Advertisement

ಹಠವಿದ್ದಲ್ಲಿ ಕಠಿಣ ಸಾಧನೆ ಸಾಧ್ಯ

09:54 AM Oct 01, 2018 | Team Udayavani |

ಕಲಬುರಗಿ: ಬಾಲ್ಯದಲ್ಲಿ ಛಲ-ಹಠ, ಯೌವ್ವನದಲ್ಲಿ ಕಾಯಕ ನಿಷ್ಠೆ, ವೃತ್ತಿಯಲ್ಲಿ ಹೃದಯ ವೈಶ್ಯಾಲತೆಯಿದ್ದರೆ ನಾವು ಬಯಸಿದ್ದನ್ನು ಸಾಧನೆ ಮಾಡಬಹುದು. ಸಾಮಾಜಿಕವಾಗಿ ಪೊಲೀಸ್‌ ಇಲಾಖೆಯಲ್ಲಿ ಸ್ವಾಯತ್ತತೆ, ನ್ಯಾಯಾಂಗದಲ್ಲಿ ಅದರಲ್ಲೂ ನ್ಯಾಯಾಧೀಶರಲ್ಲಿ ನಾನೇ ಶ್ರೇಷ್ಠ ಎನ್ನುವ ಅಹಂವಿಕೆ ಬಾರದಿದ್ದಲ್ಲಿ ನಾವು ಬಯಸಿದ ಸುಂದರ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Advertisement

ಹೀಗೆ ತಮ್ಮ ಅನುಭವ ಹಾಗೂ ಕಠೊರ ನುಡಿಗಳನ್ನಾಡಿದವರು ಹಿರಿಯ ಖ್ಯಾತ ನಾಯವಾದಿ, ಶಿಕ್ಷಣ ತಜ್ಞ ಬಾಬುರಾವ್‌ ಮಂಗಾಣೆ. ರವಿವಾರ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಅವರು ತಮ್ಮ ಅನುಭವದ ಬುತ್ತಿ ಬಿಚ್ಚಿಟ್ಟರು.

ಎಲ್ಲರಂತೆ ಬಾಲ್ಯದಲ್ಲಿ ಕಷ್ಟ-ನಷ್ಟ, ಕೌಟುಂಬಿಕ ದ್ವೇಷ, ವಿದ್ಯಾರ್ಥಿ ಜೀವನದಲ್ಲಿ ನಗರ ವಿದ್ಯಾರ್ಥಿಗಳ ನಡುವೆ ಹಳ್ಳಿಯ ಕೀಳರಿಮೆ ಭಾವನೆ, ವೃತ್ತಿಯಲ್ಲಿ ಸವಾಲುಗಳೊಂದಿಗೆ ಕಾರ್ಯನಿರ್ವಹಿಸಿದ್ದೇನೆ ಎಂದು ಜೀವನ ಘಟನೆಗಳನ್ನು ಬಿಚ್ಚಿಟ್ಟ ಮಂಗಾಣೆ ಅವರು, ತಾವು ಐದು ವರ್ಷ ಇರುವಾಗ ತಂದೆಯವರಿಗೆ ತಮ್ಮ ದೊಡ್ಡಪ್ಪನೇ ಎರಡು ಸಲ ವಿಷಪ್ರಾಶನ ಮಾಡಿಸಿದ ಘಟನೆ ಹಾಗೂ ತದನಂತರ ಮೃತಪಟ್ಟ ಘಟನೆ ವಿವರಿಸುತ್ತಾ ಕಣ್ಣೀರು ಹಾಕಿದರು.

