ಚಿತ್ರದುರ್ಗ: ಕೃಷಿ ನಷ್ಟದ ವಲಯ ಎನ್ನುವ ಅಭಿಪ್ರಾಯ ಎಲ್ಲೆಡೆಯಿದ್ದು, ಶಿಸ್ತು ಬದ್ಧವಾಗಿ ಕೃಷಿ ಕಾಯಕದಲ್ಲಿ ತೊಡಗಿದರೆ ನಷ್ಟದ ಮಾತೆ ಬರುವುದಿಲ್ಲ ಎಂದು ಪ್ರಗತಿಪರ ರೈತ ಆರ್.ಎ. ದಯಾನಂದ ಮೂರ್ತಿ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕೃಷಿ ಕಾಯಕವನ್ನು ಪ್ರಮಾಣಿಕವಾಗಿ ಮಾಡಿದ್ದಲ್ಲದೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವುದಕ್ಕೆ ದುಬೈನಲ್ಲಿ ಇಂಡೋ ಗಲ್ಫ್ ಗೋಲ್ಡ್ ಮೆಡಲ್ ಅವಾರ್ಡ್ ನೀಡಲಾಗಿದೆ ಎಂದರು.
ರಷ್ಯಾ, ಥೈಲಾಂಡ್, ಅಬುದಾಬಿಯಲ್ಲಿ ಸುತ್ತಾಡಿ ಅಲ್ಲಿನ ಕೃಷಿ ಪದ್ಧತಿಯನ್ನು ವೀಕ್ಷಿಸಿ ಬಂದಿದ್ದೇನೆ. ಭೂಮಿ ತಾಯಿಯನ್ನು ನಂಬಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಬೇಸಾಯ ಮಾಡುತ್ತಿದ್ದೇನೆ. ಇನ್ನು ಹೆಚ್ಚು ಬೆಳೆಯಬೇಕೆಂಬ ಆಸೆಯಿದೆ. ಆದರೆ, ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶ ಮಳೆಯ ಕೊರತೆಯಿರುವುದರಿಂದ ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು ನೆಮ್ಮದಿಯ ಜೀವನ ಕಂಡುಕೊಳ್ಳಬೇಕೆ ವಿನಃ ಆತ್ಮಹತ್ಯೆಯಂತ ಕೆಟ್ಟ ಆಲೋಚನೆ ಮಾಡಬಾರದು ಎಂದು ರೈತರಲ್ಲಿ ಮನವಿ ಮಾಡಿದರು.
ಅಲ್ಪಸ್ವಲ್ಪ ಮಳೆಯಲ್ಲಿಯೇ ರೈತರು ಬೆಳೆಯುವ ಬೆಳೆಗೆ ಬೆಂಬಲ ಬೆಲೆ ಸಿಗದಂತಾಗಿದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ದೌರ್ಜನ್ಯ ತಡೆಗಟ್ಟಬೇಕಾಗಿದೆ. ರೈತರು ಪ್ರಾಮಾಣಿಕತೆಯಿಂದ ಕೃಷಿಯಲ್ಲಿ ತೊಡಗಿದರೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.
ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವುದನ್ನು ಕಂಡುಕೊಳ್ಳಬೇಕು. ದೇಶಕ್ಕೆ ಅನ್ನ ಕೊಡುವ ರೈತನೇ ಸತ್ತರೆ ಅನ್ನ ಬೆಳೆಯುವವರು ಯಾರು ಎನ್ನುವುದನ್ನು ಮೊದಲು ರೈತ ಅರ್ಥಮಾಡಿಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಮಿಶ್ರ ಸಮಗ್ರ ಕೃಷಿ ಸಾವಯವ ಪದ್ಧತಿಯಲ್ಲಿ ಹತ್ತು ಎಕರೆಯಲ್ಲಿ ಶೇಂಗಾ, ತೊಗರಿ, ಸೂರ್ಯಕಾಂತಿ, ಜೋಳ,
ಹಲಸಂದೆ ಬೆಳೆದಿದ್ದೇನೆ. ಇನ್ನು ಐದು ಎಕರೆಯಲ್ಲಿ ಅಡಿಕೆ, ತೆಂಗು, ಮಾವು, ಸಪೋಟ, ದಾಳಿಂಬೆ, ಪಪ್ಪಾಯಿ, ಸೀಬೆ, ನುಗ್ಗೆ, ಸೀತಾಫಲ, ಗೋಡಂಬಿ, ಮೋಸಂಬಿ, ಬದನೆ, ಜಂಬುನೇರಳೆ, ನಿಂಬೆ, ಮಲ್ಲಿಗೆ ಬೆಳೆದಿದ್ದೇನೆ, ಕೃಷಿ ಜತೆ ಕೋಳಿ, ಪಾರಿವಾಳ, ಮೊಲ, ಹಸು, ಎಮ್ಮೆ, ಕುದುರೆಯನ್ನು ಸಾಕಿಕೊಂಡಿದ್ದು, ಬೇರೆ ರೈತರಿಗೆ ಸ್ಪೂರ್ತಿಯಾಗಬೇಕೆಂಬುದು ನನ್ನ ಬಯಕೆ ಎಂದು ಹೇಳಿದರು.
ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ರೈತ ಮುಖಂಡ ಬಸ್ತಿಹಳ್ಳಿ ಸುರೇಶ್ ಬಾಬು, ನಾಗಪ್ಪ, ತಿಮ್ಮಣ್ಣ, ರುದ್ರಮುನಿಯಪ್ಪ, ಪಾಂಡುರಂಗಪ್ಪ ಇತರರು ಇದ್ದರು.