Advertisement

ಅನುಮಾನವಿದ್ದರೆ ಅಗ್ನಿಪರೀಕ್ಷೆಯಾಗಲಿ

12:52 PM Dec 18, 2017 | |

ಬೆಂಗಳೂರು: ಇವಿಎಂ (ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷೀನ್‌) ಸಾಚಾತನ ಕುರಿತು ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. ಉತ್ತರ ಪ್ರದೇಶ ಚುನಾವಣೆ ನಂತರ ಈ ಬಗ್ಗೆ ವಾದ-ವಿವಾದಗಳು ತೀವ್ರ ಸ್ವರೂಪ ಪಡೆದಿವೆ. ಇವಿಎಂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ಹಾಗೂ ಇತರ ಪ್ರತಿಪಕ್ಷಗಳು, ಇವಿಎಂ ರದ್ದುಪಡಿಸಿ ಮತಪತ್ರ ಬಳಸುವಂತೆ ಆಗ್ರಹಿಸುತ್ತಿವೆ.

Advertisement

ಆದರೆ, ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಚುನಾವಣೆ ಸುಧಾರಣೆ ಕ್ರಮವಾಗಿ ಇವಿಎಂ ಬಳಕೆಯೇ ಮುಂದುವರಿಯಬೇಕು ಎಂದಿದೆ. ಈ ಮಧ್ಯೆ ರಾಜ್ಯ ವಿಧಾನಸಭೆ ಚುನಾವಣೆಗೆ ಇವಿಎಂ ಯಂತ್ರದ ಬಳಕೆ ಬೇಡ ಎಂಬ ಇಂಗಿತವನ್ನು ಸತ್ವಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ರಾಜ್ಯದಲ್ಲೂ ಇವಿಎಂ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಇವಿಎಂ ಬೇಕೋ ಬೇಡವೋ ಎಂಬ ಕುರಿತು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮತ್ತು ರಾಜ್ಯದ ಯುವಜನತೆ ಅಭಿಪ್ರಾಯ ಸಂಗ್ರಹಿಸಿದೆ.

ಬೆಳವಣಿಗೆಗಳು ಅನುಮಾನ ಮೂಡಿಸುತ್ತಿವೆ
ಮತಯಂತ್ರಗಳು ಮಾನವ ಸೃಷ್ಟಿಯಾಗಿರುವುದರಿಂದ ಯಂತ್ರಗಳ ದುರುಪಯೋಗವಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಪರ-ವಿರೋಧ ಹೇಳಿಕೆ ನೀಡುವುದಕ್ಕಿಂತ ಇವಿಎಂ ತಿರುಚಲು ಸಾಧ್ಯವೇ? ಇವಿಎಂಗಳಿಗೆ ಅಳವಡಿಸುವ ಚಿಪ್‌ಗ್ಳ ಮೂಲಕ ದುರ್ಬಳಕೆ ಸಾಧ್ಯವಿದೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ತಂತ್ರಜ್ಞರೊಂದಿಗೆ ಸಮಗ್ರ ಚರ್ಚೆಯಾಗಬೇಕು.

ಚಿಪ್‌ಗ್ಳ ತಯಾರಿಕೆ ಹಾಗೂ ಗೌಪ್ಯತೆ ಹೇಗೆ ಎಂಬ ಬಗ್ಗೆ ಪಾರದರ್ಶಕತೆ ಬೇಕಿದೆ. ಮತ್ತೂಂದೆಡೆ ಮತದಾನದ ನಂತರ ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ಮರುಪರಿಶೀಲಿಸುವ ವ್ಯವಸ್ಥೆ ಇವಿಎಂಗಳಲ್ಲೇ ಇದೆ. ಆದರೆ, ನಮ್ಮಲ್ಲಿ ಸಾಕಷ್ಟು ಅನಕ್ಷರಸ್ಥರು ಇರುವುದರಿಂದ, ಜತೆಗೆ ಮತದಾನದ ನಂತರ ಪರಿಶೀಲಿಸುವ ವ್ಯವದಾನ ಬಹುತೇಕರಿಗೆ ಇಲ್ಲದಿರುವ ಕಾರಣ ಯಾರೂ ಪರಿಶೀಲನೆ ಗೋಜಿಗೆ ಹೋಗುತ್ತಿಲ್ಲ.

