Advertisement

ಬೋರ್‌ ಆದ್ರಾ ಬೋರಿಸ್‌ ಜಾನ್ಸನ್‌

06:36 PM Jul 07, 2022 | Team Udayavani |

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಕುರ್ಚಿ ಮತ್ತೆ ಮತ್ತೆ ಅಲುಗಾಡುತ್ತಿದೆ. ಈ ಬಾರಿ ಕ್ರಿಸ್‌ ಪಿಂಚೆರ್‌ ಎಂಬವರ ನೇಮಕ ಸಂಬಂಧ ವಿವಾದವೇರ್ಪಟ್ಟಿದ್ದು, ದಿಢೀರ್‌ ಬೆಳವಣಿಗೆಯಲ್ಲಿ ಹಣಕಾಸು ಸಚಿವ ರಿಷಿ ಸುನಕ್‌ ಸೇರಿದಂತೆ ನಾಲ್ವರು ಸಚಿವರು ರಾಜೀನಾಮೆ ನೀಡಿ, ಬೋರಿಸ್‌ ಜಾನ್ಸನ್‌ ಅವರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಿನ ಬೆಳವಣಿಗೆಗಳನ್ನು ನೋಡಿದರೆ, ಸದ್ಯದಲ್ಲೇ ಬೋರಿಸ್‌ ಜಾನ್ಸನ್‌ ಕುರ್ಚಿ ಕಳೆದುಕೊಳ್ಳುವುದು ಹತ್ತಿರವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಏನಿದು ಕ್ರಿಸ್‌ ಪಿಂರ್ಚೆ ಹಗರಣ?
2019ರ ವೇಳೆಯಲ್ಲಿ ಬೋರಿಸ್‌ ಜಾನ್ಸನ್‌ ಸಂಪುಟದಲ್ಲಿ ಸಹಾಯಕ ವಿದೇಶಾಂಗ ಸಚಿವರಾಗಿದ್ದ ಕ್ರಿಸ್‌ ಪಿಂಚೆರ್‌, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದಾರೆ. ಕ್ಲಬ್‌ವೊಂದರಲ್ಲಿ ಇಬ್ಬರು ಪುರುಷರ ಬಳಿ ಅಸಹಜವಾಗಿ ವರ್ತಿಸಿದ್ದರು ಮತ್ತು ಸಂಸದರಾಗಿದ್ದ ಸಿಮೋನ್‌ ಮೆಕ್‌ಡೋನಾಲ್ಡ್‌ ಎಂಬವರ ಜತೆಯೂ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿ, ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಸಿಮೋನ್‌ ಮೆಕ್‌ಡೋನಾಲ್ಡ್‌ ಅವರು ಹೌಸ್‌ ಆಫ್‌ ಕಾಮನ್ಸ್‌ಗೆ ಪತ್ರವೊಂದನ್ನು ಬರೆದು, ಇದುವರೆಗೂ ಕ್ರಿಸ್‌ ಪಿಂಚೆರ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಹೇಳಿರುವುದೆಲ್ಲಾ ಸುಳ್ಳು ಎಂದು ಉಲ್ಲೇಖಿಸಿದ್ದಾರೆ. ಈ ಘಟನೆಯಾದ ಮೇಲೆ ಬೋರಿಸ್‌ ಜಾನ್ಸನ್‌ ವಿರುದ್ಧ ಸ್ವಪಕ್ಷೀಯರಲ್ಲೇ ಆಕ್ರೋಶ ತೀವ್ರವಾಗಿದೆ.

