ಸಮಸ್ಯೆ

11:58 AM May 09, 2019 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಒಡಲು ಖಾಲಿಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ನೀರು ಸಂಗ್ರಹ ಒಂದಷ್ಟು ಹೆಚ್ಚಿನ ಪ್ರಮಾಣದಲ್ಲಿದ್ದರೂ ಅದು ಎರಡು ವಾರಕ್ಕೆ ಖಾಲಿಯಾಗುವ ಆತಂಕ ಸೃಷ್ಟಿಯಾಗಿದೆ.

Advertisement

ಹೌದು, ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ 14 ನಗರ ಪ್ರದೇಶ, ಸುಮಾರು 510ಕ್ಕೂ ಹೆಚ್ಚು ಹಳ್ಳಿಗಳು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರನ್ನೇ ನಂಬಿಕೊಂಡಿವೆ.

ಆಲಮಟ್ಟಿ ಜಲಾಶಯದಲ್ಲಿ ಸದ್ಯ ಇರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕೆಂಬ ನಿರ್ಣಯ ಮಾಡಿದ್ದರೂ ಅದು ಕಡ್ಡಾಯವಾಗಿ ಕಾರ್ಯಗತವಾಗುತ್ತಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ವಿಜಯಪುರ, ಬಾಗೇವಾಡಿ, ಮನಗೂಳಿ, ನಿಡಗುಂದಿ, ಕೋಲಾರ, ಬಾಗಲಕೋಟೆ, ಇಳಕಲ್ಲ, ಹುನಗುಂದ, ಗುಳೇದಗುಡ್ಡ, ಕಮತಗಿ, ಅಮೀನಗಡ, ಬೀಳಗಿ, ಕುಷ್ಟಗಿ ನಗರ-ಪಟ್ಟಣಗಳು ಅವಲಂಬಿತವಾಗಿವೆ. ಅಲ್ಲದೇ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಯ ನೀರನ್ನು ನಂಬಿಕೊಂಡೇ ಒಟ್ಟು 19 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ. 19 ಯೋಜನೆಗಳಡಿ 190 ಹಳ್ಳಿಗಳಿಗೆ ಕೃಷ್ಣೆಯ ನೀರು ಪೂರೈಕೆ ಮಾಡಲಾಗುತ್ತಿದೆ. ಕೃಷ್ಣೆ ಸಂಪೂರ್ಣ ಬರಿದಾದರೆ, 14 ನಗರ-ಪಟ್ಟಣ ಹಾಗೂ 190 ಹಳ್ಳಿಗಳಿಗೆ ಜೀವಜಲದ ಸಮಸ್ಯೆ ತೀವ್ರಗೊಳ್ಳಲಿದೆ.

2016ರ ಪರಿಸ್ಥಿತಿ ಇಲ್ಲ: ಕಳೆದ 2016ರಲ್ಲಿ ಕೃಷ್ಣಾ ನದಿ ಸಂಪೂರ್ಣ ಖಾಲಿಯಾಗಿತ್ತು. ಆಗ ನದಿಯ ತಗ್ಗು-ದಿನ್ನಿಗಳಲ್ಲಿದ್ದ ನೀರನ್ನೂ ಒಂದೆಡೆ ಸಂಗ್ರಹಿಸಿ, ವಿದ್ಯುತ್‌ ಮೋಟಾರ್‌ ಮೂಲಕ, ಜಾಕವೆಲ್ ವರೆಗೆ ಹರಿಸಿ, ಆ ನೀರನ್ನು ಕುಡಿಯಲು ಬಳಕೆ ಮಾಡಲಾಗಿತ್ತು. ಆಗ 7 ಟಿಎಂಸಿ ನೀರನ್ನು ಮಾರಿಕೊಳ್ಳಲಾಗಿತ್ತು ಎಂಬ ದೊಡ್ಡ ವಿವಾದವೂ ಎಲ್ಲೆಡೆ ಹಬ್ಬಿತ್ತು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ.