Advertisement

ಈ ಬಾರಿ ಗುಜರಾತ್‌ ಚುನಾವಣೆ ದಿನಾಂಕ ನಿಗದಿ, ಒಂದೇ ರಾಜ್ಯದವರು ಆಯೋಗದ ಅಧಿಕಾರಿಗಳಾಗಿ ನೇಮಕಗೊಂಡಿರುವುದು ಸೇರಿ ಹಲವು ಬೆಳವಣಿಗೆ ಗಮನಿಸಿದರೆ ಅನುಮಾನ ಮೂಡುತ್ತಿದೆ. ಆಯೋಗ, ಜನರ ಅನುಮಾನ ನಿವಾರಿಸಬೇಕು. ಬಿಜೆಪಿ ಕೂಡ ಮತಪತ್ರ ಬಳಸಿಯೇ ಚುನಾವಣೆ ನಡೆಯಲಿ ಎನ್ನುವ ಮೂಲಕ ಅನುಮಾನಕ್ಕೆ ತೆರೆ ಎಳೆಯಬೇಕು. 
-ಬಿ.ಎಲ್‌.ಶಂಕರ್‌, ಕಾಂಗ್ರೆಸ್‌ ವಕ್ತಾರರು

***
ಸೋಲಿಗೆ ಮೊದಲೇ ನಿರೀಕ್ಷಣಾ ಜಾಮೀನು!

ಚುನಾವಣೆ ವ್ಯವಸ್ಥೆ ಸುಧಾರಣೆಯ ಭಾಗವಾಗಿ ಇವಿಎಂ ಬಳಕೆಗೆ ಬಂದಿದೆ. ತಾವು ಗೆದ್ದಾಗ, ತಮಗೆ ಸಹಾಯವಾದಾಗ ಇವಿಎಂ ಇರಲಿ ಎಂದು, ಸೋತಾಗ ಇವಿಎಂ ಬೇಡ ಎಂದು ಹೇಳುವುದು ಒಪ್ಪುವ ವಾದವಲ್ಲ. ಅದರಲ್ಲೂ  ಕಾಂಗ್ರೆಸ್‌ ರೀತಿಯ ಪಕ್ವ ರಾಜಕೀಯ ಪಕ್ಷ ಹಾಗೂ ಪರಿಪಕ್ವ ರಾಜಕಾರಣಿ ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಆರೋಪಿಸುತ್ತಿರುವುದು ಬಾಲಿಶತನ.

ಗುಜರಾತ್‌ನ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲುವುದಿಲ್ಲ, ಕಾಂಗ್ರೆಸ್‌ ಸಹ ಒಂದಷ್ಟು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತದೆ. ಆಗ ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳ ಇವಿಎಂ ಸರಿ ಇತ್ತು, ಬಿಜೆಪಿ ಗೆದ್ದ ಕ್ಷೇತ್ರಗಳ ಇವಿಎಂ ಸರಿ ಇಲ್ಲ ಎಂದು ಅರ್ಥವೇ? ಪಂಜಾಬ್‌ನಲ್ಲಿ ಚುನಾವಣೆ ನಡೆದು ಕಾಂಗ್ರೆಸ್‌ ಗೆದ್ದಿತು. ಅಲ್ಲಿನ ಇವಿಎಂಗಳು ಸರಿ, ಬಿಜೆಪಿ ಗೆದ್ದ ಉತ್ತರ ಪ್ರದೇಶದಲ್ಲಿ ಇವಿಎಂ ಸರಿ ಇರಲಿಲ್ಲ ಎಂದು ಹೇಳುವುದು ಎಷ್ಟು ಸೂಕ್ತ.

ಗುಜರಾತ್‌ ಚುನಾವಣೆ ನಂತರ ಇಂತಹ ಮಾತುಗಳು ಕೇಳಿಬರುತ್ತಿರುವುದು ನೋಡಿದರೆ ಕಾಂಗ್ರೆಸ್‌ನವರು ತಮ್ಮ ಸೋಲಿಗೆ ಮೊದಲೇ ನಿರೀಕ್ಷಣಾ ಜಾಮೀನು ಪಡೆದಂತಿದೆ. ಆನ್‌ಲೈನ್‌ ವೋಟಿಂಗ್‌ ಕುರಿತು ಚರ್ಚೆಗಳು ನಡೆಯುತ್ತಿರುವ ಈ ಹಂತದಲ್ಲಿ ಇವಿಎಂ ವ್ಯವಸ್ಥೆ ಬೇಡ, ಮತಪತ್ರವೇ ಬೇಕು ಎನ್ನುವ ಮೂಲಕ ದೇಶವನ್ನು ಮತ್ತೆ ಹಿಂದಕ್ಕೆ ಕರೆದೊಯ್ಯುವುದು ಬೇಡ.
-ಎಸ್‌.ಸುರೇಶ್‌ಕುಮಾರ್‌, ಬಿಜೆಪಿ ವಕ್ತಾರರು

