Advertisement
ಸರ್ಕಾರ ಕ್ರಮ ಕೈಗೊಂಡರೂ ಅಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ, ಕೇವಲ ಗಂಟೆಗಳಲ್ಲೇ ವಿಷ್ಣು ಸ್ಮಾರಕ ನಿರ್ಮಾಣಕ್ಕಿರುವ ಅಡ್ಡಿ ದೂರ ಮಾಡಬಹುದು. ಆದರೆ, ಯಾಕೆ ಆಗುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆ’ ಎನ್ನುತ್ತಲೇ ಮಾತಿಗಿಳಿದರು ಭಾರತಿ ವಿಷ್ಣುವರ್ಧನ್. “ಬೆಂಗಳೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಯ್ತು ಎಂಬ ಕಾರಣಕ್ಕೆ ವರ್ಷಗಟ್ಟಲೆ ಕಾಯಬೇಕಾಯ್ತು. ಇನ್ನೆಲ್ಲೋ ಜಾಗ ತೋರಿಸಿದರು.
Related Articles
Advertisement
ಯಜಮಾನರ ಸ್ಮಾರಕ ಒಬ್ಬರಿಂದ ಆಗುವಂಥದ್ದಲ್ಲ. ಎಲ್ಲರೂ ಕೈ ಜೋಡಿಸಬೇಕಿದೆ. ಇದರ ಬಿಸಿ ಕೇವಲ ಸೆಪ್ಟೆಂಬರ್, ಡಿಸೆಂಬರ್‌ನಲ್ಲಿ ಮಾತ್ರ ಆಗುತ್ತೆ. ಉಳಿದಂತೆ ಆಗುವುದಿಲ್ಲ. ಸರ್ಕಾರ ಕ್ರಮ ಕೈಗೊಂಡರೆ ಎಲ್ಲವೂ ಸಾಧ್ಯ. ಇನ್ನು, ಅಭಿಮಾನಿ ಸಂಘಗಳ ಜೊತೆ ಯಾವುದೇ ಬೇಸರವಿಲ್ಲ. ಆದರೆ, ಕೆಲವರಿಗೆ ವಿಷಯ ಗೊತ್ತಿಲ್ಲದೆಯೇ ಏನೇನೋ ತಪ್ಪು ಅರ್ಥ ಕಲ್ಪಿಸಿಕೊಂಡಿದ್ದಾರೆ. ರಾಷ್ಟ್ರೀಯ ಉತ್ಸವಕ್ಕೆ ಕುಟುಂಬ ಯಾಕೆ ಬರಲಿಲ್ಲ ಎಂಬ ಪ್ರಶ್ನೆಯೇ ದೊಡ್ಡದಾಗುತ್ತಿದೆ.
ಯಜಮಾನರು ಇದ್ದಾಗ ಅಭಿಮಾನಿಗಳೇ ಮನೆಗೆ ಬರುತ್ತಿದ್ದರು. ಅವರು ಎಲ್ಲೂ ಹೊರಗೆ ಹೋಗುತ್ತಿರಲಿಲ್ಲ. ಹಾಗೆಯೇ, ಬರುವ ಅಭಿಮಾನಿಗೆ ಹೂವು, ಹಾರ ತರಬೇಡಿ ಅನ್ನುತ್ತಿದ್ದರು. ಆ ಹಣದಲ್ಲಿ ನಿಮ್ಮ ಮಕ್ಕಳಿಗೆ ಪುಸ್ತಕ ಕೊಡಿಸಿ ಎನ್ನುತ್ತಿದ್ದರು. ಅವರ ಹೆಸರಲ್ಲಿ ಹಣ ಖರ್ಚು ಮಾಡಿ ಕಾರ್ಯಕ್ರಮ ನಡೆಸುವ ಬದಲು, ಮಕ್ಕಳಿಗೆ ಪುಸ್ತಕ, ಪೆನ್ನು ಇತ್ಯಾದಿ ಅಗತ್ಯ ವಸ್ತು ಕೊಡಿಸಿ. ಅದು ಬಿಟ್ಟು, ವಿಷ್ಣುವರ್ಧನ್ ಕಾರ್ಯಕ್ರಮಕ್ಕೆ ಅವರ ಕುಟುಂಬದವರೇ ಇಲ್ಲ ಅಂತೆಲ್ಲಾ ಹೇಳುವುದು ಬೇಡ. ಆಹ್ವಾನಿಸಿದರೂ, ನಮಗೆ ಎಲ್ಲಾ ಕಡೆ ಹೋಗಲು ಸಾಧ್ಯವೂ ಇಲ್ಲ.