ಬಾಲ್ಯ: ಆಳಂದ ತಾಲೂಕಿನ ಕರಹರಿಗ್ರಾಮದಲ್ಲಿ ಜನಿಸಿದ್ದರೂ ಸ್ವಗ್ರಾಮದಲ್ಲಿ ಶಿಕ್ಷಣ ಕಲಿಯಲು ಆಗಲಿಲ್ಲ. ಇದಕ್ಕೆ ಕೌಟುಂಬಿಕ ಕಲಹ, ತಂದೆಗೆ ವಿಷಪ್ರಾಶನ ಮಾಡಿದ ನಂತರ ಗ್ರಾಮವನ್ನವೇ ತೊರೆದು ತಾಯಿಯ ತವರೂರು ಪಟ್ಟಣ ಗ್ರಾಮಕ್ಕೆ ಬಂದು ಪ್ರಾಥಮಿಕ ಶಿಕ್ಷಣ ಆರಂಭಿಸಿದೆ. ತದನಂತರ ಕಲಬುರಗಿಗೆ ಬಂದು ಒಂದು ವರ್ಷ ಬಂಧುಗಳ ಮನೆಯಲ್ಲಿ, ತದನಂತರ ಕೋಣೆಯೊಂದನ್ನು ಮಾಡಿಕೊಂಡು ಕಷ್ಟಗಳ ನಡುವೆ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿದೆ. 

ಶಿಕ್ಷಕರು ತಪ್ಪು ಹೇಳಿದ್ದನ್ನು ಪ್ರಶ್ನಿಸಿ ತರಗತಿಯಿಂದ ಹೊರ ಬಂದಿದ್ದೆ. ಕಾನೂನು ಪದವಿಯಲ್ಲಿ ತರಗತಿಯಲ್ಲೇ ತಾವೊಬ್ಬರೇ ಉತ್ತೀರ್ಣರಾಗಿದ್ದೆವು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

Advertisement

ಸರ್ಕಾರಿ ನೌಕರಿಗೆ ಗುಡ್‌ ಬೈ: ಸರ್ಕಾರದ ಸ್ವಾಧೀನಕ್ಕೆ ಒಳಪಟ್ಟ ಶಾಲೆಯಲ್ಲಿ ಶಿಕ್ಷಕ ಹುದ್ದೆಗೆ ಗುಡ್‌ಬೈ ಹೇಳಿ ವಕೀಲ ವೃತ್ತಿಗೆ ಸೇರಿಕೊಂಡೆ. ಆಗ ಸರ್ಕಾರಿ ನೌಕರಿ ಸಿಗುವುದೇ ಅಪರೂಪ ಎಂದು ಹಲವರು ಛೇಡಿಸಿದ್ದರೂ ಹೊಸ ಸಾಧನೆ
ಮಾಡಬೇಕೆಂಬ ಉತ್ಕಟ ಮನೋಬಲ ಇರುವಾಗ ಹೀಗೆ ಕೂಡುವುದು ಬೇಡ ಎಂದು ತಿಳಿದು ವಕೀಲ ವೃತ್ತಿಗೆ ಸೇರಿಕೊಂಡು ಆರಂಭದ ದಿನದಿಂದ ಇಂದಿನ ದಿನದವರೆಗೂ 43 ವರ್ಷಗಳವರೆಗೆ ತಿರುಗಿ ನೋಡಿಲ್ಲ ಹಾಗೂ ವೃತ್ತಿಯಲ್ಲಿ
ನ್ಯಾಯ ಕಲ್ಪಿಸಿಕೊಟ್ಟಿದ್ದೇನೆ ಎಂಬ ದೃಢ ವಿಶ್ವಾಸ ತಮ್ಮದಾಗಿದೆ ಎಂದರು.