***

ಕಾಂಗ್ರೆಸ್‌ನಿಂದಲೂ ಇವಿಎಂ ದುರುಪಯೋಗ
ಇವಿಎಂಗಳ ದುರುಪಯೋಗ 100ಕ್ಕೆ 100ರಷ್ಟು ಸತ್ಯ. ಇದರಲ್ಲಿ ಯಾವುದೇ ಅನುಮಾನ ಬೇಡ. ದುರಂತ ಎಂದರೆ  ಈ ಹಿಂದೆ ಕಾಂಗ್ರೆಸ್‌ ಸಹ ಇವಿಎಂಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ನಿಜ. 2008 ರಲ್ಲೇ ಜೆಡಿಎಸ್‌ ಇವಿಎಂಗಳ ಬದಲು ಮತಪತ್ರಗಳ ಬಳಕೆ ಸೂಕ್ತ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಇದೀಗ ದೇಶಾದ್ಯಂತ ಇವಿಎಂಗಳ ಬಳಕೆ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಇವಿಎಂಗಳ ಬಗ್ಗೆ ಮತದಾರರೇ ಅನುಮಾನ ವ್ಯಕ್ತಪಡಿಸುವಾಗ ಬಿಜೆಪಿ ಏಕೆ ಯಂತ್ರವೇ ಬೇಕು ಎಂದು ಹಠ ಹಿಡಿಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪಾರದರ್ಶಕ ವ್ಯವಸ್ಥೆಯಡಿ ಚುನಾವಣೆ ನಡೆಯಲಿ ಎಂಬುದಾದರೆ ಜನರ ಒತ್ತಾಯ ಇದ್ದರೆ ಮತಪತ್ರಗಳ ಮೂಲಕವೇ ಆಗಲಿ ಎಂದು ಪರೀಕ್ಷೆಗೆ ಒಡ್ಡಿಕೊಳ್ಳಬಹುದಿತ್ತು. ಮತಪತ್ರಗಳು ಇದ್ದಾಗ ಬೂತ್‌ ಕ್ಯಾಪರ್‌ ನಡೆಯುತ್ತಿತ್ತು.

ಮತಪತ್ರ ಹರಿದು ಹಾಕಲಾಗುತ್ತಿತ್ತು. ಎಂಬೆಲ್ಲಾ ದೂರುಗಳಿದ್ದವು ನಿಜ. ಆದರೆ, ಆಗಿನ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದೀಗ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಭದ್ರತೆ ಇರುವುದರಿಂದ ಆ ರೀತಿ ಮಾಡಲಾಗದು. ಹೀಗಾಗಿ, ಇವಿಎಂಗಳ ಬದಲು ಮತಪತ್ರಗಳ ಬಳಕೆಯೇ ಸೂಕ್ತ.
-ರಮೇಶ್‌ಬಾಬು, ವಿಧಾನ ಪರಿಷತ್‌ ಸದಸ್ಯ (ಜೆಡಿಎಸ್‌)

***
ಹಣ ಬಲ, ತೋಳ್ಬಲ ತಪ್ಪಿಸಲು ವಾರದಲ್ಲಿ ಚುನಾವಣೆ ಮುಗಿಸಿ

ದೇಶದಲ್ಲಿ 70 ವರ್ಷಗಳಿಂದಲೂ ಚುನಾವಣೆ ಸುಧಾರಣೆ ಆಗುತ್ತಲೇ ಇದೆ. ಇವಿಎಂಗಳ ಸ್ಪಷ್ಟತೆ, ನಿಖರತೆ ಬಗ್ಗೆ ಇತ್ತೀಚೆಗೆ ಅನುಮಾನಗಳು ವ್ಯಕ್ತವಾಗಿದೆ. ಇವಿಎಂಗಳ ನಿಯಂತ್ರಣ ವ್ಯವಸ್ಥೆ ಬೇರೆಲ್ಲೋ ಇದ್ದಾಗ ತಪ್ಪೇ ಆಗುವುದಿಲ್ಲ ಅಥವಾ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗದು. ಅನುಮಾನ ವ್ಯಕ್ತವಾದಾಗ ಅದಕ್ಕೆ ಪರಿಹಾರ ಹುಡುಕಬೇಕೇ ವಿನಾ ವಿತಂಡವಾದ ಮಾಡಬಾರದು.