ಜು.5 ನಿರ್ಣಾಯಕ ದಿನ
ಕಳೆದ ತಿಂಗಳಷ್ಟೇ ಪಾರ್ಟಿ ಗೇಟ್‌ ಹಗರಣದ ಹಿನ್ನೆಲೆಯಲ್ಲಿ ಬೋರಿಸ್‌ ಜಾನ್ಸನ್‌ ವಿರುದ್ಧ ವಿಶ್ವಾಸಮತ ಮಂಡಿಸಲಾಗಿತ್ತಾದರೂ, ಅದು ಸದನದಲ್ಲಿ ಸೋಲು ಕಂಡಿತ್ತು. ಹೀಗಾಗಿ, ಮುಂದಿನ ಒಂದು ವರ್ಷದ ವರೆಗೆ ಅವರು ಹುದ್ದೆಯನ್ನು ಗಟ್ಟಿ ಮಾಡಿಕೊಂಡಿದ್ದರು. ಆದರೆ, ಸಿಮೋನ್‌ ಮೆಕ್‌ಡೋನಾಲ್ಡ್‌ ಪತ್ರದ ನಂತರ ಬೋರಿಸ್‌ ವಿರುದ್ಧ ಪಕ್ಷದಲ್ಲಿಯೇ ಆಕ್ರೋಶ ವ್ಯಕ್ತವಾಯಿತು. ಹೀಗಾಗಿ, ಜು. 5ರಂದು ಮೊದಲಿಗೆ ಆರೋಗ್ಯ ಸಚಿವರಾಗಿದ್ದ ಸಾಜಿದ್‌ ಜಾವೆದ್‌ ಮತ್ತು ಹಣಕಾಸು ಸಚಿವ ರಿಷಿ ಸುನಕ್‌ ಅವರು ದಿಢೀರ್‌ ಆಗಿ ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆ ಪತ್ರದಲ್ಲಿ ಇವರಿಬ್ಬರೂ, ಬೋರಿಸ್‌ ಜಾನ್ಸನ್‌ ಅವರಲ್ಲಿ ವಿಶ್ವಾಸ ಕಳೆದುಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ನಾಯಕತ್ವ ಬದಲಾವಣೆ ಕುರಿತಂತೆಯೂ ಆಗ್ರಹಿಸಿದ್ದಾರೆ.

ಸರಣಿ ರಾಜೀನಾಮೆ
ಕ್ಯಾಬಿನೆಟ್‌ ಸಚಿವರಿಬ್ಬರ ರಾಜೀನಾಮೆ ಬಳಿಕ, ಬುಧವಾರವೂ ಇಂಗ್ಲೆಂಡ್‌ನ‌ಲ್ಲಿ ರಾಜೀನಾಮೆ ಸರಣಿ ಮುಂದುವರಿದಿದೆ. ಸಾಲಿಸಿಟರ್‌ ಜನರಲ್‌ ಅಲೆಕ್ಸ್‌ ಛಲ್ಕ್, ಶಿಕ್ಷಣ ಸಚಿವ ರಾಬಿನ್‌ ವಾಲ್ಕರ್‌, ಮಕ್ಕಳ ಸಚಿವ ವಿಲ್‌ ಕ್ವಿನ್ಸ್‌, ಪಿಪಿಎಸ್‌ಗಳಾದ ನಿಕೋಲಾ ರಿಚಡರ್ಸ್‌, ಜೋನಾಥನ್‌ ಗ್ವಿಲ್ಸ್‌, ಸಾಖೀಬ್‌ ಭಟ್ಟಿ, ವರ್ಜೀನಿಯಾ ಕ್ರೋಸಿº, ಥೋ ಕ್ಲಾರ್ಕ್‌, ಬಿಮ್‌ ಅಫೋಲೋಮಿ, ಲಾರಾ ಟ್ರೋಟ್‌ ಮತ್ತು ವಾಣಿಜ್ಯ ರಾಯಭಾರಿ ಆ್ಯಂಡ್ರೂé ಮಾರಿಸನ್‌ ರಾಜೀನಾಮೆ ನೀಡಿದ್ದಾರೆ. ಇವರಷ್ಟೇ ಅಲ್ಲ, ಇನ್ನೂ ಕೆಲವರು ರಾಜೀನಾಮೆ ನೀಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ವಿಶೇಷವೆಂದರೆ, ಇವರೆಲ್ಲರೂ ಕಳೆದ ತಿಂಗಳ ವಿಶ್ವಾಸಮತ ಯಾಚನೆ ವೇಳೆಯಲ್ಲಿ ಬೋರಿಸ್‌ ಜಾನ್ಸನ್‌ ಅವರ ಬೆನ್ನಿಗೆ ನಿಂತವರು.

ಪಾರ್ಟಿಗೈಟ್‌ ಹಗರಣ
ಭಾರತದಲ್ಲಿ ಹೇಳುವುದಾದರೆ ಇದು ಸುದ್ದಿಯೇ ಆಗದ ಹಗರಣವಾಗುತ್ತಿತ್ತು. ಆದರೆ, ಇಂಗ್ಲೆಂಡ್‌ನ‌ಲ್ಲಿ ಕೊರೊನಾ ನಿಯಮ ಉಲ್ಲಂ ಸಿ, ಕ್ರಿಸ್‌ಮಸ್‌ ಪಾರ್ಟಿ ಮಾಡಿದ ಬೋರಿಸ್‌ ಜಾನ್ಸನ್‌ ಅವರು ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಅಂದರೆ, ಜನರಿಗೆ ಕ್ರಿಸ್‌ಮಸ್‌ ಮಾಡಲು ಅವಕಾಶ ಇಲ್ಲವೆಂದಾದ ಮೇಲೆ, ಅಲ್ಲಿನ ಪ್ರಧಾನಿಗೆ ಇರಬಾರದು ಎಂಬ ನಿಯಮವಿದೆ. ಹೀಗಾಗಿ, ನಿಯಮ ಉಲ್ಲಂ ಸಿ ಪಾರ್ಟಿ ಮಾಡಿದ ಇವರು ಜನರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯನ್ನೂ ನಡೆಸಿದ್ದು, ಇವರು ತಪ್ಪಿತಸ್ಥರಾಗಿದ್ದಾರೆ. ಹೀಗಾಗಿಯೇ ಇವರ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಅಂದರೆ, ಜನವರಿ, ಏಪ್ರಿಲ್‌ ಮತ್ತು ಮೇನಲ್ಲಿ ಇವರನ್ನು ಪದಚ್ಯುತಗೊಳಿಸಲು ಪ್ರಯತ್ನ ನಡೆಸಲಾಗಿತ್ತಾದರೂ, ಅದು ಸಫಲವಾಗಿಲ್ಲ.

