ಆಳಂದ: ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯಲ್ಲಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಲಾರಿಯೊಂದನ್ನು ತಡೆದು ಪೊಲೀಸರಿಗೆ ಒಪ್ಪಿಸಿದರೆ, ಪೊಲೀಸರು ದಾಖಲೆಗಳಲ್ಲವು ಸರಿಯಾಗಿದ್ದವು ಪರಿಶೀಲಿಸಿ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಖಜೂರಿ ಗಡಿಯಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಖಜೂರಿ ಗ್ರಾಮ ಘಟಕದ ಅಧ್ಯಕ್ಷ ಕುಮಾರ ಬಂಡೆ ನೇತೃತ್ವದಲ್ಲಿ ಕಾರ್ಯಕರ್ತರು ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ, ತಡೆದು ನಿಲ್ಲಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದರು.
ಲಾರಿಯಲ್ಲಿನ ಅಕ್ಕಿಯನ್ನು ಎಲ್ಲಿಂದ ಹಾಗೂ ಎಲ್ಲಿಗೆ ಪೂರೈಸಲಾಗುತ್ತಿತ್ತು ಎನ್ನುವ ಕುರಿತು ತನಿಖೆ ಕೈಗೊಳ್ಳಬೇಕು. ಇದರ ಹಿಂದೆ ದೊಡ್ಡ ಜಾಲವಿದ್ದು, ಸಮರ್ಪಕ ತನಿಖೆ ಆಗಬೇಕು ಎಂದು ಸಂಘಟಕರು ಆಗ್ರಹಿಸಿದರು.
ಸಂಘಟನೆಯ ಮುಖಂಡ ಶರಣು ಪಾಟೀಲ ಕೊಡಲಂಗರಗಾ, ಉಪಾಧ್ಯಕ್ಷ ಗುರು ಬಂಗರಗಿ ಹಾಗೂ ಖಜೂರಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಲಾರಿ ತಡೆ ಹಿಡಿಯುವ ಸಂದರ್ಭದಲ್ಲಿದ್ದರು.
ನೋಟಿಸ್ ಜಾರಿ: ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅಕ್ಕಿ ಲಾರಿ ಹಿಡಿದ ಬಗ್ಗೆ ತಿಳಿಸಿದಾಗ ಸಂಬಂಧಿತ ಆಹಾರ ಇಲಾಖೆ ಶಿರಸ್ತೇದಾರ ದತ್ತಪ್ಪ ಅವರನ್ನು ಪರಿಶೀಲನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಸ್ಥಳಕ್ಕೆ ಹೋದಾಗ ಲಾರಿಯೇ ಇರಲಿಲ್ಲ ಎಂದು ದತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ನೋಟಿಸ್
ನೀಡಲಾಗಿದೆ ಎಂದು ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ ತಿಳಿಸಿದ್ದಾರೆ.
ಸುಳ್ಳು: ತಡೆದ ಲಾರಿಗೆ ದಾಖಲೆಗಳಿವೆ. ಲಾರಿ ಸೊಲ್ಲಾಪುರದಿಂದ ಅಹ್ಮದಾಬಾದ್‌ಗೆ ಹೊರಟಿತ್ತು, ದಾಖಲೆ ಪರಿಶೀಲಿಸಿ ಬಿಡಲಾಗಿದೆ ಎಂದು ಪಿಎಸ್‌ಐ ಸುರೇಶ ಬಾಬು ತಿಳಿಸಿದ್ದಾರೆ.