ಚುನಾವಣೆ ಪದ್ಧತಿ ಸುಧಾರಣೆ ನಿರಂತರ ಪ್ರಕ್ರಿಯೆ. ಈಗ ಮಾಡಿದ್ದಾಗಿದೆ ಇದನ್ನೇ ಒಪ್ಪಿಕೊಳ್ಳಿ ಎಂದು ಹೇಳುವುದು ಸರಿಯಲ್ಲ. ಇವಿಎಂಗಳ ಬಗ್ಗೆ ಅನುಮಾನ ಇರುವುದರಿಂದ ಮತಪತ್ರ ಬಳಕೆ ಬಗ್ಗೆ ಚುನಾವಣೆ ಆಯೋಗ ಗಂಭೀರ ಚಿಂತನೆ ನಡೆಸಬೇಕು. ಚುನಾವಣೆಯಲ್ಲಿ ಭ್ರಷ್ಟಾಚಾರ, ಹಣ ಬಲ, ತೋಳ್ಬಲ ತಪ್ಪಿಸಲು ಒಂದು ವಾರದೊಳಗೆ ಇಡೀ ಚುನಾವಣೆ ಪ್ರಕ್ರಿಯೆ ಮುಗಿಸುವ ವ್ಯವಸ್ಥೆ ಜಾರಿಗೊಳಿಸಬೇಕು.

ನಾಮಪತ್ರ ಸಲ್ಲಿಕೆಗೆ ಎರಡು ದಿನ, ನಾಮಪತ್ರ ಪರಿಶೀಲನೆ ಮತ್ತು ವಾಪಸಾತಿಗೆ ಒಂದು ದಿನ. ಎರಡು ಅಥವಾ ಮೂರು ದಿನ ಮಾತ್ರ ಪ್ರಚಾರಕ್ಕೆ ಅವಕಾಶ ನೀಡಿ, ಪ್ರಚಾರ ಉಸ್ತುವಾರಿಯನ್ನೂ ಆಯೋಗವೇ ನೋಡಿಕೊಳ್ಳಬೇಕು. ಮತದಾನಕ್ಕೆ ಒಂದು ದಿನ ಅವಕಾಶ ನೀಡಬೇಕು. ಆಗ ನಿಜವಾಗಿಯೂ ಪಾರದರ್ಶಕ ಚುನಾವಣೆ ಸಾಧ್ಯ.
-ವಿ.ಎಸ್‌.ಉಗ್ರಪ್ಪ, ವಿಧಾನ ಪರಿಷತ್‌ ಸದಸ್ಯ (ಕಾಂಗ್ರೆಸ್‌)

ಇವಿಎಂ ಬಗ್ಗೆ ಅಪನಂಬಿಕೆ ಚರ್ಚೆ ಹೆಚ್ಚಾಗಿದೆ. ಚುನಾವಣೆ ಹೇಗೆ ನಡೆಯಬೇಕು ಎಂಬುದನ್ನು ಜನ ನಿರ್ಧರಿಸಬೇಕು. ಇವಿಎಂನಲ್ಲಿ ಅನ್ಯಾಯ ಮಾಡಲು ಸಾಧ್ಯವಿಲ್ಲ ಎಂದು ಖಾತ್ರಿಪಡಿಸಬೇಕು ಅಥವಾ ಜನ ಬಯಸಿದರೆ ಮತ ಪತ್ರದ ಮೂಲಕ ಚುನಾವಣೆ ನಡೆಸಿದರೂ ತಪ್ಪಿಲ್ಲ. ಜನರ ಆಶೋತ್ತರಕ್ಕೆ ಮನ್ನಣೆ ನೀಡಬೇಕು.
-ಎಂ.ಮಹೇಶ್‌ ಕುಮಾರ್‌, ಆರ್ಥಿಕ ಸಲಹೆಗಾರ

