ಚಿಕ್ಕಬಳ್ಳಾಪುರ: ಸರ್ಕಾರ ರೈತರಿಗೆ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ನೀಡದಿದ್ದರೆ, ವಿದ್ಯುತ್ ಕಚೇರಿಗಳಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾಜಿ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರೆಂಟ್ ಪಡೆಯುವುದು ನಮ್ಮ ಹಕ್ಕು, ಅಕ್ಕಿ ಪಡೆಯುವುದು ನಮ್ಮ ಹಕ್ಕು. ಕಾಂಗ್ರೆಸ್ ಸರ್ಕಾರ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಕರೆಂಟ್ ಕೊಡುವುದು ಸರ್ಕಾರದ ಕರ್ತವ್ಯ. ಅದು ಅವರದೇನು ಉಪಕಾರ ಅಲ್ಲ. ಈಗ ಇಂಧನ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳನ್ನು ಕೇಳಿ ಹೇಳುತ್ತಾರೆ. ನಾನು ಅಧಿಕಾರದಲ್ಲಿದ್ದಾಗ ವಿದ್ಯುತ್ ಇಲಾಖೆಗೆ ಹತ್ತು ಸಾವಿರ ಕೊಟಿ ರೂ. ನೀಡಿದ್ದೆ. ಇವರು ಯಾವುದೇ ಅನುದಾನ ನೀಡಿಲ್ಲ. ಅನುದಾನ ನೀಡಲು ಇವರ ಬಳಿ ಹಣ ಇಲ್ಲ. ಕಲ್ಲಿದ್ದಲು ಖರೀದಿಸಲು ಹಣ ಇಲ್ಲ. ಸರ್ಕಾರದವರು ರೈತರಿಗೆ ಕೇವಲ ಎರಡು ತಾಸು ಕರೆಂಟ್ ಕೊಡುತ್ತಿದ್ದಾರೆ. ಮೂರು ತಿಂಗಳಲ್ಲಿ ಎರಡು ಬಾರಿ ಕರೆಂಟ್ ಬಿಲ್ ಹೆಚ್ಚಿಸಿದ್ದು, ಇದು ರೈತ ವಿರೊಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಮೂರು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಇವರು ಸುಳ್ಳು ಹೇಳಿದ್ದಾರೆ. ಮೋಸ ಮಾಡಿದ್ದಾರೆ. ನಾವು ಡಿಸೆಂಬರ್ ವರೆಗೆ 10 ಕೆಜಿ ಅಕ್ಕಿ ಕೊಟ್ಟಿದ್ದೇವು. ನಂತರ ಐದು ಕೆಜಿ ಅಕ್ಕಿ ಒಂದು ಕೆಜಿ ರಾಗಿ ಕೊಟ್ಟೆವು. ಆದರೂ, ನಮಗೆ ಆಶೀರ್ವಾದ ಮಾಡಲಿಲ್ಲ. ಮೂರು ಕೆಜಿ ಕೊಡುವ ಇವರನ್ನು ಏನು ಮಾಡಬೇಕು. ಇವರ ವಿರುದ್ದ ಪ್ರತಿಭಟನೆ ಮಾಡಬೇಕೆ- ಬೇಡವಾ? ಗೃಹ ಲಕ್ಷ್ಮೀ ಕೊಡುವುದಾಗಿ ಹೇಳಿದ್ದರು. ಈಗ ಹೆಣ್ಣು ಮಕ್ಕಳು ಬ್ಯಾಂಕ್ ಮುಂದೆ ಕ್ಯೂ ನಿಲ್ಲುವಂತಾಗಿದೆ ಎಂದರು.
ಸರ್ಕಾರ ರೈತರಿಗೆ ನಿರಂತರವಾಗಿ ಏಳು ತಾಸು ಕರೆಂಟ್ ಕೊಡದಿದ್ದರೆ, ವಿದ್ಯುತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ. ನೀವು ಎಷ್ಟು ಜನರ ಮೇಲೆ ಕೇಸ್ ಹಾಕುತ್ತೀರಿ, ಎಷ್ಟು ಜನರನ್ನು ಜೈಲಿಗೆ ಹಾಕುತ್ತಿರಿ ನೀವೇ ಬಿಟ್ಟು ಕಳುಹಿಸಬೇಕು ಅಷ್ಟು ಜನ ಜೈಲಿಗೆ ಹೋಗುತ್ತೇವೆ ಎಂದು ಗುಡುಗಿದರು.
ಚಿಕ್ಕಬಳ್ಳಾಪುರ ದಲ್ಲಿ 1.50 ಲಕ್ಷ ಪಂಪ್ ಸೆಟ್ ಗಳಿವೆ ಅವರಿಗೆ ವಿದ್ಯುತ್ ಇಲ್ಲದಿರುವುದರಿಂದ ಎಲ್ಲ ಬೆಳೆ ಒಣಗುತ್ತಿದೆ. ಡಾ. ಸುಧಾಕರ್ ಅವರು ಹೊರಾಟ ಮಾಡಿ ಚಿಕ್ಕಬಳ್ಳಾಪುರಕ್ಕೆ ಹಾಲು ಉತ್ಪಾದಕರ ಒಕ್ಕೂಟ ತಂದಿದ್ದಾರೆ. ಅದನ್ನು ರಾಜಕೀಯ ಕಾರಣಕ್ಕೆ ಸ್ಥಗಿತಗೊಳಿಸಿದ್ದಾರೆ. ಮೆಡಿಕಲ್ ಕಾಲೇಜ್ ತಂದಿದ್ದಾರೆ. ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ ತಂದಿದ್ದಾರೆ. ಸುಧಾಕರ್ ಅವರು ಚುನಾವಣೆಯಲ್ಲಿ ಮೋಸಕ್ಕೆ ಬಲಿಯಾಗಿದ್ದಾರೆ. ಸೋಲು ಶಾಶ್ವತವಲ್ಲ, ಗೆಲುವು ಶಾಶ್ವತವಲ್ಲ. ಚಿಕ್ಕಬಳ್ಳಾಪುರಕ್ಕೆ ಶಾಸಕರು ಇದ್ದರೂ ಅನಾಥವಾಗಿದೆ. ಈಗಲೇ ಚುನಾವಣೆ ನಡೆದರೆ ಸುಧಾಕರ್ ಅವರು ಒಂದು ಲಕ್ಷ ಅಂತರದಿಂದ ಗೆಲುವು ಸಾಧಿಸುತ್ತಾರೆ. ಈ ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆರ್. ಅಶೋಕ್, ಡಾ. ಸುಧಾಕರ್, ಸಂಸದ ಮುನಿಸ್ವಾಮಿ ಹಾಜರಿದ್ದರು.