Advertisement

ಸದ್ಯ ಜಲಾಶಯದಲ್ಲಿ 28.20 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ 17.36 ಡೆಡ್‌ ಸ್ಟೋರೇಜ್‌ ಇದ್ದು, ಉಳಿದ 10.36 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಇದರಲ್ಲಿ ಮೇ ಮೊದಲ ಅಥವಾ 2ನೇ ವಾರದಲ್ಲಿ ರಾಯಚೂರಿನ ಶಾಖೋತ್ಪನ್‌ ಕೇಂದ್ರಕ್ಕೆ 2 ಟಿಎಂಸಿ ಅಡಿ ನೀರು ಕೊಡಬೇಕೆಂಬ ಒಪ್ಪಂದವಿದ್ದು, ಈಗಾಗಲೇ ನಿತ್ಯ 2662 ಕ್ಯುಸೆಕ್‌ ನೀರನ್ನು ರಾಯಚೂರು ವಿದ್ಯುತ್‌ ಉತ್ಪಾದನೆ ಕೇಂದ್ರಕ್ಕೆ ಬಿಡಲಾಗುತ್ತಿದೆ. ಉಳಿದ 9.36 ಟಿಎಂಸಿ ನೀರನ್ನು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳಿಗಾಗಿ ಬಳಸಿಕೊಳ್ಳಲು ಮೀಸಲಿಡಲಾಗಿದೆ.

ಬಿಜೆಪಿ-ಕಾಂಗ್ರೆಸ್‌ ಪ್ರತ್ಯೇಕ ನಿಯೋಗ

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಅಷ್ಟೊಂದಿಲ್ಲ. ಆದರೆ, ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಹಿಪ್ಪರಗಿ, ಗಲಗಲಿ, ಹಿರೇಪಡಸಲಗಿ ಬ್ಯಾರೇಜ್‌ ವ್ಯಾಪ್ತಿಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗೆ ಸಂಬಂಧಿಸಿದ 22ಕ್ಕೂ ಹೆಚ್ಚು ಕುಡಿಯುವ ನೀರಿನ ಯೋಜನೆಗಳಿದ್ದು, ಅವುಗಳಿಗೆ ಸಧ್ಯ ನೀರಿನ ಅಭಾವ ಸೃಷ್ಟಿಯಾಗಿದೆ. ಹಿಪ್ಪರಗಿ, ಗಲಗಲಿ, ಹಿರೇಪಡಸಲಗಿ ಬ್ಯಾರೇಜ್‌ ಸಂಪೂರ್ಣ ಖಾಲಿಯಾಗಿವೆ. ಆದ್ದರಿಂದ ಕೊಯ್ನಾದಿಂದ ಕೃಷ್ಣಾ ನದಿಗೆ 4 ಟಿಎಂಸಿ ಅಡಿ ನೀರು ಬಿಡುವಂತೆ ರಾಜ್ಯಸಭೆ ಸದಸ್ಯ ಡಾ|ಪ್ರಭಾಕರ ಕೋರೆ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ನೇತೃತ್ವದ ಬಿಜೆಪಿ ನಿಯೋಗ, ಮಹಾರಾಷ್ಟ್ರ ಸಿಎಂಗೆ ಭೇಟಿ ಮಾಡಿದ್ದರೆ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ರಾಯಬಾಗ ಶಾಸಕ ಶ್ರೀಮಂತ ಪಾಟೀಲ ನೇತೃತ್ವದ ಕಾಂಗ್ರೆಸ್‌ ನಿಯೋಗ, ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರಿಗೆ ಭೇಟಿ ಮಾಡಿ ಪ್ರತ್ಯೇಕ ಮನವಿ ಮಾಡಿವೆ.

ಆಲಮಟ್ಟಿ, ನಾರಾಯಣಪುರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗೆ ಯಾವುದೇ ತೊಂದರೆಯಾಗದಂತೆ ನೀರು ಕಾಯ್ದಿರಿಸಲಾಗಿದೆ. ಈ ಬಾರಿ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಆಲಮಟ್ಟಿಯ ಹಿನ್ನೀರನ್ನೇ ನಂಬಿಕೊಂಡಿರುವ ಅಥಣಿ, ಜಮಖಂಡಿ, ಬೀಳಗಿ ಭಾಗದಲ್ಲಿ ಸ್ವಲ್ಪ ನೀರಿನ ಬೇಡಿಕೆ ಇದೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ, ಕೊಯ್ನಾ ನೀರು ಬಿಡಿಸುವ ಪ್ರಯತ್ನ ನಡೆದಿದೆ.

•ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಶ್ರೀಶೈಲ ಕೆ. ಬಿರಾದಾರ
Advertisement

Udayavani is now on Telegram. Click here to join our channel and stay updated with the latest news.

Next