ತಂತ್ರಜ್ಞಾನದ ಬಗ್ಗೆ ನಂಬಿಕೆ ಇರಬೇಕು. ಎಲ್ಲರ ಮತ ಒಂದೇ ಪಕ್ಷಕ್ಕೆ ಬೀಳುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಇವಿಎಂ ವಿರೋಧಿಸುವವರು ಅದನ್ನು ಸಾಬೀತುಪಡಿಸಿದರೆ ಮತಪತ್ರದ ಮೂಲಕ ಚುನಾವಣೆ ಮಾಡಬಹುದು. ತಂತ್ರಜ್ಞಾನ ಬಳಸಿಕೊಳ್ಳುವುದರಿಂದ ಸಮಯ ಹಾಗೂ ಶ್ರಮದ ಉಳಿಯವಾಗುತ್ತದೆ.
-ಸತೀಶ್‌ ನಾಯ್ಕ ಸಾಮೇತಡ್ಕ, ಖಾಸಗಿ ಸಂಸ್ಥೆಯಲ್ಲಿ ಎಚ್‌ಆರ್‌

ಆಧುನಿಕ ಯುಗದಲ್ಲೂ ಹಳೇ ಪದ್ಧತಿ ಬೇಕೆನ್ನುವುದು ಸರಿಯಲ್ಲ. ಆಧುನಿಕತೆಗೆ ತಕ್ಕ ತಂತ್ರಜ್ಞಾನ ಬಳಸಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಚುನಾವಣೆ ಅತಿ ಅವಶ್ಯಕ. ಹೀಗಾಗಿ ವಿಶ್ವಾಸಾರ್ಹತೆಯೂ ಇರಬೇಕು. ಇವಿಎಂನಲ್ಲಿ ನಿಜವಾಗಿಯೂ ಲೋಪ ಇದ್ದರೆ ಅದನ್ನು ಸರಿಪಡಿಸಲೇಬೇಕು.
-ಸುಕುಮಾರ, ದೈಹಿಕ ಶಿಕ್ಷಣ ಶಿಕ್ಷಕ

ದೇಶದ ಚುನಾವಣೆ ಪ್ರಕ್ರಿಯೆಯನ್ನೇ ಸರಳ, ನಂಬಿಕೆಗೆ ಅರ್ಹಗೊಳಿಸಿದ ಇವಿಎಂ ಬಗೆಗೇ ಪೂರ್ವಗ್ರಹವಿದೆ. ರಾಜಕೀಯ ಸ್ವಾರ್ಥಕ್ಕಾಗಿ ಚುನಾವಣೆ ಆಯೋಗದ ಗೌರವ ಕುಂದಿಸುವ ಕೆಲಸ ಬೇಡ. ಇವಿಎಂ ಮೇಲಿನ ಆಪಾಧನೆಯನ್ನು ಈವರೆಗೂ ಯಾರೂ ಸಾಬೀತು ಪಡಿಸಿಲ್ಲ. ಹೀಗಾಗಿ ಇವಿಎಂ ಬಳಕೆ ಇರಲಿ.
-ಡಾ.ರೋಹಿಣಾಕ್ಷ ಶಿರ್ಲಾಲು, ಉಪನ್ಯಾಸಕ

ತಂತ್ರಜ್ಞಾನ ಯುಗದಲ್ಲಿದ್ದೇವೆ. ಡಿಜಿಟಲ್‌ ಇಂಡಿಯಾದ ಬಗ್ಗೆ ಮಾತನಾಡುತ್ತೇವೆ. ವಿಇಎಂ ಬದಲಿಗೆ ಮತ ಪತ್ರ ಬಳಕೆ ಮಾಡುವುದು ಎಷ್ಟು ಸರಿ. ಆಧುನಿಕತೆಗೆ ಹೊಂದಿಕೊಳ್ಳುವುದು ಬೇಡವೇ? ಆರೋಪಿಸುವುದಕ್ಕಿಂತ ಸಾಕ್ಷಿ ಸಮೇತ ಸಾಬೀತುಪಡಿಸಿದರೆ ಉತ್ತಮ.
-ನಾಗರಾಜ್‌ ನಾೖರಿ, ಸಹಕಾರಿ ಬ್ಯಾಂಕ್‌ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next