ಪೊಲೀಸ್‌ ಇಲಾಖೆಯಲ್ಲಿ ಸ್ವಾಯತ್ತತೆ: ಪೊಲೀಸ್‌ ಇಲಾಖೆಯಲ್ಲಿ ರಾಜಕಾರಣದ ಹಸ್ತಕ್ಷೇಪ ನಿಲ್ಲಬೇಕು. ಮುಖ್ಯವಾಗಿ ಇಲಾಖೆ ಕಾರ್ಯದಲ್ಲಿ ಸ್ವಾಯತ್ತತೆ ಕಾರ್ಯರೂಪಕ್ಕೆ ಬರಬೇಕು. ಇತ್ತೀಚೆಗೆ ಸುಪ್ರೀಂಕೋರ್ಟ್‌ ಅಪರಾಧ ಹಿನ್ನೆಲೆಯುಳ್ಳವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಕುರಿತಾಗಿ ಶಾಸನ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ಶಾಸನ ಕಾರ್ಯರೂಪಕ್ಕೆ ಬಂದಲ್ಲಿ ಆಡಳಿತರೂಢ ಶಾಸಕರು ಎದುರಾಳಿ ಸ್ಪರ್ಧಿಸದ ಹಾಗೆ ಪ್ರಕರಣವೊಂದನ್ನು ದಾಖಲಿಸಿ ದೋಷಾರೋಪಣ ಪಟ್ಟಿ ರೂಪಿಸಬಹುದಾಗಿದೆ. ಒಟ್ಟಾರೆ ಐತಿಹಾಸಿಕ ಹಾಗೂ ಮಹತ್ವದ ತೀರ್ಪುಗಳನ್ನು ಸಂಶಯದಿಂದ ನೋಡುವಂತಾಗಿದೆ ಎಂದು ಮಂಗಾಣೆ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ, ಹಿರಿಯ ನ್ಯಾಯವಾದಿಗಳಾದ ಜಿ.ಡಿ.ಕುಲಕರ್ಣಿ, ಎಸ್‌.ಬಿ. ಹೀರಾಪುರ, ಎಂ.ಎಸ್‌.ಪಾಟೀಲ, ಎಸ್‌.ಎಸ್‌. ಸಂಗಾಪುರ, ಬಸವರಾಜ ಕೆ. ಬಿರಾದಾರ ಸೊನ್ನ, ಸುಭಾಷ ಬಿಜಾಪುರ, ಪ್ರಮುಖರಾದ ಗುಂಡಪ್ಪ ಹಾಗರಗಿ, ಶಿವರಾಜ ನಿಗ್ಗುಡಗಿ, ಎಚ್‌.ಬಿ ಧೋತ್ರೆ, ಸಂತೋಷ ಪಾಟೀಲ, ಶಿವರಾಜ ಅಂಡಗಿ, ಸಂಗೀತಾ ಕಟ್ಟಿ, ಕಸಾಪದ ಪದಾಧಿಕಾರಿಗಳಾದ ದೌಲತರಾವ ಪಾಟೀಲ, ಸೂರ್ಯಕಾಂತ ಪಾಟೀಲ ಮುಂತಾದವರಿದ್ದರು.

ತಾವು ವಕೀಲವೃತ್ತಿ ಆರಂಭಿಸಿದಾಗ ಇದ್ದ ನ್ಯಾಯಾಧೀಶರಿಗೂ ಇಂದಿನ ನ್ಯಾಯಾಧೀಶರಿಗೂ ಬಹಳಷ್ಟು ವ್ಯತ್ಯಾಸವಿದೆ. ಆಗಿನ ನ್ಯಾಯಾಧೀಶರಲ್ಲಿ ಯುವ ವಕೀಲರಿಗೆ ಪ್ರೋತ್ಸಾಹ ನೀಡುವ ಗುಣವಿತ್ತು. ಆದರೆ ಇಂದಿನ ನ್ಯಾಯಾಧೀಶರಲ್ಲಿ ಯುವ ವಕೀಲರಿಗೆ ಎದೆಗುಂದಿಸುವ ಗುಣವಿದೆ. ಮುಖ್ಯವಾಗಿ ಇಂದಿನ ನ್ಯಾಯಾಧೀಶರು ತಾವೇ ಶ್ರೇಷ್ಠ ಎಂಬ ಮನೋಭಾನೆ ತಳೆದಿದ್ದಾರೆ.
 ಬಾಬುರಾವ್‌ ಮಂಗಾಣೆ, ಹಿರಿಯ ನ್ಯಾಯವಾದಿ

Advertisement

Udayavani is now on Telegram. Click here to join our channel and stay updated with the latest news.

Next