Advertisement

ಬೋರಿಸ್‌ ಜಾನ್ಸನ್‌ ಮುಂದಿರುವ ಆಯ್ಕೆಗಳೇನು?
1. ಸಂಪುಟ ಸದಸ್ಯರ ವಿಶ್ವಾಸ ಕಳೆದುಕೊಂಡಿರುವುದರಿಂದ ರಾಜೀನಾಮೆ ನೀಡುವುದು. ಆದರೆ, ಸದ್ಯ ಬೋರಿಸ್‌ ಜಾನ್ಸನ್‌, ರಾಜೀನಾಮೆ ಕೊಟ್ಟವರ ಬದಲಿಗೆ ಬೇರೆಯವರನ್ನು ನೇಮಕ ಮಾಡುತ್ತಿದ್ದು, ಹೀಗಾಗಿ, ಸ್ವಯಂ ರಾಜೀನಾಮೆ ಘೋಷಣೆ ಕಷ್ಟಕರ.
2. ರಾಜೀನಾಮೆ ಕೊಡದೇ ಹೋದರೆ, ಸಂಪುಟದಲ್ಲಿರುವ ಇನ್ನಿಬ್ಬರು ಪ್ರಮುಖ ಸಚಿವರಾದ ವಿದೇಶಾಂಗ ಸಚಿವ ಲಿಜ್‌ ಟ್ರಾಸ್‌ ಮತ್ತು ರಕ್ಷಣಾ ಸಚಿವ ಬೆನ್‌ ವಾಲೆಸ್‌ ರಾಜೀನಾಮೆ ನೀಡುವುದು. ಆಗ ಅನಿವಾರ್ಯವಾಗಿ ಬೋರಿಸ್‌ ಜಾನ್ಸನ್‌ ಕುರ್ಚಿ ಬಿಡಬೇಕಾಗುತ್ತದೆ.
3. ಕನ್ಸರ್ವೇಟೀವ್‌ ಪಕ್ಷದ ನಿಯಮಗಳ ಪ್ರಕಾರ, ಇನ್ನು ಒಂದು ವರ್ಷ ಬೋರಿಸ್‌ ಜಾನ್ಸನ್‌ ವಿರುದ್ಧ ವಿಶ್ವಾಸಮತ ಮಂಡಿಸುವಂತಿಲ್ಲ. ಹೀಗಾಗಿ, ಈ ನಿಯಮ ಅವರನ್ನು ಬಚಾವ್‌ ಮಾಡುತ್ತಿದೆ.
4. ಪಕ್ಷದ ನಿಯಮದಂತೆ “1922 ಕಮಿಟಿ” ಜಾರಿಗೆ ತರುವುದು. ಅಂದರೆ ಮೊದಲಿಗೆ ಕನ್ಸರ್ವೇಟೀವ್‌ ಪಕ್ಷದ ನಾಯಕನ ಸ್ಥಾನದಿಂದ ಬೋರಿಸ್‌ ಜಾನ್ಸನ್‌ ಅವರನ್ನು ಕಿತ್ತುಹಾಕುವುದು. ಬಳಿಕ 1922 ಕಮಿಟಿ ಜಾರಿಗೆ ತರುವುದು. ಈ ಕಮಿಟಿ ಹೊಸ ನಾಯಕನ ಆಯ್ಕೆ ಮಾಡುತ್ತದೆ.