ನಮಗೆ ಸಾಕಷ್ಟು ಕೆಲಸಗಳಿವೆ. ಓಡಾಡಲೇಬೇಕಿದೆ. ಹಾಗಾಗಿ ಯಾರೂ ಅಸಮಾಧಾನ ಪಟ್ಟುಕೊಳ್ಳಬೇಕಿಲ್ಲ’ ಎನ್ನುವ ಭಾರತಿ ವಿಷ್ಣುವರ್ಧನ್, “ಕೆಲವರು ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಆದರೆ, ಒಂದು ಖುಷಿಯಂತೂ ಇದೆ. ಯಜಮಾನರ ಹೆಸರು ಹೇಳಿ ಎಷ್ಟೋ ಜನ ಊಟ ಮಾಡುತ್ತಿದ್ದಾರೆ ಅಷ್ಟು ಸಾಕು. ಅವರ ಹೆಸರ ಕಾರ್ಯಕ್ರಮಕ್ಕೆ ಅಲ್ಲಿಗೆ ಬನ್ನಿ ಇಲ್ಲಿಗೆ ಬನ್ನಿ ಅಂತ ದಯವಿಟ್ಟು ಕರೆಯಬೇಡಿ. ಅಭಿಮಾನವಿದ್ದರೆ, ಒಳ್ಳೆಯ ಕೆಲಸ ಮಾಡಿ, ಖರ್ಚು ಮಾಡುವ ಬದಲು ಅಗತ್ಯವಿದ್ದವರಿಗೆ ನೆರವಾಗಿ’ ಎಂದು ಮನವಿ ಮಾಡಿಕೊಳ್ಳುತ್ತಾರೆ ಭಾರತಿ.
ವಿಷ್ಣು ಹುಟ್ಟುಹಬ್ಬಕ್ಕೆ ಹೃದಯ ಗೀತೆ: ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಬಾರಿ ಅವರ 68 ನೇ ಜನ್ಮದಿನದ ಅಂಗವಾಗಿ ಹಲವು ಕಾರ್ಯಕ್ರಮಗಳು ಜರುಗಲಿವೆ. ವಿಭಾ ಚಾರಿಟಬಲ್ ಟ್ರಸ್ಟ್ ಹಾಗು ರೋಟರಿ ಬೆಂಗಳೂರು ಸೌಥ್ ಈಸ್ಟ್ ಸಂಯೋಜನೆಯಲ್ಲಿ ಸೆ.14 ರಂದು “ಹೃದಯ ಗೀತೆ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮ, ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ದೇಣಿಗೆಗಾಗಿ ನಡೆಯಲಿದೆ.
ಆ ಕಾರ್ಯಕ್ರಮದಿಂದ ಬಂದಂತಹ ಹಣ ಸುಮಾರು 140 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. “ನೀಡಿ ಹಾರ್ಟ್ ಫೌಂಡೇಷನ್’ ಮತ್ತು ರೋಟರಿ ಬೆಂಗಳೂರು ಸೌಥ್ ಈಸ್ಟ್ ಜೊತೆ ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ನಟ,ನಟಿಯರು, ಗಾಯಕ,ಗಾಯಕಿಯರು ಭಾಗವಹಿಸುತ್ತಿದ್ದಾರೆ.
ಅಂಬರೀಷ್, ಸುಮಲತಾ, ಭಾರತಿ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜಕುಮಾರ್, ರಮೇಶ್ ಅರವಿಂದ್, ಜಗ್ಗೇಶ್, ಬಿ.ಕೆ. ಸುಮಿತ್ರಾ, ಶ್ರುತಿ, ಪ್ರೇಮ, ಗುರುಕಿರಣ್, ಲಕ್ಷ್ಮೀ ಗೋಪಾಲಸ್ವಾಮಿ, ವಿಜಯರಾಘವೇಂದ್ರ, ಅನಿರುದ್ಧ, ಶರಣ್, ಶ್ರೀಮುರಳಿ, ನವೀನ್ ಕೃಷ್ಣ, ಮಾಸ್ಟರ್ ಆನಂದ್, ಸುನೀಲ್ ರಾವ್, ರಿಶಭ್ ಶೆಟ್ಟಿ, ಚೈತ್ರಾ, ಅರ್ಚನಾ ಉಡುಪ, ಶರ್ಮಿಳಾ ಮಲಾ°ಡ್, ಸಿಂಚನ್ ದೀಕ್ಷಿತ್, ಕೀರ್ತಿ ಅನಿರುದ್ಧ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೆ.18 ರಂದು ಸುಚಿತ್ರಾ ಫಿಲ್ಮ್ಸೊಸೈಟಿಯಲ್ಲಿ ಅನಿರುದ್ಧ ಅವರು ರಚಿಸಿ, ನಿರ್ದೇಶಿಸಿರುವ ಆರು ಕಿರುಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಸಮಾಜದ ಕಳಕಳಿ ಹೊಂದಿರುವ ಕಿರುಚಿತ್ರೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಭಾರತಿ ವಿಷ್ಣುವರ್ಧನ ಮತ್ತು ಅನಿರುದ್ಧ ಮನವಿ ಮಾಡಿದ್ದಾರೆ. ಎಂದಿನಂತೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದು ರಕ್ತದಾನ, ಆರೋಗ್ಯ ಶಿಬಿರ ಇತ್ಯಾದಿ ಕಾರ್ಯಕ್ರಮಗಳೂ ಜರುಗಲಿವೆ.