ಹೊಸದಿಲ್ಲಿ: ಒಂದು ವೇಳೆ ಭಾರತವು ತಾಂತ್ರಿಕವಾಗಿ ಸುಧಾರಿತವಾಗಿದ್ದಿದ್ದರೆ, ಬಾಲಕೋಟ್ ದಾಳಿಯ ಮರುದಿನ ನಡೆದ ಕಾದಾಟದಲ್ಲಿ ಪಾಕಿಸ್ಥಾನಕ್ಕೆ ಭಾರಿ ಹಾನಿ ಉಂಟುಮಾಡಬಹುದಿತ್ತು ಎಂದು ನೌಕಾಪಡೆಯ ವರದಿಯಲ್ಲಿ ಹೇಳಲಾಗಿದೆ. ಬಾಲಕೋಟ್ ದಾಳಿ ಹಾಗೂ ಅದರ ಮರುದಿನ ನಡೆದ ಘಟನೆಯ ಬಗ್ಗೆ ವಿಶ್ಲೇಷಣೆ ನಡೆಸಿದ ವರದಿಯಲ್ಲಿ ಈ ಮಹತ್ವದ ವಿವರಗಳನ್ನು ನೌಕಾಪಡೆ ಉಲ್ಲೇಖೀಸಿದೆ. 1999 ರಲ್ಲಿ ಕಾರ್ಗಿಲ್ ಯುದ್ಧದ ಅನಂತರ ಪಾಕಿಸ್ಥಾನ ನಿರಂತರವಾಗಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ನಾವು ಪಾಕಿಸ್ಥಾನಕ್ಕೆ ಸೂಕ್ತ ಪಾಠ ಕಲಿಸಲು ಸಾಧ್ಯವಾಗಿಲ್ಲ. ನಮಗೆ ತಾಂತ್ರಿಕವಾಗಿ ಹೆಚ್ಚುಗಾರಿಕೆ ಅಗತ್ಯವಿದ್ದು, ಇದರಿಂದ ನಮ್ಮ ಶತ್ರು ಗಡಿಯ ಬಳಿ ಸುಳಿಯಲೂ ಸಾಧ್ಯವಾಗದಂತಾಗುತ್ತದೆ. ಪಾಕಿಸ್ಥಾನದ ಬಳಿ ಎಫ್16 ಯುದ್ಧ ವಿಮಾನಗಳಿದ್ದು, ಇದರಲ್ಲಿ ಅಳವಡಿಸಲಾಗಿರುವ ಅಮ್ರಾಮ್ ಕ್ಷಿಣಿಯು ಭಾರತಕ್ಕಿಂತ ಪಾಕಿಸ್ಥಾನವನ್ನು ಉತ್ತಮ ಸ್ಥಾನದಲ್ಲಿರಿಸಿದೆ. ಹೀಗಾಗಿ ಭಾರತಕ್ಕೆ ಸದ್ಯ ಬಿವಿಆರ್‌ಎಎಎಂ ಕ್ಷಿಪಣಿ ಮತ್ತು ಎಸ್400 ಕ್ಷಿಪಣಿಗಳನ್ನು ಖರೀದಿಸಲು ಯೋಜಿಸಿದೆ ಎನ್ನಲಾಗಿದೆ.