ಏನಿದು 1922 ಕಮಿಟಿ ನಿಯಮ?
ಕನ್ಸರ್ವೇಟೀವ್‌ ಪಕ್ಷದಲ್ಲಿ ನಾಯಕತ್ವ ಬದಲಾವಣೆಗಾಗಿ ಇರುವ ನಿಯಮ. ಅಂದರೆ, ಇಲ್ಲಿ ಕನ್ಸರ್ವೇಟೀವ್‌ ಸದಸ್ಯರಿಗೆ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ನೀಡಲಾಗುತ್ತದೆ. ಇಲ್ಲಿ ಸದಸ್ಯರು ತಮಗಿಷ್ಟ ಬಂದ ನಾಯಕರ ಹೆಸರನ್ನು ಬರೆದು ಹಾಕಬೇಕು. ಯಾರಿಗೆ ಹೆಚ್ಚು ಮತ ಬೀಳುತ್ತದೆಯೋ ಅವರು ನಾಯಕರಾಗಿ ಆಯ್ಕೆಯಾಗುತ್ತದೆ. ಇಲ್ಲಿ ಅಭ್ಯರ್ಥಿಗಳು ಎಂದು ಯಾರೂ ಸ್ಪರ್ಧಿಸಿರುವುದಿಲ್ಲ. ಬದಲಿಗೆ ಸದಸ್ಯರೇ ವೋಟಿಂಗ್‌ ಮೂಲಕ ಸೂಚಿಸಬೇಕು. ಇದು ಅತ್ಯಂತ ಸುದೀರ್ಘ‌ ಪ್ರಕ್ರಿಯೆ. ಕೆಲವೊಮ್ಮೆ 15 ದಿನಕ್ಕೂ ಮುಗಿಯಬಹುದು.

ಯಾರಾಗಬಹುದು ಹೊಸ ಪಿಎಂ?
ಈಗಿನ ವಿದ್ಯಮಾನಗಳನ್ನು ಗಮನಿಸಿದರೆ, ಇಂಗ್ಲೆಂಡ್‌ ಪತ್ರಿಕೆಗಳ ಪ್ರಕಾರ, ಬೋರಿಸ್‌ ಜಾನ್ಸನ್‌ ಕುರ್ಚಿ ಬಿಡುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ, ಹೊಸ ಪ್ರಧಾನಿ ಯಾರಾಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ.

1. ಲಿಜ್‌ ಟ್ರಾಸ್‌ – ಹಾಲಿ ವಿದೇಶಾಂಗ ಸಚಿವೆ. ಪಾರ್ಟಿ ಸದಸ್ಯರ ನೆಚ್ಚಿನ ಅಭ್ಯರ್ಥಿಯಾಗಬಹುದು.

2. ಜೆರೆಮಿ ಹಂಟ್‌ – ಮಾಜಿ ಆರೋಗ್ಯ ಮತ್ತು ವಿದೇಶಾಂಗ ಸಚಿವ – 2019ರ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದವರು.

3. ಬೆನ್‌ ವ್ಯಾಲೇಸ್‌ – 52 ವರ್ಷದ ಇವರು ಹಾಲಿ ರಕ್ಷಣಾ ಸಚಿವ. ಪಕ್ಷದೊಳಗೂ ಉತ್ತಮ ಅಭಿಪ್ರಾಯವಿದೆ.

4. ರಿಷಿ ಸುನಕ್‌ – ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ, ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೋರಿಸ್‌ ಜಾನ್ಸನ್‌ ವಿರುದ್ಧ ನಿಂತಿರುವ ಸಂಸದ. ಪಕ್ಷದಲ್ಲಿ ಉತ್ತಮ ಅಭಿಪ್ರಾಯಗಳಿದ್ದರೂ, ಪತ್ನಿಯ ಆಸ್ತಿ ಮತ್ತು ಜಾನ್ಸನ್‌ ಜತೆಗೆ ಕ್ರಿಸ್‌ಮಸ್‌ ಪಾರ್ಟಿ ಮಾಡಿದ ಆರೋಪವಿದೆ.

5 . ನದಿಮ್‌ ಝವಾಹಿ – ಈಗ ವಿತ್ತ ಸಚಿವರಾಗಿ ಆಯ್ಕೆಯಾಗಿರುವ ವ್ಯಕ್ತಿ. ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಲಸಿಕೆ ತಯಾರಿಸಿ ಎಲ್ಲರಿಗೆ ನೀಡುವಲ್ಲಿ ಉತ್ತಮ ಪಾತ್ರ ವಹಿಸಿದ್ದವರು.

6 . ಪೆನ್ನಿ ಮೋರ್ಡಂಟ್‌ – ಈ ಹಿಂದಿನ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದವರು. ಆದರೆ, 2019ರಲ್ಲಿ ಪ್ರತಿಸ್ಪರ್ಧಿ ಹಂಟ್‌ಗೆ ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಬೋರಿಸ್‌ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next